ಮುಖ್ಯಮಂತ್ರಿ ಶಿವಕುಮಾರ್ ಅವರು ಸೆ.19ರಂದು ಬಾಳೆಹೊನ್ನೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಂಗಳವಾರ ಕಾರ್ಯಕ್ರಮದ ಸ್ಥಳ ವೀಕ್ಷಣೆ ನಡೆಸಿದರು. ಕಾರ್ಯಕ್ರಮ ನಡೆಯುವ ಪಟ್ಟಣದ ಕಲಾರಂಗ ಕ್ರೀಡಾಂಗಣ ಹಾಗೂ ವಿದ್ಯಾಗಣಪತಿ ಸಮುದಾಯ ಭವನದ ಸ್ಥಳವನ್ನು ಶಾಸಕ ಟಿ.ಡಿ.ರಾಜೇಗೌಡ ಕಾಂಗ್ರೆಸ್ ಮುಖಂಡರು ಹಾಗೂ ಗಣಪತಿ ಸಮಿತಿಯ ಪದಾಧಿಕಾರಿಗಳೊಂದಿಗೆ ವೀಕ್ಷಣೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣ, ಗಣಪತಿ ಸಮುದಾಯ ಭವನದಲ್ಲಿ ಈಗಾಗಲೇ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ಈಗಾಗಲೇ ಪೆಂಡಾಲ್ ನಿರ್ಮಿಸಲಾಗಿದೆ. ಇದೇ ಪೆಂಡಾಲ್ ಅನ್ನು ವಿಸ್ತರಿಸಿ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕು.
ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ಸ್ಥಳೀಯ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಒಗ್ಗೂಡಿ ಸಹಕರಿಸಬೇಕು. ಕಾರ್ಯಕ್ರಮಕ್ಕೆ ಅಗತ್ಯವಿರುವ ಖುರ್ಚಿ, ಶಾಮಿಯಾನ, ಆಗಮಿಸಿದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು.
ಮುಖ್ಯಮಂತ್ರಿಗಳ ಕಾರ್ಯಕ್ರಮವಾದ್ದರಿಂದ ಅಗತ್ಯ ಶಿಷ್ಟಾಚಾರಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಲಿದ್ದಾರೆ. ಮಲೆನಾಡಿನ ಸಮಸ್ಯೆ ಆಲಿಸಲು ಸಿಎಂ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಅಗತ್ಯ ಸಹಕಾರ ನೀಡಿ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಕೋರಿದರು.
ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ, ಗ್ರಾಪಂ ಆಡಳಿತಾಧಿಕಾರಿ ಪ್ರೀತಮ್ ಕುಮಾರ್, ಪ್ರಮುಖರಾದ ಎಂ.ಎಸ್.ಚನ್ನಕೇಶವ್, ಟಿ.ಎಂ.ಉಮೇಶ್ ಕಲ್ಮಕ್ಕಿ, ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಎಂ.ಎಸ್.ಜಯಪ್ರಕಾಶ್, ರವಿಚಂದ್ರ, ಹಿರಿಯಣ್ಣ, ಎಚ್.ಎಸ್.ಕೌಶಿಕ್ ಪಟೇಲ್, ಅಭಿಷೇಕ್, ಮಹೇಶ್ ಆಚಾರ್ಯ, ಎಂ.ಆರ್.ರವಿಗೌಡ, ಸುಧಾಕರ್, ಇಬ್ರಾಹಿಂ ಶಾಫಿ, ಟಿ.ಎಂ.ವೆಂಕಟೇಶ್ ಮತ್ತಿತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.