ಆಸ್ಪತ್ರೆಗಳಿಗೆ ನೀರಿನ ಅಭಾವ: ರೋಗಿಗಳು, ಸಿಬ್ಬಂದಿ ಪರದಾಟ

KannadaprabhaNewsNetwork |  
Published : Jun 27, 2026, 01:30 AM IST
ಕಕಕಕ | Kannada Prabha

ಸಾರಾಂಶ

ಜನರ ಜೀವ ಉಳಿಸುವ ಹೊಣೆ ಹೊತ್ತಿರುವ ಆಸ್ಪತ್ರೆಗಳೇ ಇಂದು ನೀರಿನ ಕೊರತೆಯ ಸಂಕಷ್ಟಕ್ಕೆ ಸಿಲುಕಿವೆ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ದೈನಂದಿನ ಕಾರ್ಯನಿರ್ವಹಣೆಗೆ ಅಗತ್ಯವಿರುವ ನೀರಿನ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಪರಿಣಾಮ ಆರೋಗ್ಯ ಸೇವೆಯ ಗುಣಮಟ್ಟದ ಮೇಲೆಯೇ ಬೀಳುವ ಆತಂಕ ಎದುರಾಗಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಜನರ ಜೀವ ಉಳಿಸುವ ಹೊಣೆ ಹೊತ್ತಿರುವ ಆಸ್ಪತ್ರೆಗಳೇ ಇಂದು ನೀರಿನ ಕೊರತೆಯ ಸಂಕಷ್ಟಕ್ಕೆ ಸಿಲುಕಿವೆ. ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ದೈನಂದಿನ ಕಾರ್ಯನಿರ್ವಹಣೆಗೆ ಅಗತ್ಯವಿರುವ ನೀರಿನ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಇದರ ಪರಿಣಾಮ ಆರೋಗ್ಯ ಸೇವೆಯ ಗುಣಮಟ್ಟದ ಮೇಲೆಯೇ ಬೀಳುವ ಆತಂಕ ಎದುರಾಗಿದೆ.ಜಿಲ್ಲೆಯ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾದ ಬಿಮ್ಸ್ ಆಸ್ಪತ್ರೆ ಪ್ರತಿದಿನ ಸಾವಿರಾರು ಒಳರೋಗಿಗಳು ಮತ್ತು ಹೊರರೋಗಿಗಳಿಗೆ ಸೇವೆ ನೀಡುತ್ತಿದೆ. ನೂರಾರು ವೈದ್ಯರು, ನರ್ಸ್‌ಗಳು ಮತ್ತು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ನೀರಿನ ಅಭಾವದಿಂದ ವಾರ್ಡ್‌ಗಳ ಸ್ವಚ್ಛತೆ, ಶೌಚಾಲಯಗಳ ನಿರ್ವಹಣೆ, ರೋಗಿಗಳ ಬಟ್ಟೆ ಹಾಗೂ ಹಾಸಿಗೆಗಳ ಶುಚೀಕರಣ ಮತ್ತು ಮೂಲಭೂತ ಸೌಲಭ್ಯಗಳ ಒದಗಿಕೆಯಲ್ಲಿ ತೊಂದರೆ ಉಂಟಾಗಿದೆ. ಅನೇಕ ಬಾರಿ ರೋಗಿಗಳು ಮತ್ತು ಅವರ ಸಂಬಂಧಿಕರು ಕುಡಿಯುವ ನೀರಿಗಾಗಿ ಆಸ್ಪತ್ರೆ ಆವರಣದಲ್ಲೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಗ್ರಾಮೀಣ ಭಾಗದ ಜನರಿಗೆ ಪ್ರಮುಖ ಆರೋಗ್ಯ ಸೇವಾ ಕೇಂದ್ರಗಳಾಗಿರುವ ಈ ಆಸ್ಪತ್ರೆಗಳಲ್ಲಿ ನೀರಿನ ಕೊರತೆ ಸಿಬ್ಬಂದಿ ಹಾಗೂ ರೋಗಿಗಳಿಗೆ ತೀವ್ರ ಸಂಕಷ್ಟ ಉಂಟುಮಾಡಿದೆ. ಪ್ರಸೂತಿ ವಾರ್ಡ್‌ಗಳಲ್ಲಿ ನೈರ್ಮಲ್ಯ ಕಾಪಾಡುವುದು ಸವಾಲಾಗಿದ್ದು, ತುರ್ತು ಚಿಕಿತ್ಸಾ ವಿಭಾಗ ಮತ್ತು ಒಳರೋಗಿಗಳ ವಾರ್ಡ್‌ಗಳಲ್ಲಿ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀಳುತ್ತಿದೆ.ವಿಶೇಷವಾಗಿ ಬೇಸಿಗೆಯಲ್ಲಿ ಆಸ್ಪತ್ರೆಗಳಲ್ಲಿ ನೀರಿನ ಬಳಕೆ ಹೆಚ್ಚಾಗುತ್ತದೆ. ರೋಗಿಗಳ ಕುಡಿಯುವ ನೀರು, ಅಡುಗೆ, ಶೌಚಾಲಯ, ವಾರ್ಡ್‌ಗಳ ಸ್ವಚ್ಛತೆ, ವೈದ್ಯಕೀಯ ಉಪಕರಣಗಳ ತೊಳಕು, ಕೈ ತೊಳೆಯುವ ವ್ಯವಸ್ಥೆ , ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಅಗತ್ಯಗಳಿಗೆ ನಿರಂತರ ನೀರು ಬೇಕಾಗುತ್ತದೆ. ಆದರೆ ನೀರಿನ ಲಭ್ಯತೆ ಕಡಿಮೆಯಾಗಿರುವುದರಿಂದ ಹಲವು ಆಸ್ಪತ್ರೆಗಳು ಕನಿಷ್ಠ ಅಗತ್ಯಗಳನ್ನು ಪೂರೈಸುವುದಕ್ಕೂ ಪರದಾಡುತ್ತಿವೆ.ಚಿಕ್ಕೋಡಿ ತಾಲೂಕು ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗಿದ್ದು, ರೋಗಿಗಳಿಗೆ ಹಾಗೂ ಆಸ್ಪತ್ರೆಯ ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಿದೆ. ಎರಡು ಕೊಳವೆ ಭಾವಿಗಳ ಮೂಲಕ ಈ ಆಸ್ಪತ್ರೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದಾಗಿ ಕೊಳವೆ ಬಾವಿಯಿಂದ ನೀರು ನಿರೀಕ್ಷಿತ ಮಟ್ಟದಲ್ಲಿ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ. ತಾತ್ಕಾಲಿಕವಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಎರಡು ದಿನದಲ್ಲಿ ಶಾಶ್ವತ ಪರಿಹಾರಕ್ಕಾಗಿ ಸಂಬಂಧಿತ ಇಲಾಖೆಗಳೊಂದಿಗೆ ನಮನ್ವಯ ಸಾಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಈಶ್ವರಪ್ಪ ಗಡಾದ ತಿಳಿಸಿದ್ದಾರೆ.ಖಾಸಗಿ ಆಸ್ಪತ್ರೆಗಳಿಗೂ ಸಂಕಷ್ಟ:

ನೀರಿನ ಕೊರತೆಯ ಬಿಸಿ ಖಾಸಗಿ ಆಸ್ಪತ್ರೆಗಳಿಗೂ ತಟ್ಟಿದೆ. ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನೀರಿನ ಕೊರತೆ ಉಂಟಾಗಿದೆ. ತುರ್ತು ಸೇವೆಗಳಲ್ಲಿ ನೀರಿನ ಕೊರತೆಯಿಂದಾಗಿ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ತೊಂದರೆ ಅನುಭವಿಸುವಂತಾಗಿದೆ. ಶಸ್ತ್ರಚಿಕಿತ್ಸೆಗೂ ನೀರಿನ ಅಭಾವದ ಬಿಸಿ ತಟ್ಟಿದೆ. ನಗರದಲ್ಲಿನ ಅನೇಕ ಆಸ್ಪತ್ರೆಗಳು ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಿಕೊಳ್ಳುತ್ತಿವೆ. ಒಂದು ಟ್ಯಾಂಕರ್ ನೀರಿಗೆ ಸಾಮಾನ್ಯವಾಗಿ ಸುಮಾರು ₹2,000 ವೆಚ್ಚವಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ₹3,000 ಪಾವತಿಸಬೇಕಾಗಿದೆ. ಹೀಗಾಗಿ ಆಸ್ಪತ್ರೆಗಳ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಿದ್ದು, ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳು ಹೆಚ್ಚುವರಿ ಆರ್ಥಿಕ ಒತ್ತಡ ಎದುರಿಸುತ್ತಿವೆ.ಬೆಳಗಾವಿ ನಗರದಲ್ಲಿ ಈಗಾಗಲೇ ಟ್ಯಾಂಕರ್ ನೀರಿನ ಬೇಡಿಕೆ ಹೆಚ್ಚಾಗಿದೆ. ವಸತಿ ಪ್ರದೇಶಗಳ ಜೊತೆಗೆ ಆಸ್ಪತ್ರೆಗಳು, ವಸತಿ ನಿಲಯಗಳು ಹಾಗೂ ಕೈಗಾರಿಕೆಗಳೂ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ. ಬೇಡಿಕೆ ಹೆಚ್ಚಿದಂತೆ ಟ್ಯಾಂಕರ್ ದರದಲ್ಲೂ ಏರಿಕೆ ಕಂಡುಬಂದಿದೆ.ಸೋಂಕಿನ ಅಪಾಯ ಹೆಚ್ಚುವ ಆತಂಕ:

ಆಸ್ಪತ್ರೆಗಳಲ್ಲಿ ನೀರಿನ ಸಮಸ್ಯೆ ಕೇವಲ ಕುಡಿಯುವ ನೀರಿನ ಪ್ರಶ್ನೆಯಲ್ಲ. ಸೋಂಕು ನಿಯಂತ್ರಣ, ಸ್ವಚ್ಛ ವಾತಾವರಣ, ರೋಗಿಗಳ ಸುರಕ್ಷತೆ ಹಾಗೂ ಆರೋಗ್ಯ ಸಿಬ್ಬಂದಿಯ ಕಾರ್ಯಕ್ಷಮತೆಗೆ ನೀರು ಅತ್ಯಗತ್ಯವಾಗಿದೆ. ನೀರಿನ ಕೊರತೆಯಿಂದ ಶೌಚಾಲಯಗಳು ಅಸ್ವಚ್ಛವಾಗುವುದು, ವಾರ್ಡ್‌ಗಳಲ್ಲಿ ದುರ್ವಾಸನೆ ಉಂಟಾಗುವುದು ಹಾಗೂ ಸೋಂಕು ಹರಡುವ ಅಪಾಯ ಹೆಚ್ಚುವ ಸಾಧ್ಯತೆಯಿದೆ. ಇದು ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.ಜನರ ಆರೋಗ್ಯ ರಕ್ಷಣೆಯ ಕೇಂದ್ರಗಳಾಗಿರುವ ಆಸ್ಪತ್ರೆಗಳು ಇಂದು ನೀರಿಗಾಗಿ ಪರದಾಡುವ ಸ್ಥಿತಿಗೆ ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಿಮ್ಸ್ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಆದ್ಯತೆಯ ಮೇರೆಗೆ ನಿರಂತರ ಮತ್ತು ಸಮರ್ಪಕ ನೀರು ಪೂರೈಕೆ ಕಲ್ಪಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ರೋಗಿಗಳ ಚಿಕಿತ್ಸೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.

ಡಾ.ಈಶ್ವರಪ್ಪ ಗಡಾದ,

ಜಿಲ್ಲಾ ಆರೋಗ್ಯಾಧಿಕಾರಿ, ಬೆಳಗಾವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿ ಸಂಕೋಲೆಯಿಂದ ಸಮಾಜ ಬಿಡುಗಡೆಯಾಗಲಿ
ಭೋವಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ