Gauri-Ganesha festival celebrations in Balehonnur
ಬಾಳೆಹೊನ್ನೂರು: ಬಾಳೆಹೊನ್ನೂರು ಹೋಬಳಿಯಾದ್ಯಂತ ಸೋಮವಾರ ನಿಜ ಭಾದ್ರಪದ ಮಾಸದಲ್ಲಿ ಸ್ವರ್ಣ ಗೌರಿ ವ್ರತ ಹಾಗೂ ಗಣೇಶ ಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಈ ಬಾರಿ ಗೌರಿ ಹಬ್ಬ ಹಾಗೂ ಗಣೇಶ ಚತುರ್ಥಿ ಒಂದೇ ದಿನ ಬಂದಿದ್ದು, ಗೌರಿ ಹಬ್ಬದ ಅಂಗವಾಗಿ ಮಹಿಳೆಯರು ಕೆರೆಕಟ್ಟೆ, ಬಾವಿ, ಹಳ್ಳ ಕೊಳ್ಳಗಳಿಗೆ ತೆರಳಿ ಗೌರಿ ಪೂಜೆ ನೆರವೇರಿಸಿ, ಮನೆಗಳಲ್ಲಿ ಕಲಶ ಪ್ರತಿಷ್ಠಾಪಿಸಿದರು. ಮುತ್ತೈದೆಯರಿಗೆ ಸಾಂಪ್ರದಾಯಿಕವಾಗಿ ಬಾಗಿನ ಕೊಡುವ ಸಂಪ್ರದಾಯ ಎಲ್ಲೆಡೆ ಕಂಡುಬಂದಿತ್ತು. ಗೌರಿ ಪೂಜೆಗೆ ಅತೀ ಶ್ರೇಷ್ಠವಾದ ಗೌರಿ ಹೂಗಳನ್ನು ಇಟ್ಟು ಪೂಜಿಸಿದ ವನಿತೆಯರು ಗೌರಿ ದಾರಗಳನ್ನು ಮನೆ ಮಂದಿಗೆ ಕಟ್ಟಿ ಸಂಭ್ರಮಿಸಿದರು.ಚತುರ್ಥಿ ಅಂಗವಾಗಿ ಎಲ್ಲಾ ದೇವಸ್ಥಾನ ಹಾಗೂ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿನಾಯಕನನ್ನು ಪ್ರತಿಷ್ಠಾಪಿಸಿ ಗಣಪತಿಗೆ ಕಾಯಿ ಕಡುಬು, ಮೋದಕ, ಕರ್ಜಿಕಾಯಿ, ಕಬ್ಬು, ಚಕ್ಕುಲಿ, ಉಂಡೆಗಳನ್ನು ನೈವೇದ್ಯ ಮಾಡಲಾಯಿತು. ಇದರೊಂದಿಗೆ ಗಣೇಶನಿಗೆ ಪ್ರಿಯವಾದ ಗರಿಕೆಯನ್ನೂ ಸಹ ಅರ್ಚನೆ ಮಾಡಲಾಯಿತು.
ಹೋಬಳಿಯ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ಆಯೋಜಿಸಿದ್ದ ಸಾರ್ವಜನಿಕ ಗಣಪತಿ ಉತ್ಸವದಲ್ಲಿ ಸ್ಥಳೀಯ ಕಲಾವಿದರು ತಯಾರಿಸಿದ ವಿವಿಧ ಮಾದರಿಯ ಆಕರ್ಷಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.ಪಟ್ಟಣದ ವಿದ್ಯಾಗಣಪತಿ ಸಮಿತಿ ವತಿಯಿಂದ ೬೮ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಅರ್ಚಕ ಕೆ.ಎಸ್. ಪ್ರಕಾಶ್‌ಭಟ್ ನೇತೃತ್ವದಲ್ಲಿ ವಿದ್ಯಾಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಈ ಮೂಲಕ 68ನೇ ವರ್ಷದ ಸಂಭ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ತಂಗಳಮನೆಯ ಕಲಾವಿದ ಪ್ರಸಾದ್ ಆಚಾರ್ಯ ರಚಿಸಿರುವ ಬೃಹತ್ ವಿಗ್ರಹ ಭಕ್ತರ ಗಮನ ಸೆಳೆಯುತ್ತಿದೆ.
ದೇವರ ಸನ್ನಿಧಿಯಲ್ಲಿ ಅಷ್ಟೋತ್ತರ ಕುಂಕುಮಾರ್ಚನೆ, ಸಹಸ್ರ ನಾಮಾರ್ಚನೆ, ಸಂಕಲ್ಪ ಪೂಜೆ, ಮಹಾ ಪೂಜೆ ಸಹ ನೆರವೇರಿಸಲಾಯಿತು. ನೂರಾರು ಭಕ್ತರು ಪಾಲ್ಗೊಂಡು ಗಣಪತಿಯ ದರ್ಶನ ಪಡೆದರು. ಸಂಜೆ ಬೃಹತ್ ವೇದಿಕೆಯಲ್ಲಿ ಸ್ಥಳೀಯ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಿತು.ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಮಿತಿಯ ಅಧ್ಯಕ್ಷ ಕೆ.ಎಸ್.ಚನ್ನಗಿರಿ, ಕಾರ್ಯದರ್ಶಿ ಸುರೇಂದ್ರ, ಸಿ.ವಿ.ಸುನೀಲ್, ಕೋಶಾಧಿಕಾರಿ ತ್ರಿವಿಕ್ರಮಭಟ್, ಸಹ ಖಜಾಂಚಿ ಸುಧಾಕರ್, ಪ್ರಮುಖರಾದ ಟಿ.ಆರ್.ಧರ್ಮಪ್ಪಗೌಡ, ಎಂ.ಎಸ್.ಜಯಪ್ರಕಾಶ್, ಟಿ.ಎಂ. ಉಮೇಶ್, ಟಿ.ಎಂ. ನಾಗೇಶ್ ಕಲ್ಮಕ್ಕಿ, ಕೆ.ಎಸ್. ಹರೀಶ್, ಕೆ.ಕೆ.ವೆಂಕಟೇಶ್, ಹಿರಿಯಣ್ಣ, ಎಂ.ಎಸ್. ಅರುಣೇಶ್, ಬಿ.ಕೆ. ಮಧುಸೂದನ್ ಮತ್ತಿತರರು ಪಾಲ್ಗೊಂಡಿದ್ದರು.
ರಂಭಾಪುರಿ ಪೀಠದಲ್ಲಿ:ರಂಭಾಪುರಿ ಪೀಠದಲ್ಲಿಯೂ ಗಣೇಶ ಚತುರ್ಥಿಯನ್ನು ಸಡಗರ ಸಂಭ್ರಮದಿಂದ ನಡೆಸಲಾಯಿತು. ಕ್ಷೇತ್ರನಾಥ ವೀರಭದ್ರೇಶ್ವರಸ್ವಾಮಿ ದೇವಾಲಯದಿಂದ ಗಣೇಶ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ವಾದ್ಯಗೋಷ್ಠಿಗಳೊಂದಿಗೆ ತಂದು ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.
ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ರೇಣುಕಾಚಾರ್ಯ ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಶಾಸ್ತ್ರಿ, ಶ್ರೀಪೀಠದ ಸಿಬ್ಬಂದಿ ಚಂದ್ರಶೇಖರಯ್ಯ, ರೇವಣಸಿದ್ದಪ್ಪ ಬೆಳಗಾಂವಕರ, ರೇಣುಕಸ್ವಾಮಿ, ಜಗದೀಶ್, ಶಿವಾನಂದ, ಚಂದ್ರಶೇಖರ್ ಚಿನ್ನು, ಯೋಗೀಶ್, ವಿನೋದ್ ಕುಲಕರ್ಣಿ ಮತ್ತಿತರರು ಇದ್ದರು.ಬಾಳೆಹೊನ್ನೂರು ಹೋಬಳಿಯ ವಿವಿಧೆಡೆಯು ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ರಂಭಾಪುರಿ ಪೀಠ, ಆದರ್ಶನಗರ ಇಟ್ಟಿಗೆ ಸೀಗೋಡು, ಅಕ್ಷರನಗರ, ಪೇಟೆಕೆರೆ, ಸೀಗೋಡು, ಬಂಡಿಹೊಳೆ, ಕಿಚ್ಚಬ್ಬಿ, ಮೇಲ್ಪಾಲ್, ಅರಳೀಕೊಪ್ಪ, ವಾಟುಕೊಡಿಗೆ, ಮುದುಗುಣಿ, ಬನ್ನೂರು, ಹಲಸೂರು, ಕಡ್ಲೇಮಕ್ಕಿ, ಹಿರೇಗದ್ದೆ, ಮಾಗುಂಡಿ, ಜಕ್ಕಣಕ್ಕಿ ಸೇರಿದಂತೆ ವಿವಿಧೆಡೆ ಗಣೇಶ ಸಮಿತಿಗಳು ನಾನಾ ಆಕರ್ಷಕ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದಾರೆ.
ಚತುರ್ಥಿಯೊಂದಿಗೆ ಪಟ್ಟಣದ ಹಲವೆಡೆ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ದೊರೆತಿದ್ದು, ದಿನಂಪ್ರತಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಲವೆಡೆ ಚತುರ್ಥಿ ದಿನದಂದೆ ಗಣೇಶ ವಿಗ್ರಹಗಳನ್ನು ಕೆರೆ, ಹಳ್ಳ, ನದಿಗಳಲ್ಲಿ ವಿಸರ್ಜಿಸಿ ಗಣೇಶೋತ್ಸವ ಸಂಪನ್ನಗೊಳಿಸಿದರು.ಪಟ್ಟಣದ ವಿದ್ಯಾಗಣಪತಿ ಸಮಿತಿಯ ಗಣೇಶೋತ್ಸವದಲ್ಲಿ ಎರಡನೇ ದಿನ ಹರಿಕಥಾ ವಿದ್ವಾನ್ ಅನಂತ ಪದ್ಮನಾಭ ಭಟ್ ಅವರಿಂದ ಭಕ್ತ ಸುಧಾಮ ಎಂಬ ಹರಿಕಥಾ ಪ್ರಸಂಗ ನಡೆಯಿತು. ಸೆ.16ರಂದು ಮಧ್ಯಾಹ್ನ, ಸಂಜೆ ಗಣೇಶನ ಸನ್ನಿಧಿಯಲ್ಲಿ ಸಾರ್ವಜನಿಕ ಪೂಜೆ, ರಾತ್ರಿ ೮ರಿಂದ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
೧೫ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ವಿದ್ಯಾಗಣಪತಿ.