ಯತ್ನಾಳ ಹಾಗೆ ನಿರುದ್ಯೋಗಿಯಲ್ಲ, ಧಮ್ಕಿ ನಡೆಯಲ್ಲ..!

KannadaprabhaNewsNetwork |  
Published : Oct 28, 2025, 01:00 AM IST
ಶಾಸಕ ಯತ್ನಾಳ ವಿರುದ್ಧ ಹರಿಹಾಯ್ದ ಸಚಿವ ಎಂ.ಬಿ.ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸೋ‌ಕಾಲ್ಡ್ ಹಿಂದೂ ಹುಲಿ‌ ಬಸನಗೌಡ ಪಾಟೀಲ ಯತ್ನಾಳ ಅವರು ಎಂದಿನಂತೆ ತಮ್ಮ ನಾಲಿಗೆ ಹರಿ ಬಿಟ್ಟಿದ್ದಾರೆ. ಇವರು ಹಿಂದೂ ಹುಲಿ ಅಂತಾ ಹೇಳಿಕೊಳ್ಳುತ್ತಾರೆ. ಇದು ವಿಜಯಪುರದ ಜನರಿಗೆ ಗೊತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸೋ‌ಕಾಲ್ಡ್ ಹಿಂದೂ ಹುಲಿ‌ ಬಸನಗೌಡ ಪಾಟೀಲ ಯತ್ನಾಳ ಅವರು ಎಂದಿನಂತೆ ತಮ್ಮ ನಾಲಿಗೆ ಹರಿ ಬಿಟ್ಟಿದ್ದಾರೆ. ಇವರು ಹಿಂದೂ ಹುಲಿ ಅಂತಾ ಹೇಳಿಕೊಳ್ಳುತ್ತಾರೆ. ಇದು ವಿಜಯಪುರದ ಜನರಿಗೆ ಗೊತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದರು.

ನಗರದ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ಜೈನರಿಗೆ ಮಾನ್ಯತೆ ಕೊಟ್ಟಾಗ ಯಾರೂ ಮಾತನಾಡಲಿಲ್ಲ. ನಾವು ಹಿಂದುಗಳಲ್ಲ‌ ಎಂದು ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದಲ್ಲಿ ರೆಜುಲ್ಯೂಶನ್ ಮಾಡಿದರು. ಎಲ್ಲರಿಗೂ ತಮ್ಮದೇ ಆದ ಧಾರ್ಮಿಕ ಸ್ವಾತಂತ್ರ್ಯವಿದೆ. ಹಂಗಾದರೆ ಹಿಂದೂ ಧರ್ಮದ ಬಗ್ಗೆ ಪ್ರಧಾನಿ ಮೋದಿ ಅವರು ಅರ್ನಾಬ್ ಗೋಸ್ವಾಮಿ ಅವರಿಗೆ ಹಿಂದು ಒಂದು ವೇ ಆಫ್‌ ಲೈಫ್‌ ಎಂದು ಹಿಂದೆ ಹೇಳಿದ್ದಾರೆ. ಯತ್ನಾಳ ಎಲ್ಲರಿಗೂ ಬಾಯಿ ಬಿಟ್ಟಿದ್ದಾರೆ, ಈಗ ನನಗೂ ಬಾಯಿ ಬಿಟ್ಟಿದ್ದಾರೆ. ಯತ್ನಾಳ ನೀವು ಯಾರಿಗಾದರೂ ಧಮ್ಕಿ ಹಾಕಿ, ನನ್ನೊಟ್ಟಿಗೆ ಇದು ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು.ಪಂಚಪೀಠದವರು ಹಾನಗಲ್ ಕುಮಾರಸ್ವಾಮಿಗಳಿಗೂ ಬೈದಿದ್ದಾರೆ. ಯತ್ನಾಳ ಅವರಿಗೆ ಪ್ರತಿಕ್ರಿಯೆ ಕೊಡಲು ನಾನು ದಿನಕ್ಕೆ ನಾಲ್ಕು ಪ್ರೆಸ್‌ಮೀಟ್ ಮಾಡಬೇಕಾಗುತ್ತದೆ. ಇವರ ಹಾಗೆ ನಾನು ನಿರುದ್ಯೋಗಿ ಅಲ್ಲ. ಮಾತೆ ಮಹಾದೇವಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವ ಧರ್ಮ ಜಾಗತಿಕ ಮಟ್ಟದಲ್ಲಿ ಮಾತೇ ಮಹಾದೇವಿಯವರು ಮಾಡುತ್ತಿದ್ದಾರೆ ಎಂದು ಇವರೇ ಹಿಂದೆ ಹೇಳಿದ್ದಾರೆ. ಹಿಂದೂ ಮತಗಳ ಸಲುವಾಗಿ ಈಗ ಇವರು ಹೀಗೆ ಮಾತನಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ಎದೆ ಸೀಳಿದರೆ ಅಲ್ಲಾ ಕಾಣುತ್ತಾನೆ ಅಂತಾರೆ. ಅವತ್ತು ನಿಮ್ಮ ಎದೆಯಲ್ಲಿ ಅಲ್ಲಾ ಇದ್ದನಾ? ಇವತ್ತು ಹಿಂದೂ ಬಂತು. ಸಿದ್ದರಾಮಯ್ಯನವರ ಎದೆಯಲ್ಲಿ ಸಂವಿಧಾನ ಇದೆ. ಯತ್ನಾಳ ಮಾತು ಕೇಳಿ ಕೂಡಲಸಂಗಮ ಶ್ರೀಗಳ ಪರಿಸ್ಥಿತಿ ಏನಾಯಿತು? ಪಾಪ ಅವರ ಪರಿಸ್ಥಿತಿ ಕೂಡ ಗಂಭೀರವಾಯಿತು. ನೀವು ಎಷ್ಟು ಕಾರ್ಯಕ್ರಮ ಮಾಡುತ್ತೀರಿ? ನಾನು ಎರಡು ಪಟ್ಟು ಮಾಡುವೆ. ನೀವೆಷ್ಟು ಜನರನ್ನು ಸೇರಿಸುತ್ತಿರೋ ಅದರ ಎರಡು ಪಟ್ಟು ಜಾಸ್ತಿ ಜನ ಸೇರಿಸಿ ತೋರಿಸುವೆ‌. ಪಂಚ ಪೀಠದವರೊಟ್ಟಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ. ಅದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನೀವು ಏನೇ ಸಮಾವೇಶ ಮಾಡಿದರೂ ನನಗೇನು ಸಂಬಂಧವಿಲ್ಲ. ನಿಮ್ಮ ಸಮಾವೇಶಕ್ಕೆ ಬರುವವರು ಬಿಜೆಪಿಯವರು, ಬೈಯ್ಯುವವರು ಲಿಂಗಾಯತರು, ಬೈಸಿಕೊಳ್ಳುವವರು ಲಿಂಗಾಯತರೇ? ನಿಮ್ಮದು ಎಷ್ಟಿದೆ, ನಮ್ಮದು ಎಷ್ಟಿದೆ ನೋಡೇ ಬಿಡೋಣ. ಕೂಡಲಸಂಗಮ ಸ್ವಾಮಿಗಳನ್ನು ಈಗಾಗಲೇ ದಂಡಿಗೆ ಹಚ್ಚಿದ್ದಾರೆ. ಇವರು ಎಲ್ಲಿ ಬೇಕಾದರೂ ಸಭೆ ಮಾಡಿಕೊಳ್ಳಲಿ ಎಂದು ಹೇಳಿದರು.

ಕನ್ಹೇರಿ ಶ್ರೀಗಳು ನನಗೂ ಆತ್ಮಿಯರೇ:

ಎಲ್ಲ ಸ್ವಾಮಿಗಳ ತಾಯಂದಿರಿಗೆ ಅವಾಚ್ಯ ಪದ ಬಳಸಿದ್ದಾರೆ. ಬಸವಣ್ಣನವರು ಸೂಳೆ ಸಂಕವ್ವಗೆ ಬಸವ ಮಂಟಪದಲ್ಲಿ ಸ್ಥಾನ ಕೊಟ್ಟಿದ್ದರು. ಸೂಳೆ ಸಂಕವ್ವ ದೈಹಿಕ ಸುಖಕ್ಕೆ ಹಾಗೆ ಮಾಡಿರಲ್ಲ, ಅವಳು ಮಕ್ಕಳ ಪಾಲನೆ ಪೋಷಣೆಗಾಗಿ ಹಾಗೆ ಆಗಿರುತ್ತಾಳೆ. ಹಿಂದೆ ನಾನು ಎಂಪಿ ಚುನಾವಣೆಗೆ ನಿಂತಾಗ ಶೇ.80 ಬ್ರಾಹ್ಮಣರು ನನಗೆ ಮತ ಹಾಕಿದರು. ಸೂಳೆ ಸಂಕವ್ವಗೆ ನಾವು ಬಸವ ಧರ್ಮದಲ್ಲಿ ಸ್ಥಾನ ಕೊಟ್ಟಿದ್ದೇವೆ. ಕನ್ಹೇರಿ ಶ್ರೀಗಳು ಬಳಸಿದ ಒಂದು ಶಬ್ದಕ್ಕೆ ಅವರು ಕ್ಷಮೆ ಕೇಳಲಿ. ಅವರ ಪಾದ ಮುಟ್ಟಿ ನಾನು ಕರೆದುಕೊಂಡು ಬರುವೆ. ರಾಮನಿಗೆ ಬೈದರೂ, ಹನುಮಂತನಿಗೆ ಬೈದರೂ ನಮ್ಮದು ವಿರೋಧವಿದೆ. ಆ ತರಹದ ಶಬ್ದ ಬಳಸಿದರೆ ನಾವು ವಿರೋಧ ಮಾಡುತ್ತೇವೆ. ಇವತ್ತು ಜೈನರು, ಬ್ರಾಹ್ಮಣರು, ಮುಸ್ಲಿಮರು ಸೇರಿದಂತೆ ಎಲ್ಲ ಕೆಲಸದವರು ನಮ್ಮಲ್ಲಿ ಬರುತ್ತಾರೆ. ಹಿಂದೆ ಸಿದ್ದೇಶ್ವರ ಸ್ವಾಮೀಜಿಗಳ ಪ್ರೇರಣೆಯಿಂದ ನಾನು ಕೆಲಸ ಮಾಡಿರುವೆ. ನಿಜವಾದ ಸಂತ ಸಿದ್ದೇಶ್ವರ ಸ್ವಾಮಿಜಿ ಎಂದು ಸ್ಮರಿಸಿದರು.

--------------

ಕೋಟ್‌

ಇವರ ಬಗ್ಗೆ ರೇಣುಕಾಚಾರ್ಯ ಏನೇನು ಹೇಳಿದ್ದಾರೆ ಕೇಳಿ. ಈ ಹಿಂದೆ ನನ್ನ ಜೊತೆನೇ ಇವರು ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದಿದ್ದರು. ಅಂದು ಅಲ್ಲಾಹು ಅಕ್ಬರ್‌ ಎಂದು ಇಂದು ಹಿಂದೂ ಬಗ್ಗೆ ಮಾತನಾಡುತ್ತಾರೆ. ಇವರು ನಾಲಿಗೆ ಹರಿಬಿಟ್ಟ ಕಾರಣವೇ ಇವರನ್ನು ಬಿಜೆಪಿಯಿಂದ ಹೊರ ಹಾಕಿದ್ದಾರೆ. ಉಚ್ಚಾಟಿತ ಹಿಂದೂ ಹುಲಿ‌ ಇದು. ಇವರ ಸಹೋದರ ಈಶ್ವರಪ್ಪ, ಇವರಿಬ್ಬರೂ ಉಚ್ಚಾಟಿತರೇ. ಬಸನಗೌಡರ ನಿಮ್ಮ ನಾಲಿಗೆಗೆ ಲಗಾಮು ಇರಲಿ‌. ಕನ್ಹೇರಿ ಶ್ರೀಗಳ ಕಡೆಯಿಂದ ಇವರೇ ಮಾತನಾಡಿಸಲು ಹಚ್ಚಿಸಿರಬಹುದು. ಯತ್ನಾಳ ಮಾತು ಯಾರು ಸೀರಿಯಸ್ ಆಗಿ ತಗೋತಾರೆ? ನಾನು ಸೀರಿಯಸ್ ಆಗಿ ತಗೊಂಡ್ರೆ ಅದು ಸರಿ ಇರಲ್ಲ.

- ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರು

------------

ಬಾಕ್ಸ್‌

ನನ್ನ ಬಗ್ಗೆ ಬಾಯ್ಬಿಟ್ಟರೆ ಸರಿ ಇರಲ್ಲ

ಯತ್ನಾಳರು ಟೋಪಿ ಹಾಕೊಂಡಿದ್ದನ್ನು ಜನ ನೋಡಿದ್ದಾರೆ. ನನ್ನ ಬಗ್ಗೆ ಬಾಯಿ ಬಿಟ್ಟರೆ ಸರಿ ಇರಲ್ಲ. ಎಂ.ಬಿ.ಪಾಟೀಲ ಹಿಂದೆ ಭೂ ಹಗರಣ ಮಾಡಿದವರಿದ್ದಾರೆ ಎಂದು ಯತ್ನಾಳ ಹೇಳುತ್ತಾರೆ. ನಾನು ಯಾರದೇ ಆಸ್ತಿ ವಿಚಾರದಲ್ಲಿ ನ್ಯಾಯಯುತವಾಗಿ ಮಾಡಿ ಎಂದು ಪೊಲೀಸರಿಗೆ ಹೇಳಿರುವೆ. ನಾನು ಜಿ ಕ್ಯಾಟಗರಿ ಸೈಟ್ ಕೂಡ ತಗೊಂಡಿಲ್ಲ. ತಿಡಗುಂದಿಯಲ್ಲಿ ಅಲ್ಲ ಮಕಣಾಪುರದಲ್ಲಿ 2022 ರಲ್ಲಿ ಭೂಮಿ ತಗೊಂಡಿರುವೆ. 135 ಎಕರೆ ಇದೆ, ಅದನ್ನು ಬೇಕಾದರೆ ಯತ್ನಾಳಗೆ ದಾನ ಕೊಡುವೆ. ಎಂ.ಬಿ.ಪಾಟೀಲ ಅವರ ಜೊತೆ ಧರ್ಮ‌ ಒಡೆಯುವವರು ಇದ್ದಾರೆ ಎನ್ನುತ್ತಾರೆ. ನಾನು ಒಂದು ಸಲ ತಗೊಂಡರೆ ದಂಡಿಗೆ ಹಚ್ಚುತ್ತೇನೆ. ಹೊಲ ಹೋಗಲಿ, ಮನಿ ಹೋಗಲಿ. ಇವರು ಮುಂದೆ ದೊಡ್ಡ ಸಮಾವೇಶ ಮಾಡುವವರಂತೆ. ಆ ಸ್ವಾಮಿಗಳನೊಬ್ಬರನ್ನು ಬಳಸಿಕೊಂಡು ಕಾರ್ಯಕ್ರಮ ಮಾಡುವವರು. ನಮ್ಮದು ಬಸವ ದಳ ಇದೆ, ಬಸವ ಸೇನೆ ಇದೆ, ಜೈ ಭೀಮ‌ ಇದೆ ಎಂದು ಎಂ.ಬಿ.ಪಾಟೀಲ ತಿಳಿಸಿದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ