ಪರಿಶಿಷ್ಟ ಜಾತಿ ಸಮೀಕ್ಷೆ: ಜಾತಿ ನಿಂದಕ ಶಬ್ದಗಳಿಗೆ ಮನ್ನಣೆ ನೀಡದಿರಲು ಒತ್ತಾಯ

KannadaprabhaNewsNetwork | Published : May 24, 2025 12:16 AM
ಜಿಲ್ಲಾ ಆದಿ ದ್ರಾವಿಡ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಎಂ. ಸೀನ ಮಾಸ್ತಿಕಟ್ಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನ್ಸ ಅಥವಾ ದಿಕ್ಕ ಎಂಬ ಪದಗಳು ತುಳುನಾಡಿಲ್ಲಿ ಜಾತಿ ನಿಂದನಾ ಶಬ್ದಗಳಾಗಿವೆ. ಯಾವುದೇ ಸರ್ಕಾರ ಕಡತಗಳಲ್ಲಿ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಜಾತಿಗಳ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಪರಿಶಿಷ್ಟ ಜಾತಿಯರ ಒಳ ಮೀಸಲಾತಿಗಾಗಿ ನಿವೃತ್ತ ನ್ಯಾಯಾಧೀಶ ಎಚ್‌.ಎನ್‌. ನಾಗಮೋಹನ್‌ದಾಸ್‌ ಆಯೋಗ ನಡೆಸುತ್ತಿರುವ ಸಮೀಕ್ಷೆ ಸಂದರ್ಭ ಜಾತಿ ನಿಂದಕ (ಉಪಜಾತಿ ಅಲ್ಲದ) ಶಬ್ದಗಳಾದ ‘ಮನ್ಸ’ ಅಥವಾ ‘ದಿಕ್ಕ’ಎಂಬ ಪದಗಳನ್ನು ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಗೆ ಮನ್ನಣೆ ನೀಡಬಾರದು. ಸಂವಿಧಾನ ಬದ್ಧವಾಗಿ ನಿಗದಿಪಡಿಸಲಾದ 101 ಉಪಜಾತಿಗಳ ಪಟ್ಟಿಯ ಪ್ರಕಾರವೇ ಒಳ ಮೀಸಲಾತಿ ಒದಗಿಸಬೇಕು ಎಂದು ಜಿಲ್ಲಾ ಆದಿ ದ್ರಾವಿಡ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಎಂ. ಸೀನ ಮಾಸ್ತಿಕಟ್ಟೆ ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನ್ಸ ಅಥವಾ ದಿಕ್ಕ ಎಂಬ ಪದಗಳು ತುಳುನಾಡಿಲ್ಲಿ ಜಾತಿ ನಿಂದನಾ ಶಬ್ದಗಳಾಗಿವೆ. ಯಾವುದೇ ಸರ್ಕಾರ ಕಡತಗಳಲ್ಲಿ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಜಾತಿಗಳ ಉಲ್ಲೇಖವಿಲ್ಲ ಎಂದು ಹೇಳಿದರು.

ಮನ್ಸ ಸಂಘಟನೆ ಅಧ್ಯಕ್ಷರು ಮನ್ಸ ಸಮಾಜವು ಕರಾವಳಿ ಭಾಗದಲ್ಲಿ ಸುಮಾರು 5 ಲಕ್ಷ ಜನ ಇರುವುದಾಗಿ ಸುಳ್ಳು ಹೇಳಿದ್ದಾರೆ. ಈ ರೀತಿ ಗೊಂದಲ ಸೃಷ್ಟಿಸುವ ಪ್ರಕ್ರಿಯೆ ಮುಂದುವರಿದರೆ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ ಸಮೀಕ್ಷೆ ವೇಳೆ ಈ ಬೇಡಿಕೆಗೆ ಮನ್ನಣೆ ನೀಡಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೇ 28ರಂದು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಜಾತಿ ನಿಂದಕ ಶಬ್ದ ಸೇರ್ಪಡೆ ಮಾಡಿದರೆ ಸರ್ಕಾರಿ ಉದ್ಯೋಗಿಗಳು, ರಾಜಕಾರಣಿಗಳಿಗೆ, ಪರಿಶಿಷ್ಟ ಜಾತಿಯ ಆದಿದ್ರಾವಿಡ ಜಾತಿಗೆ ಸೇರಿದವರಿಗೆ ಸರ್ಕಾರಿ ಸವಲತ್ತು ಪಡೆಯಲು ತೊಂದರೆಯಾಗಲಿದೆ. ಇದು ಆದಿ ದ್ರಾವಿಡ ಸಮುದಾಯಕ್ಕೆ ಮಾಡುವ ಅನ್ಯಾಯವಾಗಿರುತ್ತದೆ. ಆದ್ದರಿಂದ ಹಿಂದಿನ 101 ಪರಿಶಿಷ್ಟ ಜಾತಿ ಪಟ್ಟಿ ಪ್ರಕಾರವೇ ಒಳ ಮೀಸಲಾತಿ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಉಪ ಸಂಚಾಲಕ ಎಸ್‌.ಪಿ. ಆನಂದ, ಜಿಲ್ಲಾ ಕಾರ್ಯದರ್ಶಿ ಜಿನ್ನಪ್ಪ ಬಂಗೇರ, ಜತೆ ಕಾರ್ಯದರ್ಶಿ ಸುರೇಶ್‌ ಬಳ್ಳಾಲ್‌ಬಾಗ್‌, ಜಿಲ್ಲಾ ಸಂಘಟನಾ ಸಂಚಾಲಕ ಜಗದೀಶ್‌ ಪಾಂಡೇಶ್ವರ, ಕಾರ್ಯಕಾರಿ ಸಮಿತಿ ಸದ್ಯರಾದ ಲಕ್ಷ್ಮಣ, ನವೀನ್‌ ಬಳ್ಳಾಲ್‌ಬಾಗ್‌ ಮತ್ತಿತರರು ಇದ್ದರು.