ಆರೋಗ್ಯ ದೇವರ ವರವಲ್ಲ, ನಾವೇ ಸಂಪಾದಿಸಬೇಕು: ಡಾ. ಕೆ. ಪ್ರವೀಣ್ ಕುಮಾರ್

KannadaprabhaNewsNetwork |  
Published : Oct 06, 2025, 01:00 AM IST
ಪೋಟೋ: 05ಎಸ್‌ಎಂಜಿಕೆಪಿ03ಶಿವಮೊಗ್ಗ ನಗರದ ವೀರಶೈವ ಕಲ್ಯಾಣಮಂದಿರದಲ್ಲಿ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ವತಿಯಿಂದ ಭಾನುವಾರ ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಆರೋಗ್ಯ ಎಂಬುದು ದೇವರು ಕೊಟ್ಟ ವರ ಅಲ್ಲ, ನಾವು ಅದನ್ನು ಸಂಪಾದಿಸಬೇಕು ಎಂದು ಖ್ಯಾತ ವೈದ್ಯ ಡಾ. ಕೆ. ಪ್ರವೀಣ್ ಕುಮಾರ್ ದೇವರಬಾವಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರೋಗ್ಯ ಎಂಬುದು ದೇವರು ಕೊಟ್ಟ ವರ ಅಲ್ಲ, ನಾವು ಅದನ್ನು ಸಂಪಾದಿಸಬೇಕು ಎಂದು ಖ್ಯಾತ ವೈದ್ಯ ಡಾ. ಕೆ. ಪ್ರವೀಣ್ ಕುಮಾರ್ ದೇವರಬಾವಿ ಹೇಳಿದರು.

ನಗರದ ವೀರಶೈವ ಕಲ್ಯಾಣಮಂದಿರದಲ್ಲಿ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ವತಿಯಿಂದ ಭಾನುವಾರ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷತೆ ಮೂಲಕ ಉಪನ್ಯಾಸ ನೀಡಿ ಮಾತನಾಡಿದ ಅವರು, ಉತ್ತಮ ಜೀವನ ಶೈಲಿಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು.

ಆರ್ಥಿಕವಾಗಿ ನಾವು ಸಬಲರಾಗಬಹುದು. ಆದರೆ, ಆರೋಗ್ಯದ ವಿಷಯದಲ್ಲಿ ದುರ್ಬಲರಾಗುತ್ತಿದ್ದೇವೆ. ಮನುಷ್ಯ ಇಂದು ಒತ್ತಡಗಳಿಗೆ ಸಿಕ್ಕು ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ. ಆತನ ಬದಲಾದ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆಗಳು ಇಂದು ಸಮಾಜವನ್ನೇ ಕಾಡುತ್ತಿವೆ ಎಂದು ಹೇಳಿದರು.

ಜಗತ್ತಿನಲ್ಲಿ ಇಂದು 41 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇನ್ನೊಂದೆರಡು ವರ್ಷದಲ್ಲಿ ಇದು 61 ಕೋಟಿ ದಾಟಬಹುದು. ಭಾರತದಲ್ಲಿ 2021ರಲ್ಲಿ 7 ಕೋಟಿ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಈಗ ಅದು 13 ಕೋಟಿಗೆ ತಲುಪಿದೆ. ಎಷ್ಟೋ ಜನರಿಗೆ ತಮಗೆ ಮಧುಮೇಹ ಇಲ್ಲ ಎಂದು ತಿಳಿದುಕೊಂಡಿದ್ದಾರೆ. ಹಾಗೆಯೇ ಹೃದಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 8 ಕೋಟಿ ದಾಟಿದೆ. ಸ್ಥೂಲಕಾಯಕ್ಕೆ ಬಂದರೆ ಜಗತ್ತಿನಲ್ಲಿ ಭಾರತ ಮೂರನೇ ಸ್ಥಾನ ಪಡೆದಿದೆ. ಇಂತಹ ಅಂಕಿ ಅಂಶಗಳು ತಲ್ಲಣ ಹುಟ್ಟಿಸುತ್ತವೆ ಎಂದರು.

ಆರೋಗ್ಯದ ಅರಿವಿನ ಕೊರತೆಯೇ ಇದಕ್ಕೆ ಕಾರಣ. ಉತ್ತಮ ಆರೋಗ್ಯ ಪಡೆಯಬೇಕಾದರೆ ನಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ಅನಿವಾರ್ಯವಾಗಿದೆ. ನಿಯಮಿತ ವ್ಯಾಯಾಮ, ಮಿತ ಆಹಾರ, ನಿದ್ದೆ, ಆರೋಗ್ಯ ತಪಾಸಣೆ, ಔಷಧಗಳ ಬಳಕೆ, ಮದ್ಯಪಾನ, ಧೂಮಪಾನದಿಂದ ದೂರವಿರುವುದು ಹೀಗೆ ಹಲವು ಬದಲಾವಣೆಗಳ ಜೀವನ ಶೈಲಿಯಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದರು.

ಮತ್ತೋರ್ವ ವೈದ್ಯ ಡಾ. ಅಭಿಷೇಕ್ ನುಚ್ಚಿನ, ಉಸಿರಾಟ, ಶ್ವಾಸಕೋಶ ಸಂಬಂಧಿತ ಸಮಸ್ಯೆಗಳ ಕುರಿತು ಮಾಹಿತಿ ನೀಡಿ, ಇಂತಹ ಆರೋಗ್ಯ ಕಾರ್ಯಕ್ರಮಗಳು ಜನರಲ್ಲಿ ವಿಶ್ವಾಸ ಮೂಡಿಸುತ್ತವೆ ಎಂದರು.

ಸಂಯುಕ್ತ ವಿಶ್ರಾಂತ ನೌಕರರ ಸಂಘದ ಸಂಸ್ಥಾಪಕ ಅಧ್ಯಕ್ಷ ಹಾಗೂ ನಿವೃತ್ತ ಡಿವೈಎಸ್ಪಿ ಪಿ.ಒ. ಶಿವಕುಮಾರ್ ಮಾತನಾಡಿ, ಉತ್ತಮ ನಡತೆ, ಮಾನವೀಯತೆ, ಅನುಕಂಪ, ಸೇವೆ, ಸಂಗೀತ, ಧ್ಯಾನ, ಪ್ರಾಣಾಯಾಮ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಹಾಗೂ ನಿವೃತ್ತ ಶಿಕ್ಷಣ ನಿರ್ದೇಶಕ ಎನ್.ಎಸ್. ಕುಮಾರ್, ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಡಿಎಫ್ಒ ಟಿ ಜೆ. ರವಿಕುಮಾರ್, ಪದಾಧಿಕಾರಿಗಳಾದ ನಿವೃತ್ತ ಪೊಲೀಸ್ ಅಧಿಕಾರಿ, ಜಿ.ವಿ. ಗಣೇಶಪ್ಪ, ನಿವೃತ್ತ ಡಿಎಫ್ಒ ಎನ್.ಬಿ. ಮಂಜುನಾಥ್, ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್.ಆರ್. ಚಂದ್ರಪ್ಪ, ಬಸವ ಕೇಂದ್ರದ ಅಧ್ಯಕ್ಷ ಬೆನಕಪ್ಪ, ನಿವೃತ್ತ ಅಧಿಕಾರಿಗಳಾದ ಕೆಂಚಪ್ಪ, ಎಸ್.ಸಿ. ಮಂಜಪ್ಪ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ