ಕ್ರಮಬದ್ಧ ಆಹಾರ, ವ್ಯಾಯಾಮದಿಂದ ಆರೋಗ್ಯ ವೃದ್ಧಿ

KannadaprabhaNewsNetwork | Published : Feb 17, 2025 12:30 AM

ಸಾರಾಂಶ

ಸರಿಯಾದ ಆಹಾರ ಕ್ರಮ, ವ್ಯಾಯಾಮ, ನಡಿಗೆ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಬೇಕು

ಕೊಟ್ಟೂರು: ಇತ್ತೀಚೆಗೆ ಸಾಮಾನ್ಯ ಎಂಬಂತಾಗಿರುವ ಕೀಲುಮೂಳೆ, ಮಂಡಿ ಸವೆತ ಬಾರದಂತೆ ಸರಿಯಾದ ಆಹಾರ ಕ್ರಮ, ವ್ಯಾಯಾಮ, ನಡಿಗೆ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಬೇಕು ಎಂದು ದಾವಣಗೆರೆಯ ಸ್ಪರ್ಶ ಆಸ್ಪತ್ರೆಯ ಕೀಲು ಮೂಳೆ ತಜ್ಞ ಹಾಗೂ ಎಸ್‌ಎಸ್ ಆಸ್ಪತ್ರೆಯ ವಿಭಾಗದ ಮುಖ್ಯಸ್ಥ ಡಾ. ಜೆ. ಮಂಜುನಾಥ ಹೇಳಿದರು.ಪಟ್ಟಣದ ಹರಿಪ್ರಿಯಾ ಕನ್ವೆನ್ಶನಲ್‌ ಹಾಲ್‌ನಲ್ಲಿ ಸ್ಪರ್ಶ ಆಸ್ಪತ್ರೆ ಮತ್ತು ಎಪಿಎಂಸಿ ದಲಾಲರು ಮತ್ತು ಖರೀದಿದಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ್ ಉಚಿತ ಕೀಲು ಮೂಳೆ ತಪಾಸಣಾ ಶಿಬಿರದಲ್ಲಿ ಅವರು ಗುರುವಾರ ಮಾತನಾಡಿದರು.

ಇಂದಿನ ದಿನಗಳಲ್ಲಿ ಬದಲಾಗಿರುವ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ಊಟದಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಐರನ್ ಸೇರಿ ಅನೇಕ ಮಿನಿರಲ್ ಗುಣಗಳನ್ನು ತಪ್ಪಿಸುತ್ತಿದ್ದೇವೆ. ಫಾಸ್ಟ್ ಫುಡ್, ಜಂಕ್ ಫುಡ್, ನಾರ್ಥ್ ಫುಡ್‌ಗಳಿಗೆ ಮಕ್ಕಳಾದಿಯಾಗಿ ಹಿರಿಯರು ಸಹ ಮಾರುಹೋಗುತ್ತಿದ್ದಾರೆ. ಜೋಳ, ರಾಗಿ, ಹಾಲು, ಗೋಧಿ, ಸೋಯಾಬಿನ್, ಬೇಳೆ ಕಾಳುಗಳು, ಗೋಡಂಬಿ, ಸೇಂಗಾ, ಹೂಕೋಸು, ಬೀಟ್‌ರೋಟ್, ದ್ರಾಕ್ಷಿ, ಕಿತ್ತಳೆ ಸೇರಿ ಅನೇಕ ತರಕಾರಿ ಹಣ್ಣುಗಳಲ್ಲಿ ನಾನಾ ರೀತಿಯ ಪೌಷ್ಠಿಕಾಂಶ ಇರುತ್ತವೆ. ಅವುಗಳನ್ನು ತಪ್ಪದೇ ಸೇವಿಸುತ್ತಾ ಬಂದಲ್ಲಿ ಮೂಳೆಗಳಲ್ಲಿನ ಕ್ಯಾಲ್ಸಿಯಂ ಕೊರತೆ ತಡೆಯಬಹುದಾಗಿದೆ. ಕ್ಯಾಲ್ಸಿಯಂ ಕೊರತೆಯಾದಲ್ಲಿ ಕೀಲು ಮೂಳೆ ನೋವು, ಮಂಡಿ ಸವೆತ ಉಂಟಾಗುತ್ತದೆ ಎಂದರು.

ಕೀಲುಮೂಳೆ, ಮಂಡಿ ನೋವಿಗೆ ಇದೀಗ ಅಧುನಿಕ ತಂತ್ರಜ್ಞಾನ ಚಿಕಿತ್ಸೆಗಳು ಲಭ್ಯ ಇವೆ. ಹಿಂದಿನಂತೆ ಹೆಚ್ಚು ದಿನ ಆಸ್ಪತ್ರೆಗಳಲ್ಲಿ ಇರುವುದು ಅವಶ್ಯವಿಲ್ಲ. ಮರ‍್ನಾಲ್ಕು ದಿನಗಳಲ್ಲಿಯೇ ಮಂಡಿ ನೋವು ಶಸ್ತ್ರಚಿಕಿತ್ಸೆ ಮಾಡಿಕೊಂಡವರು ಓಡಾಡಬಹುದು. ಬೆಂಗಳೂರಿನ ಸ್ಪರ್ಶ ಅಸ್ಪತ್ರೆ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಪ್ರಾರಂಭಿಸಿದ್ದು, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುವುದು. ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡವರು ವೈದ್ಯರು ಹೇಳುವ ಔಷಧ ಹಾಗೂ ಇತರೆ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಬೇಕು ಎಂದು ಹೇಳಿದರು.

Share this article