ಚನ್ನಪಟ್ಟಣ: ರಾತ್ರಿ ಪಾಳಿಗೆ ಹೊರಟ್ಟಿದ್ದ ಮುಖ್ಯಪೇದೆಯೊಬ್ಬರು ದ್ವಿಚಕ್ರ ವಾಹನ ಸ್ಕಿಡ್ ಆಗಿ ಕೆರೆಗೆ ಬಿದ್ದು ಸಾವನ್ನಪಿರುವ ಘಟನೆ ತಾಲೂಕಿ ಮತ್ತೀಕೆರೆ- ಶೆಟ್ಟಿಹಳ್ಳಿ ಕೆರೆಯಲ್ಲಿ ಸಂಭವಿಸಿದೆ.ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆ ಲಕ್ಷ್ಮಣ್ (50) ಮೃತಪಟ್ಟವರು. ತಾಲೂಕಿನ ಮತ್ತೀಕೆರೆ-ಶೆಟ್ಟಿಹಳ್ಳಿ ಗ್ರಾಮದ ಲಕ್ಷ್ಮಣ್ ಸೋಮವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ರಾತ್ರಿ ಪಾಳಿಯ ಕೆಲಕ್ಕೆ ಹೋಗುವುದಾಗಿ ತಿಳಿಸಿ ಹೋಗಿದ್ದರು. ರಾತ್ರಿ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿತ್ತು. ಮಂಗಳವಾರ ಬೆಳಗ್ಗೆ ಅವರ ದ್ವಿಚಕ್ರ ವಾಹನ ಕೆರೆಯ ಮೇಲೆ ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಕೆರೆಯಲ್ಲಿ ತೇಲುತ್ತಿದ್ದ ಲಕ್ಷ್ಮಣ್ ಅವರ ಶವವನ್ನು ಪೊಲೀಸರು ಮೇಲೆತ್ತಿದ್ದಾರೆ. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.