ಕನ್ನಡಪ್ರಭ ವಾರ್ತೆ ಉಡುಪಿ
ಡೆಂಘೀ ಕೇವಲ ಜ್ವರ ಅಲ್ಲ. ಅದು ಸೋಂಕು ಹೊಂದಿದ ಈಡೀಸ್ ಸೊಳ್ಳೆಯ ಮೂಲಕ ಹರಡುವ ವೈರಸ್ ಜ್ವರ. ನಿಂತ ನೀರಿನಲ್ಲಿ ಈ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತವೆ. ಇವುಗಳನ್ನು ನಾಶಪಡಿಸಲು ಹಾಗೂ ಡೆಂಘೀ ರೋಗ ಹರಡದಂತೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ವ್ಯಾಪಕ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದ್ದಾರೆ.ಅವರು ಇಲ್ಲಿನ ಅಲೆವೂರು ಪ್ರಗತಿನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಗತಿನಗರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಘೀ ದಿನಾಚರಣೆಯ ಪ್ರಯುಕ್ತ ಮಾನವ ಸರಪಣಿ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಡೆಂಘೀ ದಿನಾಚರಣೆಯ ಧ್ಯೇಯ ವಾಕ್ಯವಾದ ‘ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ- ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಗೊಳಿಸಿ’ಅದರಂತೆ ಸಾರ್ವಜನಿಕರು ಹಾಗೂ ಈ ಕಾರ್ಯದಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳು ರಾಯಬಾರಿಗಳಾಗಿ- ಸಮುದಾಯದಲ್ಲಿ ಜಾಗೃತಿ ಮೂಡಿಸಿ ಡೆಂಘೀ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.ಜಿಲ್ಲೆಯಲ್ಲಿ ಎಲ್ಲಾ ನಾಗರಿಕರೂ ಡೆಂಘೀ ಹಾಗೂ ಇನ್ನಿತರೆ ಕೀಟ ಜನ್ಯ ಕಾಯಿಲೆಗಳನ್ನು ನಿಯಂತ್ರಿಸಿ ಆರೋಗ್ಯಕರ ಉಡುಪಿ ಜಿಲ್ಲೆಯನ್ನಾಗಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಅಲೆವೂರು ಪಂಚಾಯಿತಿ ಅಧ್ಯಕ್ಷ ಯತೀಶ್ ಕುಮಾರ್, ಸದಸ್ಯ ಶ್ರೀಕಾಂತ್ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ರೋಟರಿ ಮಣಿಪಾಲ್ ಹಿಲ್ಸ್ ಅಧ್ಯಕ್ಷೆ ಸುಪರ್ಣ ಶೆಟ್ಟಿ, ಸದಸ್ಯರಾದ ಸುದೇಶ್ ರೈ, ಸುಂದರ ಶೆಟ್ಟಿ ಹಾಗೂ ಭೋಜರಾಜ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ಮತ್ತು ಸಂಯೋಜಕ ಅನಿತಾ ಹಾಗೂ ಮಧುಸೂಧನ್, ಭೋದಕವರ್ಗ, ಕೀಟಶಾಸ್ತ್ರಜ್ಞೆ ಮುಕ್ತಾ ಆಚಾರಿ, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಶಿಧರ್ ಎಚ್ ಮತ್ತು ಚಂದ್ರಕಲಾ, ಡಿವಿಬಿಡಿಸಿ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪುರ ಇಲ್ಲಿನ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳು ಇದ್ದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ ಸ್ವಾಗತಿಸಿ ನಿರೂಪಿಸಿದರು, ಮಣಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಂಜಲಿ ವಾಗ್ಲೆ ವಂದಿಸಿದರು.