)
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಆಸ್ಪತ್ರೆಯ ಶುಶ್ರೂಷಕಿ ಮಧುಮಿತ (25) ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಈ ಕೃತ್ಯ ಸಂಬಂಧ ಆಕೆಯ ಪತಿ ತಮಿಳುನಾಡು ರಾಜ್ಯದ ಚೆನ್ನೈ ಮೂಲದ ವೆಂಕಟೇಶನ್ ಬಂಧನವಾಗಿದೆ.
ಜೆ.ಪಿ.ನಗರದ 3ನೇ ಹಂತದಲ್ಲಿರುವ ತನ್ನ ಆಸ್ಪತ್ರೆ ಬಳಿ ಬೆಳಗ್ಗೆ ಉಪಾಹಾರಕ್ಕೆ ಮಧುಮಿತಾ ತೆರಳಿದಾಗ ಅಡ್ಡಗಟ್ಟಿ ವೆಂಕಟೇಶನ್ ಹಲ್ಲೆ ನಡೆಸಿದ್ದಾನೆ. ಈ ಕೃತ್ಯ ಎಸಗಿ ಪರಾರಿಯಾಗುತ್ತಿದ್ದ ಆತನನ್ನು ಸಾರ್ವಜನಿಕರು ಹಾಗೂ ಸಂಚಾರ ಪೊಲೀಸರು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ತಿಳಿಸಿದ್ದಾರೆ.ಹಲ್ಲೆ ಮಾಡಲು ಮಧುರೈನಿಂದ ಬೈಕ್‌ನಲ್ಲಿ ಬಂದ:
ಜೆ.ಪಿ.ನಗರದ 3ನೇ ಹಂತದಲ್ಲಿ ಖಾಸಗಿ ಆಸ್ಪತ್ರೆ ನರ್ಸ್ ಮಧುಮಿತಾ ಮೇಲೆ ಹೆಲ್ಮೆಟ್ ಧರಿಸಿಕೊಂಡು ಬಂದು ಆಕೆಯ ಪತಿ ವೆಂಕಟೇಶ್ ಹಲ್ಲೆ ಮಾಡಿದ್ದಾನೆ. ಆಕೆಯ ಮೇಲೆ ಮಚ್ಚು ಹಾಗೂ ಲಾಂಗ್‌ನಿಂದ ಹೊಡೆದು ನಂತರ ಆತ ಆ್ಯಸಿಡ್ ಎರಚಿದ್ದಾನೆ. ಈ ಘಟನೆಗೆ ದಂಪತಿ ಮಧ್ಯೆ ಕೌಟುಂಬಿಕ ಕಲಹ ಕಾರಣವಾಗಿರಬಹುದು ಎಂದು ಡಿಸಿಪಿ ಶಂಕಿಸಿದ್ದಾರೆ.
ಜೆ.ಪಿ.ನಗರದ 3ನೇ ಹಂತದಲ್ಲಿರುವ ಆಸ್ಪತ್ರೆಗೆ ಮೊದಲ ಪಾಳಿ ಕೆಲಸಕ್ಕೆ ಮಧುಮಿತಾ ಬಂದಿದ್ದಳು. ಉಪಾಹಾರಕ್ಕೆ ಹೊರಬಂದಾಗ ಆಕೆಯನ್ನು ಅಡ್ಡಗಟ್ಟಿ ವೆಂಕಟೇಶ್ ಹಲ್ಲೆ ನಡೆಸಿದ್ದಾನೆ. ಆಗ ಚೀರಾಟ ಕೇಳಿ ಕೂಡಲೇ ಮಧುಮಿತಾ ರಕ್ಷಣೆಗೆ ಸ್ಥಳೀಯರು ಧಾವಿಸಿದ್ದಾರೆ. ಆದರೆ ಸಾರ್ವಜನಿಕರ ಮೇಲೆ ಮಚ್ಚು ಬೀಸಿ ಆರೋಪಿ ಪುಂಡಾಟಿಕೆ ಮಾಡಿದ್ದಾನೆ. ಅಷ್ಟರಲ್ಲಿ ಘಟನಾ ಸ್ಥಳಧ ಸಮೀಪದಲ್ಲೇ ಇದ್ದ ಜಯನಗರ ಸಂಚಾರ ಠಾಣೆ ಪೊಲೀಸರು, ಸಂತ್ರಸ್ತೆಯ ರಕ್ಷಣೆಗೆ ಬಂದಿದ್ದಾರೆ. ಆಗ ಪರಾರಿಯಾಗಲು ಯತ್ನಿಸಿದ ಆತನನ್ನು ಸಾರ್ವಜನಿಕರ ಸಹಕಾರದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಮಧುಮಿತಾಳನ್ನು ಪೊಲೀಸರು ದಾಖಲಿಸಿದ್ದಾರೆ. ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧುಮಿತಾ ಹತ್ಯೆ ಮಾಡಲು ರಾತ್ರಿಯೇ ನಗರಕ್ಕೆ ಬಂದಿದ್ದ ಆತ, ಪತ್ನಿ ಆಸ್ಪತ್ರೆ ಬಳಿ ಹೊಂಚು ಹಾಕಿ ಕಾಯುತ್ತಿದ್ದ. ಬೆಳಗ್ಗೆ ತಿಂಡಿ ತಿನ್ನಲು ಮಧುಮಿತಾ ಹೊರ ಬರುತ್ತಿದ್ದಂತೆ ಆ್ಯಸಿಡ್ ಎರಚಿ ತಲೆಗೆ ಮಚ್ಚಿನಿಂದ ಹೊಡೆದಿದ್ದಾನೆ. ಆಕೆ ರಕ್ಷಣೆ ಕೋರಿ ಜೋರಾಗಿ ಕಿರುಚಿಕೊಂಡು ಆಸ್ಪತ್ರೆಯ ಕೆಳಮಹಡಿಗೆ ಓಡಿದಾಗ ಬೆನ್ನತ್ತಿ ಹೋಗಿ ಪತಿ ಕೊಚ್ಚಿದ್ದಾನೆ. ರಕ್ಷಣೆಗೆ ಧಾವಿಸಿದ ಸಾರ್ವಜನಿಕರ ಮೇಲೂ ಆತ ಲಾಂಗ್ ಬೀಸಿದ್ದಾನೆ. ಆಗ ಆರೋಪಿ ಮೇಲೆ ಸ್ಥಳೀಯರು ಕಲ್ಲು ತೂರಾಟ ಮಾಡಿದ್ದಾರೆ. ಅಷ್ಟರಲ್ಲಿ ಸಮೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯನಗರ ಸಂಚಾರ ಠಾಣೆ ಪಿಎಸ್‌ಐ ವೆಂಕಟೇಶ್ ಸಹ ದೌಡಾಯಿಸಿದ್ದಾರೆ. ಅಲ್ಲೇ ಬಿದ್ದಿದ್ದ ಬಿದರಿನ ದೊಣ್ಣೆಯಿಂದ ಆರೋಪಿಯನ್ನು ಬಡಿದು ಆತನನ್ನು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಮಧುಮಿತಾ ಮೇಲೆ ಆರೋಪಿ ಭೀಕರ ಹಲ್ಲೆ ಕೃತ್ಯಕ್ಕೆ ಚಾರಿತ್ರ್ಯ ಶಂಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ತನ್ನ ಪತ್ನಿ ನಡವಳಿಕೆ ಮೇಲೆ ಶಂಕೆಗೊಂಡಿದ್ದ ವೆಂಕಟೇಶ್, ಇದೇ ವಿಚಾರವಾಗಿ ಮನೆಯಲ್ಲಿ ಪತ್ನಿ ಜತೆ ಜಗಳವಾಡುತ್ತಿದ್ದ. ಇದೇ ಕಾರಣಕ್ಕೆ ಇಬ್ಬರು ದೂರವಾಗಿದ್ದರು. ಬೇರೊಬ್ಬನ ಜತೆ ಆಕೆ ಸಖ್ಯದಲ್ಲಿದ್ದಾಳೆ ಎಂದು ಕೆರಳಿ ವೆಂಕಟೇಶ್ ಹಲ್ಲೆ ನಡೆಸಿರುವುದಾಗಿ ಮೂಲಗಳು ಹೇಳಿವೆ.
-ವಂಶಿಕೃಷ್ಣ, ಡಿಸಿಪಿ, ದಕ್ಷಿಣ ವಿಭಾಗ