ಚನ್ನಪಟ್ಟಣ: ತಾಲೂಕಿನ ಹಲವು ಭಾಗದಲ್ಲಿ ಕೆಲ ಕೆರೆಗಳಲ್ಲಿ ನೀರು ಭರ್ತಿಯಾಗಿಲ್ಲ. ಹಲವು ಕೆರೆಗಳಲ್ಲಿ ನೀರಿಲ್ಲ. ಕಳೆದ ಆರೇಳು ವರ್ಷಗಳ ಕಾಲ ಕ್ಷೇತ್ರದ ಶಾಸಕರಾಗಿದ್ದ ಕುಮಾರಸ್ವಾಮಿ ಮಾಡಿದ ಅಧ್ವಾನದ ಫಲ ಅನುಭವಿಸುತ್ತಿದ್ದೇವೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದರು.
ತಾಲೂಕಿನ ಮಾಕಳಿ ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಸಾಕಷ್ಟು ಶ್ರಮ ವಹಿಸಿ ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದೆ. ದುರದೃಷ್ಟವಶಾತ್ ನಾನು ಸೋತೆ. ಆ ವೇಳೆ ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಕಷ್ಟು ಲೋಪದೋಷ ಆಗಿದೆ. ಕೆಲವೆಡೆ ಪೈಪ್‌ಲೈನ್ ಕಾಮಗಾರಿ ಕಳಪೆಯಾಗಿದೆ. ಲೋಪದೋಷ ಇದ್ದರೂ ಸಹ ಕೆರೆಗಳಿಗೆ ನೀರು ಹರಿಯುತ್ತಿದೆ. ಕೆರೆಗಳಿಗೆ ನೀರು ಬಂದರೂ ಸಹ ನೀರು ನಿಲ್ಲುತ್ತಿಲ್ಲ. ಕೆಲವೆಡೆ ಏರಿಗಳು ಒಡೆದಿದ್ದು, ಅದನ್ನು ಸರಿಪಡಿಸಬೇಕಿದೆ. ಈ ಭಾಗದ ಆರೇಳು ಕೆರೆಗಳ ತೂಬು, ಕಾಲುವೆಗಳನ್ನು ದುರಸ್ತಿಪಡಿಸುವ ನಿಟ್ಟಿನಲ್ಲಿ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಎಂದರು.ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸತ್ತೆಗಾಲ ಯೋಜನೆ ಕಾರ್ಯಗತವಾಗಿದ್ದು, ಅದರಿಂದ ಇಗ್ಗಲೂರು ಕೆರೆಗೆ ನಿರಂತರ ನೀರು ಹರಿಯಲಿದೆ. ಯೋಜನೆ ಪೂರ್ಣಗೊಂಡರೆ ಕಾವೇರಿ ಹರಿಯುವಾಗಲೆಲ್ಲ ನಮಗೂ ನೀರು ಹರಿಯಲಿದೆ. ನನ್ನ ಅವಧಿಯಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಎಲ್ಲ ಕೆರೆಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೆ ಎಂದರು.
ರೈತರು ಬೆಳೆವ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ಆ ಉತ್ಪನ್ನಗಳು ರಫ್ತಾಗಬೇಕು. ನೀರಾವರಿ ಆದರೆ ಸಾಲದು ರೈತರ ಆದಾಯ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ನೀರಾ ಉತ್ಪನ್ನಗಳನ್ನು ಉತ್ತೇಜಿಸುವ ಯೋಜನೆ ರೂಪಿಸಲಾಗಿದೆ. ಹಾಲು ಉತ್ಪಾದನೆಯಲ್ಲಿ ತಾಲೂಕು ಮೊದಲ ಸ್ಥಾನದಲ್ಲಿದೆ. ಅದಕ್ಕೆ ನೀರಾವರಿ ಯೋಜನೆ ಕಾರಣ. ಅಭಿವೃದ್ಧಿ ವಿಚಾರ ಬಂದಾಗ ಸೋತಾದರೂ ಸರಿ ಕೆಲಸ ಮಾಡಬೇಕು. ರಾಜಕೀಯ ಎಲ್ಲ ಮುಗಿಯಿತು. ಇನ್ನೇದಿದ್ದರೂ ಅಭಿವೃದ್ಧಿ ಮಾತ್ರ ಎಂದರು.ಮಾಕಳಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಬಾಗಿನ ಅರ್ಪಿಸಲು ಆಗಮಿಸಿದ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಪೂರ್ಣಕುಂಭದ ಸ್ವಾಗತ ನೀಡಲಾಯಿತು. ಗ್ರಾಮದ ಬಳಿಯಿಂದ ಕೆರೆಯವರೆಗೆ ಎತ್ತಿನಗಾಡಿ ಮೆರವಣಿಗೆಯಲ್ಲಿ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನಿಲ್, ಬಮೂಲ್ ಮಾಜಿ ನಿರ್ದೇಶಕ ಲಿಂಗೇಶ್ ಕುಮಾರ್, ಮುಖಂಡರಾದ ರಮೇಶ್, ಕರಣ್ ಆನಂದ, ಲಾಯರ್ ಹನುಮಂತು ಇತರರಿದ್ದರು.ಪೊಟೋ೧೩ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಪಂ ಕೆರೆಗಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಶಾಸಕ ಯೋಗೇಶ್ವರ್ ಅವರನ್ನು ಸನ್ಮಾನಿಸಲಾಯಿತು.