- ಬಿ.ಎಚ್.ಕೈಮರ ನಾರಾಯಣ ಗುರು ಸಮುದಾಯ ಭವನದಲ್ಲಿ 171 ನೇ ನಾರಾಯಣ ಗುರು ಜಯಂತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಇಂದು ಶೋಷಿತವರ್ಗದವರು, ಕೆಳವರ್ಗದವರು ದೇಶದಲ್ಲಿ ಸಮಾನತೆ ಕಂಡಿದ್ದರೆ ಅದು ಶ್ರೀ ನಾರಾಯಣಗುರು ಅವರ ತ್ಯಾಗ, ಶ್ರಮದ ಫಲದಿಂದ ಮಾತ್ರ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಭಾನುವಾರ ಬಿ.ಎಚ್.ಕೈಮರದಲ್ಲಿ ನಡೆದ 171 ನೇ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ ಸಮಾಜಕ್ಕೆ ನಾರಾಯಣಗುರು ಅವರ ಕೊಡುಗೆ ಅನನ್ಯ. ಅವರು ದೇಶ ಸೇವೆ, ಈಶ ಸೇವೆ ಎಂದು ಭಾವಿಸಿ ಮಾಡಿದ್ದಾರೆ. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಪ್ರತಿಪಾದಿಸಿ ಎಲ್ಲರನ್ನೂ ಒಗ್ಗೂಡಿಸಿ, ಸಹಭೋಜನ ನಡೆಸಿ ಸಮಾನತೆ, ಸಹಬಾಳ್ವೆ ಮೆರೆದ ಮೇರು ವ್ಯಕ್ತಿತ್ವದವರಾಗಿದ್ದಾರೆ ಎಂದರು.ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಶಿಕ್ಷಣವೇ ಮುಖ್ಯ ಅಸ್ತ್ರ. ಶಿಕ್ಷಣವಿದ್ದರೆ ಸ್ವತಂತ್ರವಾಗಿ ಬದುಕಬಹುದು. ಭಾರತ ಸರ್ಕಾರ ನಾರಾಯಣ ಗುರು ಅವರ ಅನನ್ಯ ಸೇವೆ ಪರಿಗಣಿಸಿ ಅವರ ಭಾವಚಿತ್ರವುಳ್ಳ ನಾಣ್ಯವನ್ನು ಹೊರತರಲಾಗಿತ್ತು. ಅವರ ಆದರ್ಶ, ತತ್ವ ಸಿದ್ದಾಂತಗಳನ್ನು ಇಂದಿನ ಯುವ ಪೀಳಿಗೆ ಪಾಲಿಸಬೇಕು. ಶೃಂಗೇರಿ ಕ್ಷೇತ್ರದ ಇತಿಹಾಸದಲ್ಲಿ ಕ್ಷೇತ್ರದ ಮೂರೂ ತಾಲೂಕುಗಳಲ್ಲಿ ನಾರಾಯಣಗುರು ಸಮುದಾಯದವರಿಗೆ ಅಧಿಕ ಅನುದಾನ ನೀಡಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಹ ಸಮುದಾಯ ಭವನ ನಿರ್ಮಾಣಕ್ಕೆ ₹7 ಲಕ್ಷ ಅನುದಾನ ನೀಡಿದ್ದಾರೆ. ಈ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ನಾನು ₹25 ಲಕ್ಷ ನೀಡುವುದಾಗಿ ಭರವಸೆ ನೀಡಿದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್.ಎಸ್.ಶೆಟ್ಟಿ ಮಾತನಾಡಿ, ನಾರಾಯಣಗುರು ಅವರು ಜನ್ಮತಃ ಒಂದು ಸಮುದಾಯಕ್ಕೆ ಸೇರಿದವರಾದರೂ ಅವರ ಚಿಂತನೆ, ತತ್ವಗಳು ಮಾನವೀಯತೆಯೇ ಧರ್ಮ ಎಂದು ಸಾರಿವೆ.ಇದು ಕೇವಲ ಅವರ ಸ್ಮರಣೆ ಸಮಾಜ ಪರಿವರ್ತನೆಯ ಕ್ಷಣವಾಗಿದೆ. ಸಮಾಜದ ಒಳಗಿನ ಅಸಮಾನತೆ ಹೋಗಲಾಡಿಸಲು ದೇವಾಲಯ, ಶಿಕ್ಷಣ, ನೈತಿಕ ಜೀವನದ ಮೂಲಕ ಹೋರಾಟ ನಡೆಸಿದರು. ಅವರು ಕಲಿತ ಪಾಠವನ್ನು ನಾವು ಇಂದು ಕೇವಲ ಓದುತ್ತಿಲ್ಲ, ಅನುಸರಿಸಬೇಕು. ಇಂತಹ ಮಹಾನ್ ವ್ಯಕ್ತಿಗಳನ್ನು ನೆನೆಸಿಕೊಳ್ಳದೇ ಇದ್ದರೆ ಜೀವನ ಪರಿಪೂರ್ಣ ವಾಗುವುದಿಲ್ಲ. ಕ್ಷೇತ್ರದಲ್ಲಿ ಅತಿಯಾದ ರಾಜಕೀಯತೆ, ಧರ್ಮತೆಯಿಂದ ಅವನತಿಯತ್ತ ಸಾಗುತ್ತಿದೆ. ವಿಚಾರ ಮಾಡುವ ವರಿಗೆ ತೆರೆದ ಮನಸ್ಸಿರಬೇಕು. ಕೇವಲ ಓಟಿಗಾಗಿ ರಾಜಕಾರಣವಾಗುತ್ತಿದೆ. ರಾಜಕೀಯತ್ವ, ಸಾಮಾಜಿಕ ನಾಯಕತ್ವದಲ್ಲಿ ನಮ್ಮನ್ನು ನಾವು ಗೌರವಿಸಬೇಕು. ಬಿಲ್ಲವ ಸಮಾಜ ಧೈರ್ಯ, ಸಾಹಸಕ್ಕೇ ಹೆಸರಾಗಿದೆ. ಯಾವುದೇ ಸಂಘಟನೆಗಳು ಒಂದೇ ಪಕ್ಷದ ಕಡೆ ವಾಲಬಾರದೆಂದರು.ಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಕೇರಳದಲ್ಲಿ ಬಡತನ ದಿಂದ, ಅನಕ್ಷರತೆಯಿಂದ ಹಿಂದೂಗಳು ಕ್ರಿಶ್ಚಿಯನ್, ಮುಸ್ಲೀಂ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದರು.ಕೆಳವರ್ಗದವರಿಗೆ ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲ. ನಾರಾಯಣಗುರು ಅಂದಿನ ಕಾಲದಲ್ಲೇ ಅಸಮಾನತೆ ವಿರುದ್ಧ ಸಿಡಿದೆದ್ದಿದ್ದರು. ನಮ್ಮ ಸಮುದಾಯದವರು ಶೈಕ್ಷಣಿಕ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ನಾರಾಯಣಗುರು ಆಶ್ರಮಕ್ಕೆ ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದರೆಂದು ನೆನಪಿಸಿದರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಜಯಂತ್ಯುತ್ಸವ ಅಂಗವಾಗಿ ನಡೆಸಿದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ಕೆ.ಟಿ.ನಾಗರತ್ನ, ಉಪಾಧ್ಯಕ್ಷೆ ಶಂಕರ್, ನಾರಾಯಣಗುರು ಸಮಾಜ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಪಿ.ಆರ್.ಸುಕುಮಾರ್, ಉಪಾಧ್ಯಕ್ಷರಾದ ನಾರಾಯಣಪೂಜಾರಿ, ಎಂ.ವಿ. ಮೂರ್ತಿ, ಜನಾರ್ಧನ, ಸಂಘಟನಾ ಕಾರ್ಯದರ್ಶಿ ಜಯರಾಂ, ಯುವ ವೇದಿಕೆ ಅಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಅಜಿತ್‌ಕುಮಾರ್, ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷೆ ಪ್ರೇಮಾ ವಾಸುದೇವ ಕೋಟ್ಯಾನ್, ಕಾರ್ಯದರ್ಶಿ ಶಾಂತಾ ಸುಗು, ಕಾರ್ಯಕಾರಿಣಿ ಸಮಿತಿ ಸದಸ್ಯರಅದ ಗಾಂಧಿಗ್ರಾಮ ನಾಗರಾಜು, ಮಾಧವಿ ರಾಮಚಂದ್ರ, ಹೊನಗಾರ್ ರಮೇಶ್, ಜಾನಕಿರಾಜಶೇಖರ್, ಹಾತೂರುಪ್ರಭಾಕರ್ ಇದ್ದರು.