ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿರವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆಂದು ಹಗುರವಾಗಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಕುಟುಂಬದವರು ಕೇತಗಾನಹಳ್ಳಿ ತೋಟದಲ್ಲಿ ಆಲೂಗಡ್ಡೆ, ಬದನೆಕಾಯಿ ಬೆಳೆದು ನೂರಾರು ಕೋಟಿ ಸಂಪಾದನೆ ಮಾಡಿದ್ದಾರಾ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಕೆ.ರಾಜು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಕುಟುಂಬದವರು ನೂರಾರು ಕೋಟಿ ರುಪಾಯಿ ಆಸ್ತಿ ಸಂಪಾದನೆ ಮಾಡಿದರೂ ಅವರೆಲ್ಲರು ಸತ್ಯಹರಿಶ್ಚಂದ್ರರು. ಬೇರೆಯವರು ಆಸ್ತಿ ಮಾಡಿದರೆ ಲೂಟಿಕೋರರು. ಕೇತಗಾನಹಳ್ಳಿ ತೋಟದಲ್ಲಿ ಆಲೂಗಡ್ಡೆ ಮತ್ತು ಬದನೆಕಾಯಿ ಬೆಳೆದು ಹೇಗೆ ನೂರಾರು ಕೋಟಿ ಸಂಪಾದನೆ ಮಾಡಬಹುದು ಎಂಬುದನ್ನು ರೈತರಿಗೂ ಹೇಳಿಕೊಡಲಿ ಎಂದು ಲೇವಡಿ ಮಾಡಿದರು.
ರೈತನ ಮಗ ಅಂತ ಹೇಳಿಕೊಂಡು ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿಯಾದರು. ಈ ಎರಡೂ ಕ್ಷೇತ್ರಗಳಲ್ಲಿ ಒಂದೇ ಒಂದು ನೀರಾವರಿ ಯೋಜನೆ ಜಾರಿಗೆ ತರಲಿಲ್ಲ. ರೈತರನ್ನು ಉದ್ಧಾರ ಮಾಡಲು ಜನ್ಮ ತಾಳಿರುವ ದೇವೇಗೌಡರ ಕುಟುಂಬದ ಮಗ ಮಾಡಲಾಗದ ನೀರಾವರಿ ಕೆಲಸವನ್ನು ಸಾಮಾನ್ಯ ಶಿಕ್ಷಕನ ಮಗನಾದ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಡಿ ತೋರಿಸಿದ್ದಾರೆ ಎಂದರು.ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಅನುಭವದ ಕೊರತೆಯಿಂದ ಬಿಡದಿ ಟೌನ್ ಶಿಪ್ ಘೋಷಣೆ ಮಾಡಿದ್ದರೆಂದು ಒಪ್ಪಿಕೊಳ್ಳೋಣ. 2018ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗಲಾದರು ಟೌನ್ ಶಿಪ್ ಯೋಜನೆ ಕೈಬಿಟ್ಟು ಏಕೆ ರೈತರ ಹಿತ ಕಾಪಾಡಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ 19 ವರ್ಷಗಳಿಂದ ಭೂಮಿ ಮಾರಾಟ ಮಾಡಲಾಗದೆ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ನ್ಯಾಯ ಒದಗಿಸಬೇಕೆಂದು ಟೌನ್ ಶಿಪ್ ಯೋಜನೆಗೆ ವೇಗ ನೀಡಿದೆ.
ರೈತರಿಗೆ ಅನ್ಯಾಯ ಮಾಡಿದ್ದು ಡಿಕೆಶಿ ಅಲ್ಲ ಎಚ್ಡಿಕೆ :
ಡಿ.ಕೆ.ಶಿವಕುಮಾರ್ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ರೈತರ ಭೂಮಿ ಕಸಿದುಕೊಳ್ಳಲು ಹೊರಟಿಲ್ಲ. ಬದಲಿಗೆ ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯಯುತವಾದ ಬೆಲೆ ಕೊಡಿಸಲು ಹೋರಾಟ ಮಾಡುತ್ತಿದ್ದಾರೆ. ಆ ಭಾಗದ ರೈತರಿಗೆ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆಯೇ ಹೊರತು ಡಿ.ಕೆ.ಶಿವಕುಮಾರ್ ಅಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ನಿಜಾಮುದ್ದೀನ್, ಆಯಿಷಾ ಬಾನು, ಕೆಪಿಸಿಸಿ ಸದಸ್ಯ ರಮೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಎಚ್. ರಾಜು, ಮುಖಂಡರಾದ ನರಸಿಂಹಮೂರ್ತಿ, ಜಯಣ್ಣ, ಪ್ರಾಣೇಶ್, ಸಿಎನ್ ಆರ್ ಗಂಗಾಧರ್, ಪರ್ವೀಜ್ ಪಾಷ, ಪ್ರಭು, ರೈಡ್ ನಾಗರಾಜ್, ಬೈರೇಗೌಡ, ಕೆ.ರವಿ, ಗುರುಪ್ರಸಾದ್, ಗಿರೀಶ್, ರಂಜಿತ್, ಶಿವಶಂಕರ್ , ರವಿಕುಮಾರ್, ಗುಡ್ಡೆ ವೆಂಕಟೇಶ್ ಇದ್ದರು.
ಡಿ.ಕೆ.ಶಿವಕುಮಾರ್ ಸೋಲಿಲ್ಲದ ಸರದಾರನಾಗಿ 8 ಬಾರಿ ವಿಧಾನಸಭೆ ಪ್ರವೇಶಿಸಿದವರು. ವಿವಿಧ ಖಾತೆಗಳ ಸಚಿವರಾಗಿ ನಾಡಿನ ಅಭಿವೃದ್ಧಿಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಕಾಲಿನ ಧೂಲಿಗೂ ಸಮನಲ್ಲದ ಹಾಗೂ ರಾಜಕಾರಣದಲ್ಲಿ ಇನ್ನೂ ಕಣ್ಣು ಬಿಡದ ಬಾಲಂಗೋಚಿಗಳು ಹಗುರವಾಗಿ ಮಾತನಾಡುತ್ತಿರುವುದು ಹಾಸ್ಯಾಸ್ಪದ.
ಕೋಟ್ ...
- ಪಿ.ನಾಗರಾಜ್, ನಿರ್ದೇಶಕರು, ಬಮೂಲ್
25ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ, ಮಾಜಿ ಶಾಸಕ ಕೆ.ರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.