ಗ್ರಾಮೀಣರಿಗಾಗಿ 15 ದಿನಕ್ಕೊಮ್ಮೆ ಆರೋಗ್ಯ ಶಿಬಿರ

KannadaprabhaNewsNetwork | Published : Apr 22, 2025 1:51 AM

ಸಾರಾಂಶ

ಗ್ರಾಮೀಣರ ಆರೋಗ್ಯದ ಹಿತದೃಷ್ಟಿಯಿಂದ 15 ದಿನಕ್ಕೊಮ್ಮೆ ತಾಲೂಕಾದ್ಯಂತ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಗ್ರಾಮೀಣರ ಆರೋಗ್ಯದ ಹಿತದೃಷ್ಟಿಯಿಂದ 15 ದಿನಕ್ಕೊಮ್ಮೆ ತಾಲೂಕಾದ್ಯಂತ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ತಾಲೂಕಿನ ಮಾಡಬಾಳ್ ಮುಖ್ಯರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಆರ್.ರಾಮಯ್ಯ ಆಸ್ಪತ್ರೆ, ಮಹಾನಾಡು ಕಟ್ಟೆಮನೆ ಮತ್ತು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಆರೋಗ್ಯ ಕಾಳಜಿ ವಹಿಸಬೇಕು. ಪಕ್ಷದ ಕಾರ್ಯಕರ್ತರು ಗ್ರಾಮೀಣರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ವ್ಯವಸ್ಥೆ ಮಾಡಿದ್ದಾರೆ. ವೃದ್ಧರು, ಮಹಿಳೆಯರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ವೈದ್ಯರು ಸಲಹೆ ನೀಡಿದರೆ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಲಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ ಅಥವಾ ಕಿಡ್ನಿ ಹಾಗೂ ಇತರ ಗಂಭೀರ ಕಾಯಿಲೆ ಹೊರತುಪಡಿಸಿ ಬೇರೆಲ್ಲ ಕಾಯಿಲೆಗಳಿಗೂ ನಮ್ಮಲ್ಲೇ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ಹೇಳಿದರು.

ತಾಲೂಕಿನಲ್ಲಿ 15ನೇ ದಿನಕ್ಕೊಮ್ಮೆ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಶಿಬಿರಗಳನ್ನು ಆಯೋಜಿಸಲಾಗುವುದು. ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಹಲ್ಲು, ಕಣ್ಣು, ಮಂಡಿ ನೋವು ಸೇರಿದಂತೆ ಅನೇಕ ರೋಗಗಳಿಗೆ ನುರಿತ ವೈದ್ಯರು ತಪಾಸಣೆ ಮಾಡುವರು. ಗ್ರಾಮೀಣರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಪಕ್ಷದ ಕಾರ್ಯಕರ್ತರು ತಾಲೂಕಿನಲ್ಲಿ ಆರೋಗ್ಯ ಕ್ರಾಂತಿ ಮಾಡುವ ಸಂಕಲ್ಪ ಹೊಂದಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ವಿವಿಧ ಕಾಯಿಲೆಗಳ ಬಗ್ಗೆ ನುರಿತ ವೈದ್ಯರಿಂದ ತಪಾಸಣೆ ಮಾಡಲಾಯಿತು. ಉಚಿತ ಕನ್ನಡಕ ಹಾಗೂ ಔಷಧ ವಿತರಣೆ ಮಾಡಲಾಯಿತು. ಒಂದು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ತಪಾಸಣೆ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪೂಜಾರಿ ಕೆ.ಕೃಷ್ಣಮೂರ್ತಿ, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆಂಚೇಗೌಡ, ಶಿಬಿರ ಆಯೋಜಕರಾದ ಲಿಂಗರಾಜು(ಚಿಕ್ಕಣ್ಣ), ಮುಖಂಡರಾದ ರಂಗಸ್ವಾಮಯ್ಯ, ಮತ್ತಿಕೆರೆ ರಾಜು, ಮೂರ್ತಿ ನಾಯ್ಕ, ನಾಗೇಶ್, ಯತೀಶ್, ಉಡುವೆಗೆರೆ ಸಿದ್ದರಾಜು, ಕಾಂತರಾಜು, ಮಾನಗಲ್ಲು ಮಂಜುನಾಥ್, ಶ್ರೀನಿವಾಸ್, ವಿನಯ್ ಇತರರು ಭಾಗವಹಿಸಿದ್ದರು.

Share this article