ಪತ್ರಕರ್ತರು ಸದಾ ಕರ್ತವ್ಯದಲ್ಲಿ ಮುಳುಗಿರುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸಮಾಜವನ್ನು ತಿದ್ದುವ ಕಾರ‍್ಯ ಮಾಡುತ್ತಲೇ ಕಾಲ ಕಳೆಯುತ್ತಾರೆ. ಇಂತಹ ಕ್ರೀಡಾಕೂಟಗಳಿಂದ ಅವರೂ ಸಹ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಕ್ರೀಡೆ ಸೇರಿದಂತೆ ಇತರೆ ಚಟುವಟಿಕೆಗಳಲ್ಲೂ ಭಾಗವಹಿಸಿ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ನಡೆದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪತ್ರಕರ್ತರು ಸದಾ ಕರ್ತವ್ಯದಲ್ಲಿ ಮುಳುಗಿರುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಸಮಾಜವನ್ನು ತಿದ್ದುವ ಕಾರ‍್ಯ ಮಾಡುತ್ತಲೇ ಕಾಲ ಕಳೆಯುತ್ತಾರೆ. ಇಂತಹ ಕ್ರೀಡಾಕೂಟಗಳಿಂದ ಅವರೂ ಸಹ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು, ಗೆಲುವು ಮುಖ್ಯವಲ್ಲ ಎಂದ ಅವರು, ಅತಿ ಹೆಚ್ಚು ಅಂಕ ಗಳಿಸಿರುವ ಪತ್ರಕರ್ತರ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡುವಂತೆ ಅವರು ಸಲಹೆ ನೀಡಿದರು.
ಜಯ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್. ನಾರಾಯಣ್ ಮಾತನಾಡಿ, ಮಾಧ್ಯಮ ವೃತ್ತಿಯಲ್ಲ. ದಿನದ ೨೪ ಗಂಟೆಯೂ ಜಾಗೃತವಾಗಿರುವ ಕಾಯಕ. ಆ ಕಾಯಕವನ್ನು ನಡೆಸಿಕೊಳ್ಳುವುದರೊಟ್ಟಿಗೆ ಸಮಯ ಕಳೆಯುತ್ತಾರೆ. ಅವರ ಕುಟುಂಬವನ್ನೂ ಪೋಷಿಸುವ ಕೆಲಸವನ್ನು ಮರೆಯುತ್ತಾರೆ. ಅಂತಹ ಪತ್ರಕರ್ತರು ಕ್ರೀಡಾಕೂಟ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜಕ್ಕೆ ಶಕ್ತಿಯಾಗಿರುವ ಮಾಧ್ಯಮದವರು ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ಜೊತೆಗೆ ಕುಟುಂಬದ ಕಡೆಗೂ ನಿಗಾ ವಹಿಸಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾ ಉಪಾಧ್ಯಕ್ಷರಾದ ಕೆ.ಸಿ.ಮಂಜುನಾಥ್, ರವಿ ಸಾವಂದಿಪುರ, ಪ್ರಧಾನ ಕಾರ್ಯದರ್ಶಿ ಶಶಿಧರ್ ಕಾಡುಕೊತ್ತನಹಳ್ಳಿ ಸೇರಿದಂತೆ ಹಲವಾರು ಹಿರಿಯ-ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.
ಪತ್ರಕರ್ತರು ಮತ್ತು ಅವರ ಕುಟುಂಬದವರು ಕ್ರೀಡಾಕೂಟದಲ್ಲಿ ಭಾಗವಹಿಸಿ ಉಲ್ಲಸಿತರಾದರು. ಮಕ್ಕಳು ಖುಷಿಯಿಂದ ಕ್ರೀಡೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.