ಮೈಷುಗರ್ ಒಳಾವರಣದಿಂದ ಕಲ್ಲು-ಮಣ್ಣು, ಸಾಮಗ್ರಿಗಳ ಸಾಗಣೆ

KannadaprabhaNewsNetwork |  
Published : May 24, 2025, 12:17 AM IST
೨೩ಕೆಎಂಎನ್‌ಡಿ-೮ಮೈಷುಗರ್ ಕಾರ್ಖಾನೆ ಒಳಾವರಣದಿಂದ ಟ್ರ್ಯಾಕ್ಟರ್‌ನಲ್ಲಿ ಮಣ್ಣನ್ನು ತುಂಬಿ ಸಾಗಿಸುತ್ತಿರುವುದು. | Kannada Prabha

ಸಾರಾಂಶ

ಅಧ್ಯಕ್ಷರು ಕಾರ್ಖಾನೆಯಲ್ಲಿ ಉಪಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಮಾತ್ರ ಕಾರ್ಖಾನೆಯೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು. ಇಲ್ಲವಾದಲ್ಲಿ ಸಂಬಂಧಪಟ್ಟ ವಿಭಾಗಗಳಿಂದ ಪತ್ರ ಮುಖೇನ ಮಾಹಿತಿ ಪಡೆದುಕೊಳ್ಳುವಂತೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯ ಒಳಾವರಣದಿಂದ ಚಪ್ಪಡಿ ಕಲ್ಲು, ಮಣ್ಣು ಹಾಗೂ ಇತರೆ ಸಾಮಗ್ರಿಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂದು ರೈತಸಂಘದ ಅಧ್ಯಕ್ಷ ಎಸ್.ಅಣ್ಣಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಎಂ.ಆನಂದಕುಮಾರ ಆರೋಪಿಸಿದ್ದಾರೆ.

ಈ ಸಂಬಂಧ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿರುವ ಅವರು, ಸಕ್ಕರೆ ಕಾರ್ಖಾನೆ ಒಳಾವರಣದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಕೆಲಸಗಳನ್ನು ಮಾಡುವ ವೇಳೆ ಮಣ್ಣು, ಕಲ್ಲು, ಕೆಲವು ಪೈಪುಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಮಣ್ಣು ತುಂಬುವ ಸಮಯದಲ್ಲಿ ಕಾರ್ಖಾನೆಯಿಂದ ಹೊರಗೆ ಸಾಗಿಸುತ್ತಿರುವುದು ಕಂಡುಬಂದಿರುವುದಾಗಿ ದೂರಿದ್ದಾರೆ.

ಕಾರ್ಖಾನೆಯೊಳಗಿರುವ ಮಣ್ಣು, ಚಪ್ಪಡಿ ಕಲ್ಲುಗಳು ಸೇರಿದಂತೆ ಇನ್ನಿತರೆ ವಸ್ತುಗಳು ಕಾರ್ಖಾನೆ ಆಸ್ತಿಯಾಗಿದೆ. ಅವುಗಳನ್ನು ರಕ್ಷಣೆ ಮಾಡುವುದು ಕಂಪನಿ ಆಡಳಿತ ಮಂಡಳಿ, ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಅಕ್ರಮವಾಗಿ ಮಣ್ಣು, ಚಪ್ಪಡಿ ಕಲ್ಲುಗಳು ಹಾಗೂ ಇತರೆ ವಸ್ತುಗಳನ್ನು ಕಾರ್ಖಾನೆಯಿಂದ ಹೊರಗೆ ಸಾಗಣೆ ಮಾಡಿದ್ದಲ್ಲಿ ಪುನಃ ಅದನ್ನು ಕಾರ್ಖಾನೆಯೊಳಕ್ಕೆ ತರಿಸಿಕೊಳ್ಳುವುದು. ಈ ವಿಷಯವಾಗಿ ಜವಾಬ್ದಾರಿಯುತವಾಗಿ ಮತ್ತು ತುರ್ತಾಗಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರಲ್ಲದೆ, ಮಣ್ಣನ್ನು ಯಾವ ಉದ್ದೇಶಕ್ಕೆ ಸಾಗಣೆ ಮಾಡಲಾಗಿದೆ, ಟೆಂಡರ್ ಪ್ರಕ್ರಿಯೆ ನಡೆಸಿದ್ದರೆ ಅದರ ಪ್ರತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ.

ಪತ್ರ ಮುಖೇನ ಮಾಹಿತಿ ಪಡೆದುಕೊಳ್ಳಿ: ಅಧ್ಯಕ್ಷ

೨೦೨೫- ೨೬ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಆಫ್- ಸೀಸನ್ ಕಾರ್ಯವು ಪ್ರಗತಿಯಲ್ಲಿರುವುದರಿಂದ ರೈತಸಂಘಟನೆಗಳು, ರೈತ ಪ್ರತಿನಿಧಿಗಳು ಹಾಗೂ ನಿವೃತ್ತಿ, ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರು ಅನವಶ್ಯಕವಾಗಿ ಕಾರ್ಖಾನೆಯೊಳಗೆ ಬರುತ್ತಿರುವುದು ಕಂಡುಬಂದಿದೆ. ಅಧ್ಯಕ್ಷರು ಕಾರ್ಖಾನೆಯಲ್ಲಿ ಉಪಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಮಾತ್ರ ಕಾರ್ಖಾನೆಯೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು. ಇಲ್ಲವಾದಲ್ಲಿ ಸಂಬಂಧಪಟ್ಟ ವಿಭಾಗಗಳಿಂದ ಪತ್ರ ಮುಖೇನ ಮಾಹಿತಿ ಪಡೆದುಕೊಳ್ಳುವಂತೆ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ