ಕನ್ನಡಪ್ರಭ ವಾರ್ತೆ ಚಾಮರಾಜನಗರ
ಉತ್ತಮ ಮನಸ್ಸು ಹಾಗೂ ದೈಹಿಕ ಕ್ಷಮತೆಗಾಗಿ ವ್ಯಾಯಾಮಗಳು ಅತೀ ಮುಖ್ಯವಾಗಿವೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಿಂದ ಜಿಲ್ಲಾ ಪೊಲೀಸ್ ವತಿಯಿಂದ ಶನಿವಾರ ಆಯೋಜಿಸಿದ್ದ ದೈಹಿಕ ಕ್ಷಮತೆಗಾಗಿ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು. ಓಟ, ಯೋಗ, ಧ್ಯಾನ ಯಾವುದೇ ವ್ಯಾಯಮ ಇರಲಿ ಇವುಗಳನ್ನು ನಾವು ರೂಢಿಸಿಕೊಂಡಾಗ ಉತ್ತಮ ಮನಸ್ಸು ದೈಹಿಕ ಕ್ಷಮತೆ ಆಗಿ ಉತ್ತಮ ಕರ್ತವ್ಯವನ್ನು ಮಾಡಬಹುದು. ಇಂತಹ ಓಟಗಳಲ್ಲಿ ಸಾರ್ವಜನಿಕರೊಡಗೂಡಿ ಭಾಗವಹಿಸುವುದರಿಂದ ಅವರ ಜೊತೆ ಉತ್ತಮ ಸ್ವೇಹ ಭಾವನೆ ಹೊಂದಬಹದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಕರ್ನಾಟಕ ಪೊಲೀಸ್ ರನ್ ಶೀರ್ಷಿಕೆಯಡಿ ರಾಜ್ಯಾದ್ಯಂತ ೫ ಕಿ.ಮೀ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದ್ದು ಜಿಲ್ಲಾ ಕೇಂದ್ರದಲ್ಲೂ ಜಿಲ್ಲಾ ಪೊಲೀಸ್ ವತಿಯಿಂದ ಈ ಓಟ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪೊಲೀಸ್, ಇತರೆ ಇಲಾಖೆಗಳ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಎಲ್ಲಾ ಜನರು ಮುಕ್ತವಾಗಿ ಭಾಗವಹಿಸುರುವುದರಿಂದ ಇದೊಂದು ಜನಸ್ನೇಹಿ ಪೊಲೀಸ್ ಕಾರ್ಯಕ್ರಮವಾಗಿದೆ ಎಂದರು.ಮ್ಯಾರಥಾನ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭವಾಗಿ ರಾಮಸಮುದ್ರದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ತಲುಪಿ ಅಲ್ಲಿಂದ ತಿರುವು ಪಡೆದು ಭುವನೇಶ್ವರಿ ವೃತ್ತ ತಲುಪಿ ವಾಪಸ್ ಪೊಲೀಸ್ ಕವಾಯತು ಮೈದಾನದಲ್ಲಿ ಅಂತ್ಯವಾಯಿತು.
ಮೊದಲು ಬಂದ ೫೦ ಜನರಿಗೆ ಪದಕಗಳನ್ನು ವಿತರಿಸಲಾಯಿತು. ನೂರಾರು ಪೊಲೀಸ್ ಸಿಬ್ಬಂದಿ ಸೇರಿದಂತೆ ಇಲಾಖೆಗಳ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಪಾಲ್ಗೊಂಡು ಗಮನ ಸೆಳೆದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿ.ಪಂ. ಸಿಇಓ ಮೋನಾ ರೋತ್, ಅಡಿಷನಲ್ ಎಸ್ಪಿ ಶಶಿಧರ್, ಡಿವೈಎಸ್ಪಿಯವರಾದ ಲಕ್ಷ್ಮಯ್ಯ, ಸೋಮಣ್ಣ, ಧರ್ಮೇಂದ್ರ, ಸಿಮ್ಸ್ ಆಸ್ಪತ್ರೆಯ ಸ್ಧಾನಿಕ ವೈದ್ಯಾಧಿಕಾರಿ ಡಾ. ಮಹೇಶ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ. ರೇಣುಕಾದೇವಿ ಇದ್ದರು.