ಕನ್ನಡಪ್ರಭ ವಾರ್ತೆ ನವದೆಹಲಿ
ಗುರುವಾರ ಮಧ್ಯಾಹ್ನ ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ರೈಲ್ವೆ ಸಚಿವರ ಜತೆ ಚರ್ಚೆ ನಡೆಸಿದ ಕುಮಾರಸ್ವಾಮಿ, ಮುಖ್ಯವಾಗಿ ಬೆಂಗಳೂರು ನಗರದಿಂದ ಮೈಸೂರು ನಡುವೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಾರ್ವಜನಿಕರ ರೈಲ್ವೆ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು.
ಬೆಂಗಳೂರು- ಮಂಗಳೂರು - ಮುರುಡೇಶ್ವರ ನಡುವೆ ಸಂಚರಿಸುವ ರೈಲು (ರೈಲು ಸಂಖ್ಯೆ 16585) ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ಮಾಡಬೇಕು ಎಂದು ಕೋರಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಸಚಿವರು ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.ಇನ್ನು ಮದ್ದೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣಿ ಹೆಚ್ಚಾಗಿದೆ. ನಿಲ್ದಾಣವನ್ನು ಆಧುನೀಕರಿಸಿ ಮೇಲ್ದರ್ಜೆಗೆ ಏರಿಸಬೇಕು. ಮಂಡ್ಯ-ಮೇಲುಕೋಟೆ ರಸ್ತೆಯ ವಿ.ಸಿ ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಮನವಿ ಮಾಡಿದರು. ಅಲ್ಲದೆ ಮಂಡ್ಯದಿಂದ ತೂಬಿನಕೆರೆ, ಪಾಂಡವಪುರದಿಂದ ಕೆ.ಆರ್.ಎಸ್. ಮತ್ತು ಕೆ.ಆರ್.ಪೇಟೆ ಮತ್ತು ಮಡಿಕೇರಿ ಕಡೆಗೆ ಪ್ರಯಾಣಿಸುವ ವಾಹನಗಳು ದೊಡ್ಡಬ್ಯಾಡರಹಳ್ಳಿಯ ಲೆವೆಲ್ ಕ್ರಾಸಿಂಗ್‌ನಲ್ಲಿ ಅಡಚಣೆ ಎದುರಿಸುತ್ತಿವೆ. ಹಾಗಾಗಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.ಪಾಂಡವಪುರ ಪಟ್ಟಣವು ಕೆ.ಆರ್. ಪೇಟೆ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ವ್ಯಾಪಾರ ಕೇಂದ್ರ ಸ್ಥಾನವಾಗಿದ್ದು, ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ ಮಾಡಬೇಕು. ಮದ್ದೂರು ತಾಲೂಕಿನ ಹನಕೆರೆ ಗ್ರಾಮದ ಬಳಿ ಇರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 60) ಅನ್ನು ಮೇಲ್ದರ್ಜೆಗೆ ಏರಿಸಬೇಕು. ಚನ್ನಪಟ್ಟಣದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮಾಡುವುದು ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಮಂಡ್ಯ ಜಿಲ್ಲೆಯ ನೊಡೇಕೊಪ್ಪಲು ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣದ ಬಗ್ಗೆ ಕೂಡ ಮನವಿ ಸಲ್ಲಿಸಿದರು. ಅಲ್ಲದೆ ಮಂಗಳೂರು ಮತ್ತು ಹಾಸನ ಮಾರ್ಗವಾಗಿ ಮುಂಬಯಿ- ಬೆಂಗಳೂರು-ಮುಂಬಯಿ ನಗರಗಳಿಗೆ ಸಂಪರ್ಕಿಸಲು ಹೊಸ ರೈಲು ಮಂಜೂರು ಮಾಡುವಂತೆ ಕೋರಿದರು.