ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ರೈತರಿಗೆ ಶಕ್ತಿ ತುಂಬಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜ.25ರಂದು ಬೈರಮಂಗಲ ಗ್ರಾಮದಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.
ರೈತ, ದಲಿತ, ಕನ್ನಡ ಪರ ಸಂಘಟನೆಗಳು, ಸ್ತ್ರೀ ಶಕ್ತಿ ಸಂಘಗಳು, ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು ಚಳವಳಿಯಲ್ಲಿ ಭಾಗವಹಿಸಿ ರೈತ ವಿರೋಧಿ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸುವರು. ಅಲ್ಲದೆ, ಡಿಸಿ ಕಚೇರಿ, ಸಿಎಂ, ಡಿಸಿಎಂ ಮನೆ ಮುತ್ತಿಗೆ ಹಾಕುವ ಜೊತೆಗೆ ಕಾನೂನು ಹೋರಾಟವನ್ನೂ ಮುಂದುವರೆಸುತ್ತೇವೆ. ಭೂಮಿ ಉಳಿಯಬೇಕು ಇಲ್ಲ ರೈತರ ಪ್ರಾಣ ಹೋಗಬೇಕು. ಅಲ್ಲಿವರೆಗೂ ಚಳವಳಿ ನಿಲ್ಲದು ಎಂದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಯೋಜನಾ ಪ್ರಾಧಿಕಾರ ಬಿಡದಿ ಟೌನ್‌ಶಿಪ್ ಯೋಜನೆಗಾಗಿ 9600 ಎಕರೆ ಭೂಮಿಯನ್ನು ರೈತರ ಅಭಿಪ್ರಾಯ ಮತ್ತು ಒಪ್ಪಿಗೆ ಪಡೆಯದೇ ಏಕಾಏಕಿ ಭೂ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಕೃಷಿಯನ್ನೇ ನಂಬಿರುವ ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸುತ್ತಿದೆ. ದಾದಾಗಿರಿ ಮಾಡುವ ಸಬ್ ಇನ್ಸ್ ಪೆಕ್ಟರ್ ಗಳನ್ನು ಮುಂದಿಟ್ಟುಕೊಂಡು ಭೂ ಸ್ವಾಧೀನ ಮಾಡುತ್ತಿದ್ದಾರೆ ಎಂದರು.ಈ ಯೋಜನೆ ವ್ಯಾಪ್ತಿಯಲ್ಲಿ 3700ಕ್ಕೂ ಹೆಚ್ಚಿನ ಕುಟುಂಬಗಳಿದ್ದು, ಇದರಲ್ಲಿ ಕೇವಲ 400 ಕುಟುಂಬಗಳಿಂದ ಬಲವಂತವಾಗಿ ಭೂ ಸ್ವಾಧೀನಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಂದ ಸುಳ್ಳು ಹೇಳಿಸುತ್ತಿದ್ದು, ರೈತರ ಒಗ್ಗಟ್ಟು ಮುರಿಯುವ, ದಾವೆ ಹೂಡುವ ಬೆದರಿಕೆ, ಪೊಲೀಸರ ಮೂಲಕ ದೌರ್ಜನ್ಯವೂ ಎಸಗುತ್ತಿದೆ. ಕಾನೂನು ಹೋರಾಟಕ್ಕೂ ಸಿದ್ಧವಾಗಿದ್ದೇವೆ. ಇದನ್ನು ಮೀರಿ ಯೋಜನೆ ಕಾರ್ಯಗತಗೊಳಿಸಲು ಮುಂದಾದರೆ 2028ರಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಡೀ ಯೋಜನೆಯನ್ನೇ ರದ್ದುಗೊಳಿಸುತ್ತೇವೆ ಎಂದರು.
ಕಂಡವರ ಆಸ್ತಿ ಲೂಟಿ ಮಾಡುತ್ತಿಲ್ಲ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಾವೂಸ್ ನಲ್ಲಿ ವೆಲ್ ಕಮ್ ಟೂ ಬೆಂಗಳೂರು ಅಂತಾರೆ. ಆದರೆ, ಇಲ್ಲಿ ಬೆಂಗಳೂರಿನ ಏರ್‌ಪೋರ್ಟಿಗೆ ಬಂದಾಕ್ಷಣ ಗುಂಡಿಗಳ ದರ್ಶನವಾಗುತ್ತದೆ. ಇಲ್ಲಿರುವ ಐಟಿ ಬಿಟಿ ಕಂಪನಿಗಳೇ ಬೇರೆ ರಾಜ್ಯಗಳಿಗೆ ಸ್ಥಳಾಂತರ ಆಗುತ್ತಿವೆ. ರಿಯಲ್ ಎಸ್ಟೇಟ್ ಮಾಡಲು ಟೌನ್‌ಶಿಪ್‌ನಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಜನಪರ ಕೆಲಸ ಮಾಡುವವರು. ನಿಮ್ಮ ತರಹ ಕಂಡವರ ಆಸ್ತಿ ಹೊಡೆಯಲು ಜಮೀನುಗಳಿಗೆ ಬೇಲಿ ಹಾಕಲು ಟೀಮ್ ಇಟ್ಟುಕೊಂಡಿಲ್ಲ. ನೈಸ್ ರಸ್ತೆಯಲ್ಲಿ ಯಾವ ಆಸ್ತಿನು ಲೂಟಿ ಮಾಡಿಲ್ಲ. ಶಾಸಕ ಬಾಲಕೃಷ್ಣ ಅವರ ಪತ್ನಿ ಹೆಸರಿನಲ್ಲಿ ಸರ್ಕಾರಿ ಭೂಮಿ ಲೂಟಿ ಮಾಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಶೇಷಪ್ಪ, ಸೋಮೇಗೌಡ, ನರಸಿಂಹಯ್ಯ, ಅಂಜನಾಪುರ ವಾಸು, ಖಲೀಲ್, ಚಂದ್ರಶೇಖರ್ ಇತರರಿದ್ದರು.ಕೋಟ್ .............
ಮಾಗಡಿ ಕ್ಷೇತ್ರದಲ್ಲಿ 5 ವರ್ಷ ನಾನು ಶಾಸಕನಾಗಿ ಹಾಗೂ ಬಾಲಕೃಷ್ಣ ಕುಟುಂಬ 60 - 65 ವರ್ಷದ ಅಧಿಕಾರದಲ್ಲಿ ಏನೆಲ್ಲ ಕೊಡುಗೆ ನೀಡಿದ್ದಾರೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಕೇವಲ 5 ವರ್ಷದಲ್ಲಿ ನಾನು ಶಾಶ್ವತ ಯೋಜನೆಗಳನ್ನು ನೀಡಿದ್ದೇನೆ. ಅವರು ಯಾವ ನೀರಾವರಿ ಯೋಜನೆಗಾಗಿ ಹೋರಾಟ ಮಾಡಿದರು ಎಂದು ಹೇಳಲಿ. ಅಧಿಕಾರಿಗಳ ಹೀಯಾಳಿಸುತ್ತಾರೆ. ಇವರ ಬೈಗುಳ ಕೇಳಿ ತಹಸೀಲ್ದಾರ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಪಂ ಸದಸ್ಯನಿಗೆ ಇರುವಷ್ಟು ವಿವೇಕತನ ಶಾಸಕ ಬಾಲಕೃಷ್ಣ ಅವರಿಗಿಲ್ಲ.-ಎ.ಮಂಜುನಾಥ್, ಮಾಜಿ ಶಾಸಕರು
23ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.