ಜೆಡಿಎಸ್ ಕಾರ್ಯಕರ್ತನ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಮುದ್ದೆ, ಸೊಪ್ಪಿನ ಸಾರು, ಅನ್ನ, ಮೊಸರು ಸವಿದು ಕಾರ್ಯಕರ್ತನ ಮನಸ್ಸಿಗೆ ಮುದ ನೀಡಿದರು.
ಕನ್ನಡಪ್ರಭವಾರ್ತೆ, ತುರುವೇಕೆರೆ
ಜೆಡಿಎಸ್ ಕಾರ್ಯಕರ್ತನ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಮುದ್ದೆ, ಸೊಪ್ಪಿನ ಸಾರು, ಅನ್ನ, ಮೊಸರು ಸವಿದು ಕಾರ್ಯಕರ್ತನ ಮನಸ್ಸಿಗೆ ಮುದ ನೀಡಿದರು. ತಾಲೂಕಿನ ತಾಳಕೆರೆ ಗ್ರಾಮದಲ್ಲಿರುವ ಶರತ್ ಗೌಡ ಎಂಬ ಕಾರ್ಯಕರ್ತನ ಸಹೋದರನ ಮದುವೆ ಇತ್ತೀಚೆಗೆ ನಡೆದಿತ್ತು. ಮದುವೆಗೆ ಆಗಮಿಸುವಂತೆ ಕಾರ್ಯಕರ್ತ ಎಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಹೋಗಿ ಖುದ್ದಾಗಿ ಕರೆಯೋಲೆ ನೀಡಿದ್ದ. ಅಂದು ಮದುವೆಗೆ ಬಾರಲು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಅವರ ಮನೆಗೆ ತೆರಳಿ ನೂತನ ದಂಪತಿಗಳಿಗೆ ಶುಭ ಹಾರೈಸಿ ಅವರ ಮನೆಯಲ್ಲಿ ಮುದ್ದೆ, ಸೊಪ್ಪಿನ ಸಾರು, ಅನ್ನ, ಮೊಸರು ಸವಿದು ಕಾರ್ಯಕರ್ತನ ಕುಟುಂಬದ ಸದಸ್ಯರಿಗೆ ಖುಷಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಎಚ್.ನಿಂಗಪ್ಪ, ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಜೆಡಿಎಸ್ ಮುಖಂಡರಾದ ಗುಬ್ಬಿ ನಾಗರಾಜು, ತಿಪಟೂರು ಶಾಂತಕುಮಾರ್, ಬೆಲವತ್ತದ ಜಗದೀಶ್, ವಿಠಲದೇವರಹಳ್ಳಿ ಹರೀಶ್, ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಇದ್ದರು.ಹರ್ಷ: ಕುಮಾರಣ್ಣ ನನ್ನಂತಹ ಸಾಮಾನ್ಯ ಕಾರ್ಯಕರ್ತನ ಮನೆಗೆ ಬಂದಿರುವುದು ನಮಗೆ ಸಂತಸ ತಂದಿದೆ. ತಾಲೂಕು ಜೆಡಿಎಸ್ ಭದ್ರಕೋಟೆ ಆಗಲು ಕಾರಣ ದೇವೇಗೌಡರು ಮತ್ತು ಕುಮಾರಣ್ಣ ನಮ್ಮ ತಾಲೂಕಿನ ಜನತೆಯ ಮೇಲೆ ಇಟ್ಟಿರುವ ಪ್ರೀತಿ, ಕಾರ್ಯಕರ್ತರನ್ನು ಪ್ರೀತಿಸುವ ರೀತಿ. ತಾವೊಬ್ಬ ಕೇಂದ್ರ ಸಚಿವ ಎಂಬ ಯಾವುದೇ ಅಹಂ ಇಲ್ಲದೇ ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ತಮ್ಮ ಮನೆಗೆ ಕುಮಾರಣ್ಣ ಬಂದಿದ್ದೇ ನಮ್ಮ ಕುಟುಂಬಕ್ಕೆ ಖುಷಿ ನೀಡಿದೆ ಎಂದು ಶರತ್ ಗೌಡ ಹರ್ಷ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.