ಕನ್ನಡಪ್ರಭ ವಾರ್ತೆ ಕೋಲಾರ
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಅವರು ಮಾವು ಬೆಳೆಗಾರರ ಮತ್ತು ರೈತರ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರಿಹಾರ ಘೋಷಿಸಿ ಮಾವು ಬೆಳೆಗಾರರಿಗೆ ನೆಮ್ಮದಿ ತಂದಿದ್ದಾರೆ. ಇದಕ್ಕಾಗಿ ಸಹಕರಿಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹ್ವಾಣ್ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಜೊತೆಗೆ ರೈತರ ಸಮಸ್ಯೆಗಳನ್ನು ಆಲಿಸಿ ಮಾರುಕಟ್ಟೆ ಹಸ್ತಕ್ಷೇಪ ಹಾಗೂ ಖರೀದಿ ವ್ಯವಸ್ಥೆ ಕುರಿತಂತೆ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸರ್ಕಾರದ ಜವಾಬ್ದಾರಿಯುತ ನಿಲುವನ್ನು ತೋರಿಸುತ್ತದೆ. ಕೇಂದ್ರ ಸರ್ಕಾರ ಮಾವು ಬೆಳೆಗಾರರ ವಿಚಾರದಲ್ಲಿ ಸಕರಾತ್ಮಕ ನಿಲುವನ್ನು ತೋರಿದೆ. ಆದರೆ ಇದು ಕೇವಲ ತಾತ್ಕಾಲಿಕ ಪರಿಹಾರ ಅಷ್ಟೇ. ಇಂತಹ ಸಮಸ್ಯೆಗಳನ್ನು ಪ್ರತಿವರ್ಷ ಮರುಕಳಿಸದಂತೆ ಶಾಶ್ವತ ಪರಿಹಾರ ನೀಡಬೇಕೆಂದು ಅವರು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ಆಗ್ರಹಿಸಿದರು.ರಾಜ್ಯದ ಕಾಂಗ್ರೆಸ್ ಸರ್ಕಾರದ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಪಾಲಿನ ಬೆಂಬಲ ಬೆಲೆಯನ್ನು ಈ ಕೂಡಲೇ ಘೋಷಿಸಿ ರೈತರ ಕಷ್ಟಕ್ಕೆ ನಿಲ್ಲಬೇಕಾಗಿದೆ. ಮಾವು ಬೆಳೆಗಾರರು ಪ್ರತಿ ವರ್ಷ ಮಳೆ, ಗಾಳಿ ಸಮಸ್ಯೆಯ ಜೊತೆಗೆ ಬೆಲೆಯ ಸಮಸ್ಯೆಗಳನ್ನೂ ನಿರಂತರವಾಗಿ ಎದುರಿಸಬೇಕಾಗಿದ್ದು ಇದಕ್ಕಾಗಿ ಶಾಶ್ವತವಾದ ಪರಿಹಾರವನ್ನು ರೂಪಿಸಿ ಮಾವು ಬೆಳಗಾರರನ್ನು ರಕ್ಷಣೆ ಮಾಡಬೇಕಾಗಿದೆ ಎಂದು ನಾರಾಯಣಗೌಡ ಒತ್ತಾಯಿಸಿದರು,
ಜಿಲ್ಲೆಯ ಮಾವು ಬೆಳೆಗಾರರ ಸಂಕಷ್ಟವನ್ನು ಅರಿತು ರೈತಪರ ನಿಂತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಅಂಕಿ ಅಂಶಗಳ ಪ್ರಕಾರ ಸರ್ಕಾರಕ್ಕೆ ಕಳುಹಿಸಿ ಬೆಂಬಲ ಬೆಲೆಗೆ ರೈತಪರ ಕಾಳಜಿ ವಹಿಸಿದ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೂ ರೈತ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುವೆ. ಜೊತೆಗೆ ಮಾವು ಖರೀದಿ ಮಿತಿಯನ್ನು ಸಡಿಲ ಮಾಡಬೇಕು ಇಂದಿನಿಂದಲೇ ಬೆಂಬಲ ಬೆಲೆ ಯೋಜನೆಯಲ್ಲಿ ಮಾವು ಖರೀದಿ ಮಾಡಬೇಕು. ಜೊತೆಗೆ ಖರೀದಿ ಕೇಂದ್ರಗಳಲ್ಲಿ ಸಮಸ್ಯೆ ಆಗದಂತೆ ಕ್ರಮವಹಿಸಲು ಪ್ರತಿ ೫ ಹಳ್ಳಿಗೆ ಒಂದು ಖರೀದಿ ಕೇಂದ್ರ ತೆರೆಯಬೇಕೆಂದು ಒತ್ತಾಯಿಸಿದರು.
ಸಂಘದ ರಾಜ್ಯ ಮುಖಂಡ ಬಂಗವಾದಿ ನಾಗರಾಜ್‌ಗೌಡ, ಮಂಗಸಂದ್ರ ತಿಮ್ಮಣ್ಣ, ತಾಲೂಕು ಅಧ್ಯಕ್ಷ ತರಬನಹಳ್ಳಿ ಆಂಜಿನಪ್ಪ, ವಾನರಾಶಿ ವೀರಭದ್ರಪ್ಪ, ರಾಜೇಂದ್ರರೆಡ್ಡಿ, ಪುತ್ತೇರಿ ರಾಜು, ಗಿರೀಶ್ ಇದ್ದರು.