ಚನ್ನಪಟ್ಟಣ: ಇತ್ತೀಚೆಗೆ ಮಂಡಿನೋವು ಎಂಬುದು ಬಹುತೇಕರನ್ನು ಕಾಡುತ್ತಿದ್ದು, ಅದರಲ್ಲೂ ರೈತಾಪಿ ವರ್ಗದವರು ಮಂಡಿನೋವಿನಿಂದ ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶ ಜನರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಚಿಕಿತ್ಸಾ ವೆಚ್ಚಗಳು ದುಬಾರಿಯಾಗಿವೆ. ಗ್ರಾಮೀಣ ಪ್ರದೇಶದ ಜನ ಇದಕ್ಕೆ ಅಂಜಿ ಆರೋಗ್ಯ ತಪಾಸಣೆಗಳಿಗೆ ಒಳಗಾಗದೇ ದೂರ ಉಳಿಯುತ್ತಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ತಾಲೂಕಿನ ಜನರ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆರೋಗ್ಯ ಶಿಬಿರದಲ್ಲಿ ಬಿಪಿ, ಶುಗರ್, ಸಾಮಾನ್ಯ ರೋಗ ತಪಾಸಣೆ, ಹೃದಯ ರೋಗ, ಇಎನ್ಟಿ, ಸ್ತ್ರೀ ರೋಗ, ಮಕ್ಕಳ ರೋಗ ತಪಾಸಣೆ, ಶ್ವಾಸಕೋಸ ತಪಾಸಣೆ, ಮಾನಸಿಕ ರೋಗ , ಚರ್ಮ ರೋಗದ ಬಗ್ಗೆ ತಪಾಸಣೆ ನಡೆಸಲಾಯಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದರು.ಸುಮಾರು 65 ಜನ ಮಂಡಿ ನೋವು ತಪಾಸಣೆಗೆ ಒಳಗಾಗಿದ್ದು, ಅವರಲ್ಲಿ 45 ಮಂದಿ ರೋಬೋಟಿಕ್ ಜಾಯಿಂಟ್ ಬದಲಿ ಶಸ್ತ್ರಚಿಕಿತ್ಸೆಗೆ ನೋಂದಣಿ ಮಾಡಿಸಿದರು. 252 ಮಂದಿಗೆ ಉಚಿತ ಕನ್ನಡಕ ವಿತರಿಸಲಾಯಿತು. 60 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.