ಹಾವೇರಿ: ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ಶಿಬಿರದಲ್ಲಿ 700ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು, ನಮ್ಮ ಶ್ರಮಕ್ಕೆ ಸಾರ್ಥಕತೆ ಸಿಕ್ಕಂತಾಗಿದೆ. ಇದರಲ್ಲಿ ಸುಮಾರು 15ಕ್ಕೂ ಹೆಚ್ಚು ತಜ್ಞ ವೈದ್ಯರು ಪಾಲ್ಗೊಂಡಿದ್ದು ಎಲ್ಲರಿಗೂ ಸಂಸ್ಥೆ ಅಭಾರಿಯಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸುಭಾಷ್ ಹುಲ್ಯಾಳದ ತಿಳಿಸಿದರು.ಇಲ್ಲಿನ ಬಸವೇಶ್ವರ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಲಯನ್ಸ್ ಕ್ಲಬ್ ಹಾಗೂ ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಹಾವೇರಿ ಹಾಗೂ ಕಂಚಿಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಇವರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೆವು. ಇದರಲ್ಲಿ ವಿವಿಧ ರೋಗ ಚಿಕಿತ್ಸಾ ಪರಿಣಿತ ತಜ್ಞ ವೈದ್ಯರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದು, ಹಾವೇರಿ ಜಿಲ್ಲೆ ಮಾತ್ರವಲ್ಲದೇ ಎಲ್ಲ ತಾಲ್ಲೂಕಿನ ಸುತ್ತ ಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ ಎಂದರು.ಸರ್ಜಿ ರೇಣುಕಾ ದೇವಧರ ಹಾಸ್ಪಿಟಲ್‌ನ ಡಾ. ಮಧು, ದಾವಣಗೆರೆ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ಡಾ. ಎಸ್ಎಸ್ ನಾರಾಯಣ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಚೇರಮನ್ ಪಿ.ಡಿ. ಶಿರೂರ ಮುಂತಾದವರು ಶಿಬಿರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳಾದ ಡಾ. ಪ್ರಭಾಕರ ಕುಂದೂರ ಪ್ರಶಂಸೆ ವ್ಯಕ್ತಪಡಿಸಿದರು.