ರಾಣಿಬೆನ್ನೂರು: ಮನುಷ್ಯರನ್ನು ಮನುಷ್ಯರಂತೆ ಕಾಣದ ಈ ಸಮಾಜದಲ್ಲಿ ಹಿಂದುಳಿದ ವರ್ಗದವರು ಸೇರಿ ಎಲ್ಲರಿಗೂ ಸಮಾನ ವೇದಿಕೆ ತಂದುಕೊಟ್ಟ ಧೀಮಂತ ಪುರುಷ ದೇವರಾಜ ಅರಸು ಅವರಾಗಿದ್ದಾರೆ ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು. ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ತಾಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಜನರ ಶೈಕ್ಷಣಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ ಒದಗಿಸಿಕೊಡುವ ಮೂಲಕ ಅವರೆಲ್ಲಾ ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನಲೆಗೆ ಬರಲು ಡಿ. ದೇವರಾಜ ಅರಸು ಅವರ ಶ್ರಮ ಹಾಗೂ ಪ್ರಯತ್ನ ಬಹುದೊಡ್ಡದಿದೆ. ಅವರಿಲ್ಲದಿದ್ದರೆ ಹಿಂದುಳಿದ ವರ್ಗಗಳ ಇಲಾಖೆ ಇರುತ್ತಿರಲಿಲ್ಲ. ಅವರ ಚಿಂತನೆ ಹಾಗೂ ಆದರ್ಶಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಅವಶ್ಯಕತೆಯಿದೆ ಎಂದರು. ಡಿ. ದೇವರಾಜ ಅರಸು ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸಕ ಡಾ. ಕಾಂತೇಶ ಅಂಬಿಗೇರ ಉಪನ್ಯಾಸ ನೀಡಿದರು.ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ತಾಪಂ ಇಒ ಪರಮೇಶ, ಬಿಸಿಎಂ ಅಧಿಕಾರಿ ವ್ಹಿ.ಎಸ್. ಹಿರೇಮಠ, ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ, ರವೀಂದ್ರಗೌಡ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಕಾಂತೇಶ ಅಂಬಿಗೇರ, ಕರವೇ ಅಧ್ಯಕ್ಷ ಪಿ.ವಿ. ಮಠದ, ಕೊಟ್ರೇಶಪ್ಪ ಎಮ್ಮಿ, ಮಲ್ಲಿಕಾರ್ಜುನ ಸಾವಕ್ಕಳವರ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ನಗರದ ತಹಸೀಲ್ದಾರ್ ಕಚೇರಿಯಿಂದ ತಾಪಂ ಸಭಾಭವನದ ವರೆಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.