ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿ ಕೊಲೆಯಾದ!

KannadaprabhaNewsNetwork |  
Published : Feb 03, 2024, 01:47 AM IST
ಕೊಲೆ | Kannada Prabha

ಸಾರಾಂಶ

ವಿಜಯ ಮತ್ತು ಅಜರ್‌ ಆತ್ಮೀಯ ಸ್ನೇಹಿತರು. ಅಜರ್‌ನ ಪತ್ನಿಗೆ ವಿಜಯ ಮೇಸೆಜ್‌ ಹಾಗೂ ಕಾಲ್‌ ಮಾಡಿ ಕಿರುಕುಳ ನೀಡುತ್ತಿದ್ದರಿಂದ ಬುದ್ಧಿವಾದ ಹೇಳಿದರೂ ಕೇಳದಾಗ ಕೊಲೆ ಮಾಡಿದ ಅಜರ್

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿನ ಎಂಟಿಎಸ್‌ ಕಾಲನಿಯ ಪಾಳುಬಿದ್ದ ಜಾಗೆಯಲ್ಲಿ ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾದ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸ್ನೇಹಿತ ಪತ್ನಿಯ ಮೇಲೆ ಕಣ್ಣು ಹಾಕಿದ್ದೇ ಕೊಲೆಗೆ ಕಾರಣ ಎನ್ನುವ ಸತ್ಯ ಬೆಳಕಿಗೆ ಬಂದಿದೆ.

ಮಾರುತಿನಗರದ ವಿಜಯ ಬಸವ (24) ಎಂಬಾತನ ಶವ ಎರಡು ದಿನದ ಹಿಂದೆ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈತ ಖಾಸಗಿ ಮೊಬೈಲ್‌ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಮಂಟೂರ ರಸ್ತೆಯ ಅಜರ್‌ ಎಂಬಾತ ಕೊಲೆ ಮಾಡಿದ ಆರೋಪಿ.

ವಿಜಯ ಮತ್ತು ಅಜರ್‌ ಆತ್ಮೀಯ ಸ್ನೇಹಿತರು. ಅಜರ್‌ನ ಪತ್ನಿಗೆ ವಿಜಯ ಮೇಸೆಜ್‌ ಹಾಗೂ ಕಾಲ್‌ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಈ ಬಗ್ಗೆ ಅಜರ್‌ನಿಗೆ ಪತ್ನಿ ತಿಳಿಸಿದ್ದಾಳೆ. ಅಜರ್‌ ಒಂದೆರಡು ಬಾರಿ ವಿಜಯಗೆ ಬುದ್ಧಿವಾದ ಹೇಳಿದ್ದಾನೆ. ಆದರೂ ಆತ ಕೇಳಿರಲಿಲ್ಲ. ತನ್ನ ಚಾಳಿಯನ್ನು ಮುಂದುವರಿಸಿದ್ದನಂತೆ. ಹೀಗಾಗಿ, ಈತನಿಗೆ ಪಾಠ ಕಲಿಸಬೇಕೆಂದು ಪಾಳುಬಿದ್ದ ಜಾಗೆಯಲ್ಲಿ ಅಜರ್‌ ಕರೆಸಿದ್ದಾನೆ. ಆತನೊಂದಿಗೆ ಕುಡಿದಿದ್ದಾನೆ. ಈ ವೇಳೆ ಮತ್ತೊಮ್ಮೆ ಬುದ್ಧಿವಾದ ಹೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ವಿಜಯನ ಮೇಲೆ ಅಜರ್‌ ಕಲ್ಲು ಎತ್ತಿಹಾಕಿದ್ದಾನೆ. ಆಗ ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿ ಅಲ್ಲಿಂದ ಪರಾರಿಯಾಗಿದ್ದ.

ಮರುದಿನ ಬೆಳಗ್ಗೆ ಕೊಲೆಯಾದ ಬಗ್ಗೆ ಮಾಹಿತಿ ತಿಳಿದು ಪೊಲೀಸ್‌ ಕಮಿಷನರೇಟ್‌, ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ, ಮೊಬೈಲ್‌ ಕರೆಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಮಿಷನರ್‌ ರೇಣುಕಾ ಸುಕುಮಾರ, ಅಜರ್‌ನ ಪತ್ನಿಗೆ ವಿಜಯ ಕಿರುಕುಳ ನೀಡುತ್ತಿದ್ದನಂತೆ. ಹೀಗಾಗಿ ಆತನ ಮೇಲೆ ಕಲ್ಲು ಎತ್ತಿಹಾಕಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಅಜರ್‌ ಎಂಬಾತ ಒಬ್ಬನೇ ಈ ಕೃತ್ಯವನ್ನು ಎಸಗಿದ್ದಾನೆ. ಆರೋಪಿಯನ್ನು ಆಗಲೇ ಬಂಧಿಸಲಾಗಿದೆ ಎಂದು ತಿಳಿಸಿದರು.

ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?