ಎಚ್‌ಡಿಕೆ ನಾಲಿಗೆ ಮೇಲೆ ನಿಯಂತ್ರಣವಿರಲಿ: ಕುಮಾರ್ ಕೊಪ್ಪ

KannadaprabhaNewsNetwork |  
Published : Oct 18, 2026, 02:30 AM IST
೧೭ಕೆಎಂಎನ್‌ಡಿ-೧ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ಕಾಂಗ್ರೆಸ್ ಸಮಿತಿ, ದಲಿತ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಕುಮಾರಸ್ವಾಮಿ ಅವರ ಮಾತುಗಳು ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವಂತೆ, ಸಂಘಟನೆಗೆ ಪೂರಕವಾಗುವಂತೆ ಇರಬೇಕು. ದ್ವೇಷ, ಅಸೂಯೆಯಿಂದ ಮಾತನಾಡಿದರೆ ನಾವೂ ಅದೇ ಧಾಟಿಯಲ್ಲಿ ಮಾತನಾಡಬೇಕಾಗುತ್ತದೆ. ನಿಮ್ಮ ಮಾತುಗಳು ಸಂಸ್ಕಾರದಿಂದ ಕೂಡಿದ್ದು, ನಾಗರೀಕತೆಯ ಎಲ್ಲೆಯನ್ನು ಮೀರಬಾರದು. ಟೀಕೆಗಳು ಆರೋಗ್ಯಕರವಾಗಿದ್ದು, ಜನರನ್ನು ಎಚ್ಚರಿಸುವಂತಿರಬೇಕು.

- ಸಂಸ್ಕಾರ ಕಳೆದುಕೊಂಡು ಮಾತನಾಡಿದರೆ ಮಾಜಿ ಸಿಎಂಗೆ ಶೋಭೆ ತರುವುದಿಲ್ಲ

- ಮುಂದಿನ ದಿನಗಳಲ್ಲಿ ನಾಗರೀಕತೆಯ ಎಲ್ಲೆ ಮೀರಿ ಮಾತನಾಡದಂತೆ ಎಚ್ಚರಿಕೆ

- ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾಲಿಗೆಯ ಮೇಲೆ ನಿಯಂತ್ರಣವನ್ನಿಟ್ಟುಕೊಂಡು ಮಾತನಾಡುವುದು ಒಳ್ಳೆಯದು. ಇಂತಹ ಮಾತುಗಳು ಮಾಜಿ ಮುಖ್ಯಮಂತ್ರಿಯಾಗಿರುವ ಅವರಿಗೆ ಶೋಭೆ ತರುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕುಮಾರ್ ಕೊಪ್ಪ ಹೇಳಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸಮಿತಿ, ದಲಿತ, ಪ್ರಗತಿಪರ ಸಂಘಟನಗಳ ಒಕ್ಕೂಟದಿಂದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಚ್‌ಡಿಕೆ ಆಡಿರುವ ಮಾತುಗಳನ್ನು ಖಂಡಿಸಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕುಮಾರಸ್ವಾಮಿ ಅವರು ದೊಡ್ಮನೆ, ದೊಡ್ಡ ಕುಟುಂಬದ ಮಗ. ಅವರ ತಂದೆ ದೇವೇಗೌಡರು ರಾಷ್ಟ್ರಮಟ್ಟದ ಮುಂಚೂಣಿ ನಾಯಕತ್ವ ವಹಿಸಿದ್ದವರು. ಕುಮಾರಸ್ವಾಮಿ ಅವರೂ ಕೂಡ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದವರು. ಒಂದು ಪಕ್ಷದ ಮುಖ್ಯಸ್ಥರಾಗಿ ಅವರು ನಡೆಸುವ ಹೋರಾಟದ ಬಗ್ಗೆ ನಮ್ಮ ಆಕ್ಷೇಪಣೆಯಿಲ್ಲ. ಆದರೆ, ಪ್ರಿಯಾಂಕ್ ಖರ್ಗೆ ಬಗ್ಗೆ ಪಾಳೇಗಾರಿಕೆ ಸಂಸ್ಕೃತಿ, ಹಗುರ, ಬೇಜವಾಬ್ದಾರಿತನ ಮತ್ತು ಅಗೌರವ ಮಾತನಾಡುವುದನ್ನು ಖಂಡಿಸುವುದಾಗಿ ಹೇಳಿದರು.

ಕುಮಾರಸ್ವಾಮಿ ಅವರ ಮಾತುಗಳು ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುವಂತೆ, ಸಂಘಟನೆಗೆ ಪೂರಕವಾಗುವಂತೆ ಇರಬೇಕು. ದ್ವೇಷ, ಅಸೂಯೆಯಿಂದ ಮಾತನಾಡಿದರೆ ನಾವೂ ಅದೇ ಧಾಟಿಯಲ್ಲಿ ಮಾತನಾಡಬೇಕಾಗುತ್ತದೆ. ನಿಮ್ಮ ಮಾತುಗಳು ಸಂಸ್ಕಾರದಿಂದ ಕೂಡಿದ್ದು, ನಾಗರೀಕತೆಯ ಎಲ್ಲೆಯನ್ನು ಮೀರಬಾರದು. ಟೀಕೆಗಳು ಆರೋಗ್ಯಕರವಾಗಿದ್ದು, ಜನರನ್ನು ಎಚ್ಚರಿಸುವಂತಿರಬೇಕು.

ಸಮುದಾಯ, ಪಕ್ಷದ ಕಾರ್ಯಕರ್ತರಿಗೆ ನೋವುಂಟುಮಾಡುವಂತೆ ಮಾತನಾಡುವುದು ಸರಿಯಲ್ಲ. ಸಂಸ್ಕಾರ, ಸಾಮಾಜಿಕ ಪ್ರಜ್ಞೆ, ಕಾನೂನಿನ ಗೌರವವಿಲ್ಲದೆ ಮಾತನಾಡುವವನ್ನು ಸಮಾಜ ಗೌರವಿಸುವುದಿಲ್ಲ. ದ್ವೇಷ, ಅಸೂಯೆಯಿಂದ ಸ್ಥಿತಪ್ರಜ್ಞೆ ಕಳೆದುಕೊಂಡವರಂತೆ ಮಾತನಾಡುವುದೂ ಸರಿಯಲ್ಲ. ಮುಂದಿನ ದಿನಗಳಲ್ಲಿ ಇದೇ ಮಾತಿನ ಧಾಟಿ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ವೈಯಕ್ತಿಕವಾಗಿ ದಾಳಿ ಮಾಡುತ್ತಿರುವ ಕುಮಾರಸ್ವಾಮಿ ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ಪ್ರಿಯಾಂಕ್ ಖರ್ಗೆ ಅವರ ಜ್ಞಾನ, ವಾಕ್ ಚಾತುರ್ಯತೆ ಜನಪ್ರಿಯತೆಯನ್ನು ಸಹಿಸದೆ ಗೃಹ ಇಲಾಖೆ ನಿಮ್ಮಪ್ಪಂದ ಎಂಬುದಾಗಿ ಗೃಹ ಸಚಿವರಿಗೆ ಧಮ್ಕಿ ಹಾಕುವ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಮತ್ತು ಪೊಲೀಸ್ ಅಧಿಕಾರಿಗಳು ನಿರ್ಭಯತೆಯಿಂದ ಕೆಲಸ ಮಾಡದಂತೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದನ್ನೂ ಕುಮಾರಸ್ವಾಮಿ ಸಹಿಸುತ್ತಿಲ್ಲ. ಮನಸ್ಸಿನ ತುಂಬೆಲ್ಲಾ ದ್ವೇಷ-ಅಸೂಯೆಯನ್ನೇ ತುಂಬಿಕೊಂಡಿದ್ದಾರೆ. ಕೇಂದ್ರ ಸಚಿವರಾಗಿ ರಾಜ್ಯಕ್ಕೆ ವಿಶೇಷ ಅನುದಾನವಾಗಲೀ, ಕೈಗಾರಿಕೆಗಳನ್ನಾಗಲೀ ಮತ್ತು ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ತೆರಿಗೆ ಪಾಲನ್ನು ತರಲಾಗದೆ, ರೈತರ ಕಬ್ಬಿನ ಬೆಲೆ ಸಮಸ್ಯೆಗಳ ಬಗ್ಗೆ ಧನಿ ಎತ್ತದೆ ಕೆಲವರನ್ನು ಗುರಿಯಾಗಿಸಿಕೊಂಡು ನಿಂದಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಮುಖಂಡರಾದ ಸಿ.ಎಂ.ದ್ಯಾವಪ್ಪ, ವಿಜಯಕುಮಾರ್ ಚಂದಗಾಲು, ಸಂಪತ್, ಶ್ರೀಧರ್, ವಿಜಯಲಕ್ಷ್ಮೀ, ಗುರುಪ್ರಸಾದ್ ಕೆರಗೋಡು, ಕೃಷ್ಣ, ಉದಯ್, ಪಾಂಡೆ, ಚಿನಕುರಳಿ ರಮೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕದ ಶಿಕ್ಷಣವನ್ನು ಮಕ್ಕಳಿಗೆ ಪರಿಚಯಿಸಲು ಯೋಜನೆ ರೂಪಿಸಿದ್ದೇನೆ: ಸಿ.ಎಸ್.ಪುಟ್ಟರಾಜು
ಮದ್ದೂರು ತಾಪಂ ಕಚೇರಿ ನೂತನ ಕಟ್ಟಡ ಹೈಟೆಕ್ ಮಾದರಿ ನಿರ್ಮಾಣ: ಕೆ.ಎಂ.ಉದಯ್