ಗದಗ: ಯೋಗ, ವ್ಯಾಯಾಮ ಮತ್ತು ಜ್ಞಾನದ ಕಡೆಗೆ ಹೆಚ್ಚು ಮಹತ್ವ ನೀಡಿದರೆ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಬಾಬಾ ಸೂಪರ್ ಸ್ಟೇಷಾಲಿಟಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಗಣೇಶರಾವ್ ಕುಂದಾಪೂರ ಹೇಳಿದರು.
ಅವರು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದಿಂದ ನಡೆದ ಮಹಿಳಾ ಆರೋಗ್ಯ ಕುರಿತು ತಿಳಿವಳಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ಯಾನ್ಸರ್ ರೋಗವನ್ನು ಬೇಗನೆ ಪತ್ತೆ ಹಚ್ಚಿದರೆ ಮಾತ್ರ ಗುಣಮುಖರಾಗುತ್ತಾರೆ. ದೇಹದಲ್ಲಿ ಇರುವ ಗಂಟುಗಳು ಕ್ಯಾನ್ಸರ ಅಲ್ಲ. ತಜ್ಞ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕ್ಯಾನ್ಸರಲ್ಲಿ ನಾಲ್ಕು ಹಂತಗಳು ಇರುತ್ತವೆ. ತಮಗೆ ಏನಾದರೂ ಸಮಸ್ಯೆಗಳು ಕಂಡು ಬಂದ ತಕ್ಷಣದಲ್ಲಿ ಚಿಕಿತ್ಸೆ ಪಡೆಯಬೇಕು. ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಪ್ರತಿದಿನ ವ್ಯಾಯಾಮ, ಯೋಗ ಮತ್ತು ಜ್ಞಾನವನ್ನು ಮಾಡಬೇಕು. ಭಾರತ ದೇಶದಲ್ಲಿ ಇತ್ತೀಚಿನ ದಿನದಲ್ಲಿ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಬ್ರಿಸ್ಟ್ ಕ್ಯಾನ್ಸರ್ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತಿದೆ. ಆದ್ದರಿಂದ ಮಹಿಳೆಯರು ದೇಹದಲ್ಲಿ ನೋವು ಕಂಡ ತಕ್ಷಣ ತಜ್ಞ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಭಯ ಪಡುವ ಅಗತ್ಯತೆ ಇರುವುದಿಲ್ಲ ಎಂದು ತಿಳಿಸಿದರು.ಡಾ. ಅನುಪಮಾ ಪಿ. ಪಾಟೀಲ ಮಾತನಾಡಿ, ಮಕ್ಕಳು ಇಲ್ಲವೆಂದು ಮರುಗುವ ಬದಲಾಗಿ ಮಕ್ಕಳನ್ನು ಪಡೆಯಲು ತಜ್ಞ ವೈದ್ಯರನ್ನು ಸಂಪರ್ಕಿಸಿ. ಸರಿಯಾಗಿ ಚಿಕಿತ್ಸೆ ಪಡೆದುಕೊಂಡಲಿ ತಾವು ಕೂಡಾ ತಾಯಿತನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಸಹ ಗೌರವ ಕಾರ್ಯದರ್ಶಿ ಸುಷ್ಮಾ.ಎಸ್. ಜಾಲಿ ಪ್ರಾರ್ಥಿಸಿದರು. ಅಧ್ಯಕ್ಷೆ ಸುವರ್ಣಾ ಎಸ್. ಮದರಿಮಠ ಸ್ವಾಗತಿಸಿದರು. ಸುಧಾ ಹುಣಸಿಕಟ್ಟಿ ಹಾಗೂ ಅಪರ್ಣಾ ಎಲ್. ತೋಟದ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ನಿರೂಪಿಸಿದರು. ಸದಸ್ಯೆ ನಂದಾ ಚಂದ್ರು ಬಾಳಿಹಳ್ಳಿಮಠ ವಂದಿಸಿದರು.