ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ತಂದೆ, ತಾಯಿ ನಿರ್ಲಕ್ಷ್ಯ

KannadaprabhaNewsNetwork | Published : Feb 17, 2025 12:30 AM

ಸಾರಾಂಶ

ಸಮಾಜದಲ್ಲಿ ಕೌಟುಂಬಿಕ ಪ್ರೀತಿ, ವಾತ್ಸಲ್ಯ, ಸಹಬಾಳ್ವೆ, ಹೊಂದಾಣಿಕೆಗಳಿಂದ ವಿಮುಖ

ಲಕ್ಷ್ಮೇಶ್ವರ: ಆಧುನಿಕ ಜೀವನ ಶೈಲಿ ರೂಢಿಸಿಕೊಂಡ ನಾವಿಂದು ನಮ್ಮ ಪರಂಪರೆ ಮರೆತ ಪರಿಣಾಮ ನಮ್ಮದೇ ಆಚಾರ, ವಿಚಾರಗಳು ಅಳಿವಿನ ಅಂಚಿಗೆ ತಪುಲಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಇಂದಿನ ದಿನಗಳಲ್ಲಿ ತಂದೆ-ತಾಯಿ ನಿರ್ಲಕ್ಷಿಸುತ್ತಿರುವುದು ಹೆಚ್ಚಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ಹಿರಿಯ ಶಿಕ್ಷಕ ಎಂ.ಕೆ. ಲಮಾಣಿ ಅಭಿಪ್ರಾಯಪಟ್ಟರು.

ಅವರು ಸಮೀಪದ ಶಿಗ್ಲಿ ಗ್ರಾಮದ ಜಿ.ಎಸ್.ಎಸ್. ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ತಂದೆ-ತಾಯಿಯ ಪಾದಪೂಜೆ ನೆರವೇರಿಸುವ ವಿನೂತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಸಮಾಜದಲ್ಲಿ ಕೌಟುಂಬಿಕ ಪ್ರೀತಿ, ವಾತ್ಸಲ್ಯ, ಸಹಬಾಳ್ವೆ, ಹೊಂದಾಣಿಕೆಗಳಿಂದ ವಿಮುಖರಾಗಿದ್ದಾರೆ. ಇದಕ್ಕೆ ಮನೆಯಲ್ಲಿ ನೀಡುವ ಸಂಸ್ಕಾರ ಕಾರಣವಾಗಿರಬಹುದಾಗಿದೆ, ಮಕ್ಕಳಿಗೆ ನಮ್ಮ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ತಿಳಿ ಹೇಳಬೇಕಾದದ್ದು ಅಗತ್ಯವಾಗಿದೆ. ಹೆತ್ತವರು ತಮ್ಮ ಬದುಕಿನ ಜಂಜಾಟಗಳ ನಡುವೆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಮರೆಯುತ್ತಿದ್ದಾರೆ. ಹೆತ್ತವರನ್ನು ಪೂಜಿಸಿ ತಮ್ಮ ಮುಂದಿನ ಸಾಧನೆಗಳಿಗೆ ಆಶೀರ್ವಾದ ಪಡೆಯುವ ಗುರಿಯನ್ನಿಟ್ಟುಕೊಂಡು ವಿದ್ಯಾರ್ಥಿಗಳು ಇಂದಿನ ಪಾದಪೂಜೆ ನೆರವೇರಿಸಿದ್ದು ಅವರಿಗೆ ಉತ್ತಮ ಭವಿಷ್ಯ ದೊರೆಯಲಿದೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಮಾತನಾಡಿ, ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವು ಇಂದಿಗೂ ನಮ್ಮ ಪುರಾತನ ಶ್ರೀಮಂತ ಸಂಸ್ಕೃತಿ ಜೀವಂತವಾಗಿದೆ ಎಂಬುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದೆ, ಭವಿಷ್ಯದಲ್ಲಿ ತಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮುಂದೆ ಈ ಮಕ್ಕಳು ಸಮಾಜದಲ್ಲಿ ಮಾದರಿಯಾಗಿರುತ್ತಾರೆ. ತಂದೆ-ತಾಯಿ ಮಕ್ಕಳ ಸಂಬಂಧಗಟ್ಟಿಗೊಳಿಸುವುದು ಪಾದಪೂಜೆಯ ಉದ್ದೇಶವಾಗಿದೆ ಎನ್ನುವದನ್ನು ಮಕ್ಕಳು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವೈಸ್‌ಚೇರಮನ್ ರಾಜರತ್ನ ಹುಲಗೂರ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಎಸ್.ಕೆ. ಹೆಬ್ಬಳ್ಳಿ, ಸಿ.ಆರ್. ಗೋಕಾವಿ, ಯಲ್ಲಪ್ಪ ತಳವಾರ, ಚಾಮರಾಜ ಹುಲಗೂರ, ಶಿವಪ್ಪ ಕುರಿ, ಈಶ್ವರ ಮೇಡ್ಲೇರಿ, ನಾಗರಾಜ ಹಣಗಿ, ಜ್ಯೋತಿ ಗಾಯಕವಾಡ, ಚನ್ನಬಸಯ್ಯ ಮಳಶಂಕರಿಮಠ, ಚಂದ್ರಕಾಂತ ನೇಕಾರ, ರಾಜು ರಜಪೂತ, ನಾರಾಯಣ ಹತ್ತಲಗೇರಿ, ತಿಪ್ಪಣ್ಣ ಹೂಗಾರ, ಪ್ರಕಾಶ ರಜಪೂತ, ಮಂಜುನಾಥ ಶಂಭೋಜಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎ.ವಿ.ತಿಮ್ಮಾಪೂರ, ಪತ್ರಕರ್ತ ದಿಗಂಬರ ಪೂಜಾರ, ಸೌಮ್ಯ ನವಲೆ ಹಾಗೂ ಶಾಲೆಯ ವಿವಿಧ ವರ್ಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಯಿತು. ಮಖ್ಯೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ ಮಾತನಾಡಿದರು. ಟಿ.ಎಸ್. ಹೂಗಾರ ವಂದಿಸಿದರು, ಎಂ.ಬಿ. ಕಲ್ಲೂರ ಸ್ವಾಗತಿಸಿದರು. ಶಿಕ್ಷಕಿಯರು ನಿರೂಪಿಸಿದರು.

Share this article