ಕನ್ನಡಪ್ರಭ ವಾರ್ತೆ ಶಿಕಾರಿಪುರ
ಜನತೆಯ ಸುರಕ್ಷತೆಗಾಗಿ ರೂಪಿಸಲಾದ ರಸ್ತೆ ಸುರಕ್ಷತಾ ಕಾಯ್ದೆಗಳ ಬಗೆಗಿನ ತೀವ್ರ ಅಸಡ್ಡೆಯಿಂದಾಗಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ದ್ವಿಚಕ್ರ ವಾಹನದಲ್ಲಿನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಜತೆಗೆ ಸಂಚಾರಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸುಂದರ ಬದುಕನ್ನು ಸಂಪೂರ್ಣ ಅಸ್ವಾದಿಸುವಂತೆ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಭರತ್ ತಿಳಿಸಿದರು.ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ರಸ್ತೆ ಸುರಕ್ಷತಾ ಆಂದೋಲನದ ಅಂಗವಾಗಿ ಬೈಕ್ ರ್‍ಯಾಲಿಗೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅಪಘಾತ ಪ್ರಕರಣಗಳನ್ನು ಸಾದ್ಯವಾದ ಮಟ್ಟಿಗೆ ತಪ್ಪಿಸಲು ಸಾರಿಗೆ ಇಲಾಖೆ ವತಿಯಿಂದ ಸರ್ಕಾರ ಹಲವು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಿದ್ದು, ವಾಹನ ಸವಾರರು ನಿರ್ಲಕ್ಷ್ಯದಿಂದ ವಾಹನ ಚಾಲನೆ ಮೂಲಕ ಅತ್ಯಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಾಹನ ದಟ್ಟಣೆಯಿಂದಾಗಿ ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಅಮೂಲ್ಯವಾಗಿರುವ ಜೀವ ರಕ್ಷಣೆಗಾಗಿ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸುವಂತೆ ತಿಳಿಸಿದರು.ಗ್ರಾಮಾಂತರ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಆರ್.ಆರ್ ಪಾಟೀಲ್ ಮಾತನಾಡಿ, ಬೈಕ್ ಸವಾರ ಮತ್ತು ಹಿಂಬದಿಯ ಸವಾರ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ಅತಿ ಹೆಚ್ಚು ಸಾವು ಉಂಟಾಗುತ್ತಿದ್ದು, ಈ ಬಗ್ಗೆ ಹಲವು ಆಸ್ಪತ್ರೆಗಳ ವೈದ್ಯರು ದೃಡೀಕರಿಸಿದ್ದಾರೆ. ಈ ದಿಸೆಯಲ್ಲಿ ಸರ್ಕಾರ ವಾಹನ ಸವಾರರ ರಕ್ಷಣೆಗಾಗಿ ಹೆಲ್ಮೆಟ್ ಕಡ್ಡಾಯಗೊಳಿಸಿದೆ, ನಿರ್ಲಕ್ಷಿಸದೆ ಮನೆಯಿಂದ ಹೊರ ಬರುವ ವಾಹನ ಸವಾರರು ಕುಟುಂಬದವರು ನಿಮಗಾಗಿ ಕಾಯುತ್ತಿರುತ್ತಾರೆ ಎಂಬ ಸತ್ಯ ಅರಿತು ಜೀವದ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿದ ಕಾಯ್ದೆ ಬಗ್ಗೆ ಅರಿತು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಎಂದರು.
ಪಟ್ಟಣ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಸಂತೋಷ್ ಪಾಟೀಲ್ ಮಾತನಾಡಿ, ಕಷ್ಟಪಟ್ಟು ದುಡಿದ ಹಣವನ್ನು ಅನಾವಶ್ಯಕವಾಗಿ ದಂಡದ ರೂಪದಲ್ಲಿ ಪಾವತಿಸದೆ ಅದೇ ಹಣದಲ್ಲಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಖರೀದಿಸಿ ಧರಿಸುವ ಮೂಲಕ ಪ್ರಾಣ ರಕ್ಷಣೆಯನ್ನು ಮಾಡಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶರತ್ ಕುಮಾರ್ ಎಚ್,ಮಲ್ಲೇಶಪ್ಪ ಸಹಿತ ಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಹಾಜರಿದ್ದರು,ಬೈಕ್ ರ್‍ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಗರಿಕರಲ್ಲಿ ಜಾಗೃತಿ ಉಂಟು ಮಾಡಿತು.