ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿಯಲ್ಲಿ ಹಸುಗೂಸನ್ನು ಕೊಂದು ತಿಪ್ಪೆಗೆಸೆದ ಪ್ರಕರಣಕ್ಕೆ ಸಂಬಂಧಿದಂತೆ ಪ್ರೇಮಿಗಳಿಬ್ಬರನ್ನು ಬಂಧಿಸಲಾಗಿದೆ.ಅಂಬಡಗಟ್ಟಿ ಗ್ರಾಮದ ಯುವಕ ಮಹಾಬಳೇಶ ರುದ್ರಪ್ಪ ಕಾಮೋಜಿ (31), ಸಿಮ್ರಾನ್ ಮೌಲಾಸಾಬ ಮಾಣಿಕಬಾಯಿ (22) ಬಂಧಿತ ಆರೋಪಿಗಳು. ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ನಿವಾಸಿಗಳಾದ ಮಹಾಬಳೇಶ ಮತ್ತು ಸಿಮ್ರಾನ್ ಇಬ್ಬರೂ ಕಳೆದ ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಬಂಧ ಏರ್ಪಟ್ಟಿದೆ. ಪರಿಣಾಮ ಸಿಮ್ರಾನ್, ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದಾಳೆ.
ಯುವತಿ, ತಾನು ಗರ್ಭಿಣಿ ಆಗಿರುವ ವಿಷಯವನ್ನು ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ಈ ಮಧ್ಯೆ, 20 ದಿನಗಳ ಹಿಂದೆ ಸಿಮ್ರಾನ್ ಯುಟ್ಯೂಬ್‌ನಲ್ಲಿ ವಿಡಿಯೋ ನೋಡಿಕೊಂಡು, ಸೆಲ್ಫ್ ಡೆಲಿವರಿ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆಕೆಗೆ ಹೆಣ್ಣು ಮಗು ಜನಿಸಿತ್ತು. ಮಗು ಜನಿಸಿದ ಬಳಿಕ ಅವಳು ಆ ಮಗುವನ್ನು ತನ್ನ ಪ್ರಿಯಕರ ಮಹಾಬಳೇಶನ ಕೈಗೆ ನೀಡಿದ್ದಳು. ಆದರೆ, ಆತ ಆ ಹಸುಗೂಸನ್ನು ಹತ್ಯೆ ಮಾಡಿ ತಿಪ್ಪೆಗೆ ಎಸೆದಿದ್ದಾನೆ.ಈ ಮಧ್ಯೆ, ಮಾ.5ರಂದು ಅಂಬಡಗಟ್ಟಿ ಗ್ರಾಮದ ಮರಿಯಮ್ಮನ ಗುಡಿ ಓಣಿಯ ಬಳಿ ನವಜಾತ ಹೆಣ್ಣು ಹಸುಗೂಸೊಂದು ಪತ್ತೆಯಾಗಿತ್ತು. ಅದನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆಯಲಾಗಿದೆ ಎಂದು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಮಹಾಬಳೇಶ ಮತ್ತು ಸಿಮ್ರಾನ್ ಪ್ರೇಮ ಕಥೆಯ ವಿಚಾರ ತಿಳಿಯಿತು. ನಂತರ, ಅವರಿಬ್ಬರನ್ನೂ ಪೊಲೀಸ್ ಠಾಣೆಗೆ ಕರೆಸಿ, ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂತು. ನಂತರ, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.