ಉನ್ನತ ಸ್ಥಾನಕ್ಕೆ ಏರಲು ಶಿಕ್ಷಣ ಹೆಚ್ಚು ಸಹಕಾರಿ: ಡಾ.ಎಸ್. ಉಮೇಶ್

KannadaprabhaNewsNetwork | Published : Feb 28, 2024 2:38 AM

ಸಾರಾಂಶ

ಕಲಿಕೆಯಲ್ಲಿ ಮಿತಿ ಇರಬಾರದು. ಜ್ಞಾನದ ದೃಷ್ಟಿಯಿಂದ ಎಲ್ಲವನ್ನು ಕಲಿಯಬೇಕಾದದ್ದು ಅಗತ್ಯವಾದದ್ದು. ಕಲಿಕೆಯನ್ನು ಅಳವಡಿಕೆ ಮಾಡಿಕೊಳ್ಳಬೇಕು. ಅದರಿಂದ ಗಳಿಕೆಯತ್ತ ಮುಖ ಮಾಡಬೇಕು. ಇದು ಜೀವನದಲ್ಲಿ ಸಾಧನೆಗೆ ದಾರಿ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರಲು ಉನ್ನತ ಶಿಕ್ಷಣ ಹೆಚ್ಚು ಸಹಕಾರಿಯಾಗುತ್ತದೆ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಸ್. ಉಮೇಶ್ ತಿಳಿಸಿದರು.

ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ನಿಮ್ಮ ಗುರಿಯತ್ತ ಗಮನ- ಸಂವಾದ ಕಾರ್ಯಕ್ರಮದಲ್ಲಿ ಬಿಕಾಂ, ಬಿಬಿಎ, ಬಿಸಿಎ ಬಳಿಕ ಮುಂದೇನು? ಬಗ್ಗೆ ಮಾತನಾಡಿದ ಅವರು, ಇಂದಿನ ಜಗತ್ತನ್ನು ಸ್ಪರ್ಧಾತ್ಮಕ ಯುಗ ಎಂದು ಕರೆಯುಲಾಗುತ್ತಿದೆ. ಈ ಸ್ಪರ್ಧೆಗೆ ತಂತ್ರಜ್ಞಾನದ ಅರಿವು ಅತ್ಯಂತ ಮುಖ್ಯವಾದದ್ದು. ಆ ತಂತ್ರಜ್ಞಾನದ ಅರಿವು ವಿದ್ಯಾರ್ಥಿಗಳಿಗೆ ಇರಬೇಕು. ಅದರೊಂದಿಗೆ ಉನ್ನತ ಮಟ್ಟಕ್ಕೆ ಬೆಳೆಯಬೇಕಾದದ್ದು ಇಂದಿನ ಅಗತ್ಯ ಎಂದು ಹೇಳಿದರು.

ಕಲಿಕೆಯಲ್ಲಿ ಮಿತಿ ಇರಬಾರದು. ಜ್ಞಾನದ ದೃಷ್ಟಿಯಿಂದ ಎಲ್ಲವನ್ನು ಕಲಿಯಬೇಕಾದದ್ದು ಅಗತ್ಯವಾದದ್ದು. ಕಲಿಕೆಯನ್ನು ಅಳವಡಿಕೆ ಮಾಡಿಕೊಳ್ಳಬೇಕು. ಅದರಿಂದ ಗಳಿಕೆಯತ್ತ ಮುಖ ಮಾಡಬೇಕು. ಇದು ಜೀವನದಲ್ಲಿ ಸಾಧನೆಗೆ ದಾರಿ ಎಂದು ಅವರು ತಿಳಿಸಿದರು.

ವಾಣಿಜ್ಯ ಕೋರ್ಸ್ ಗಳೆಂದರೆ ಅದು ಬ್ಯಾಂಕಿಂಗ್, ಕಚೇರಿ ಗುಮಾಸ್ತಿಕೆ ಕೆಲಸಗಳಷ್ಟೇ ಅಲ್ಲ. ಈ ಪದವಿಯ ಮೂಲಕವೂ ಯುಪಿಎಸ್ಸಿಯಂತಹ ಕೇಂದ್ರ ಸರ್ಕಾರದ ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬಹುದು ಮತ್ತು ಹುದ್ದೆಗಳನ್ನು ಪಡೆದು ಸಾಧಿಸಬಹುದು. ಇಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಪದವಿ ಒಂದು ಅರ್ಹಸ್ಥಾನ ಅಷ್ಟೇ. ಬಳಿಕ ಪರೀಕ್ಷೆಯಲ್ಲಿ ನೀವು ಆಯ್ದುಕೊಳ್ಳುವ ವಿಷಯಗಳು ನಿಮ್ಮ ವಾಣಿಜ್ಯಕ್ಕೆ ಸಂಬಂಧಿಸಿದವಾದರೂ ಆಗಬಹುದು. ಇಲ್ಲವೇ ವಿಜ್ಞಾನ, ಕಲಾ ವಿಭಾಗಗಳಿಂದಲೂ ನೀವು ಆರಿಸಿಕೊಂಡು ಪರೀಕ್ಷೆಯನ್ನು ಎದುರಿಸಬಹುದು. ಆದರೆ ಆ ಪರೀಕ್ಷೆಯ ಗುಣಮಟ್ಟಕ್ಕೆ ತಕ್ಕಂತೆ ನೀವು ಓದಿಕೊಂಡಿರಬೇಕು. ನಿಮ್ಮ ಉತ್ತರಗಳು ನಿಮ್ಮ ಜ್ಞಾನವನ್ನು ಸಾರುವಂತಿರ

ಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಕಾರ್ಯದರ್ಶಿ ಸೋನಿಯಾ ಉಮಾಪತಿ ರಾಜು ಮಾತನಾಡಿ, ಇ ಕಾಮರ್ಸ್ ಎಂಬುದು ಇಂದು ಎಲ್ಲೆಡೆ ಕೇಳಿ ಬರುತ್ತಿರುವ ವಿಷಯ. ಅದರಲ್ಲಿ ಬೆಳೆಯಲು ವಾಣಿಜ್ಯ ವಿದ್ಯಾರ್ಥಿಗಳಿಗೆ ಹೇರಳವಾದ ಅವಕಾಶಗಳಿವೆ. ಹೀಗಾಗಿ ನೀವು ಅದರತ್ತ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಳ್ಳಬೇಕಾದದ್ದು ಅಗತ್ಯ ಎಂದು ಕಿವಿಮಾತು ಹೇಳಿದರು.

ದಕ್ಷ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ.ಬಿ. ಮಹೇಶ, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

Share this article