ಕನ್ನಡಪ್ರಭ ವಾರ್ತೆ ಮೈಸೂರು
ಅವಧೂತ ಅರ್ಜುನ್ ಗುರೂಜಿ ಶಿಬಿರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸ, ಇತ್ತೀಚೆಗೆ ಆಯುರ್ವೇದದ ಬಗೆಗಿನ ಅಭಿಪ್ರಾಯ ಬಹಳ ಬದಲಾಗಿದೆ. ಗುಣವಾಗುವುದು ತಡ ಎಂಬ ನಂಬಿಕೆ ಈ ಮೊದಲು ಎಲ್ಲರಲ್ಲಿತ್ತು, ಹೀಗಾಗಿ ಇಂಗ್ಲಿಷ್ ಔಷಧದ ಮೊರೆ ಹೋಗುತ್ತಿದ್ದರು. ಆದರೆ ಆಯುರ್ವೇದಲ್ಲಿಯೂ ಅದೇ ರೀತಿಯ ಔಷಧಿಗಳಿವೆ ಎಂಬುದು ಎಲ್ಲರಿಗೂ ಅರಿವಾಗುತ್ತಿದೆ. ಅಲ್ಲದೇ, ಕೊವಿಡ್, ಚಿಕುನ್ ಗುನ್ಯಾ ಸಂದರ್ಭದಲ್ಲಿ ಬಹುತೇಕ ಆಯುರ್ವೇದ ಔಷಧಿಗಳಿಗೆ ಬೇಡಿಕೆ ಹಚ್ಚಾಗಿದೆ ಎಂದು ವಿವರಿಸಿದರು.ಜಿಎಸ್‌ಎಸ್ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ದ್ವಾರಕಾನಾಥ್ ಮಾತನಾಡಿ, ನಗರದಲ್ಲಿ ಕೊರೋನಾ ನಿರ್ವಹಣೆ ಉತ್ತಮವಾಗಿತ್ತು. ಇದಕ್ಕೆ ವೈದ್ಯರೂ ಕಾರಣ. ಇನ್ನು ಪತ್ರಕರ್ತರು ಕೂಡ ಒತ್ತಡದ ನಡುವೆ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳು ಕಾಡುತ್ತವೆ. ಆದ್ದರಿಂದ ಅವರ ಆರೋಗ್ಯದತ್ತ ಕಾಳಜಿಗಾಗಿ ಈ ಶಿಬಿರ ಆಯೋಜಿಸಲಾಗಿದೆ ಎಂದರು.
ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಪತ್ರಕರ್ತರ ಬಗ್ಗೆ ಸಮಾಜದಲ್ಲಿ ಹಲವರಿಗೆ ಒಂದಷ್ಟು ಕಾಳಜಿ ಇದೆ. ಹೀಗಾಗಿ ಅವರ ನೆರವು ಪಡೆದು ಈ ಶಿಬಿರ ಆಯೋಜಿಸಲಾಗಿದೆ. ಆರೋಗ್ಯ ಮತ್ತು ಬಲ ಇರುವವರೆಗೂ ಪತ್ರಕರ್ತರಿಗೆ ಎಲ್ಲರೂ ಗೌರವ ನೀಡುತ್ತಾರೆ. ಇವು ಇಲ್ಲವಾದ ಬಳಿಕ ಯಾರೂ ಮಾತನಾಡಿಸುವುದಿಲ್ಲ. ಹೀಗಾಗಿ ಪತ್ರಕರ್ತರು ಆರೋಗ್ಯದತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಎಲ್.ಎನ್. ಶೆಣೈ, ಚುಟುಕು ಸಾಹಿತ್ಯ ಪರಿಷತ್‌ಸಂಸ್ಥಾಪಕ ಡಾ.ಎಂ.ಜಿ.ಆರ್. ಅರಸ್, ಗೋಪಾಲ್ ಗೌಡ ಆಸ್ಪತ್ರೆಯ ಡಾ. ಸುಶ್ರುತ್ ಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಮೊದಲಾದವರು ಇದ್ದರು.
ಶಿಬಿರದಲ್ಲಿ ರಕ್ತ ಪರೀಕ್ಷೆ, ಹೃದ್ರೋಗ ತಪಾಸಣೆ, ನೇತ್ರ ತಪಾಸಣೆ, ದಂತ ತಪಾಸಣೆ ನಡೆಸಲಾಯಿತು. ಈ ಶಿಬಿರದಲ್ಲಿ 350ಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದುಕೊಳ್ಳುವ ಮೂಲಕ ಶಿಬಿರ ಯಶಸ್ವಿಗೊಳಿಸಿದರು.ಶಿಬಿರದಲ್ಲಿ ಪತ್ರಕರ್ತರು, ವಿತರಕರು, ಮಾಧ್ಯಮ ಸಂಸ್ಥೆಗಳ ಸಿಬ್ಬಂದಿ ಪಾಲ್ಗೊಂಡು ವಿವಿಧ ತಪಾಸಣೆಗೆ ಒಳಪಟ್ಟರು. ಹಲವರಿಗೆ ಉಚಿತ ಔಷಧಿ ವಿತರಿಸಲಾಯಿತು. ಸುಮಾರು 60ಕ್ಕೂ ಹೆಚ್ಚು ವೈದ್ಯ ಸಿಬ್ಬಂದಿ ಹಾಗೂ ಪ್ರತಿಷ್ಠಿತ ಆಸ್ಪತ್ರೆಗಳ ನುರಿತ ವೈದ್ಯರು ಪಾಲ್ಗೊಂಡಿದ್ದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಭಾರತ್ ಕ್ಯಾನ್ಸರ್ ಆಸ್ಪತ್ರೆ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ, ಜೆಎಸ್ಎಸ್ ದಂತ ಆಸ್ಪತ್ರೆ, ಅನ್ನಪೂರ್ಣ ಕಣ್ಣಿನಆಸ್ಪತ್ರೆ, ಆರ್ಯ ಆಸ್ಪತ್ರೆ, ವಂದೇ ವೆಲ್ನೆಸ್ ಸೆಂಟರ್, ಆರೋಗ್ಯ ಭಾರತಿ, ಎಟ್ರಿಮೆಡ್ ಫಾರ್ಮಸಿಟಿಕಲ್ಸ್, ಬೆಂಗಳೂರಿನ ಸಾಗರ್ ಪಾರ್ಮಸ್ಯೂಟಿಕಲ್ಸ್ ಸಂಸ್ಥೆಗಳು ಪತ್ರಕರ್ತರ ಆರೋಗ್ಯ ಶಿಬಿರಕ್ಕೆ ನೆರವಾದವು. ಶಿಬಿರದ ಯಶಸ್ಸಿಗೆ ನೆರವಾದ ಎಲ್ಲಾ ವೈದ್ಯಕೀಯ ಸಂಸ್ಥೆಗಳು, ವೈದ್ಯರು, ಸಿಬ್ಬಂದಿ ವರ್ಗ, ಪತ್ರಕರ್ತರು, ವಿತರಕರು ಮತ್ತು ಕುಟುಂಬ ವರ್ಗಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಕೃತಜ್ಞತೆ ಸಲ್ಲಿಸಿದೆ.