ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆ ಆಡಳಿತಾವಧಿ 14 ತಿಂಗಳವರೆಗೆ ವಿಸ್ತರಣೆಯಾಗುವ ಹೊಸ ಆಶಾಕಿರಣ ಸದಸ್ಯರಲ್ಲಿ ಮೂಡಿದೆ. ನಗರಸಭೆ ಚುನಾಯಿತ ಸಮಿತಿ ಅವಧಿಯಷ್ಟೇ ಪೂರ್ಣಗೊಂಡಿದೆ. ಅಧ್ಯಕ್ಷ-ಉಪಾಧ್ಯಕ್ಷರ 30 ತಿಂಗಳ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಆ ಹಿನ್ನೆಲೆಯಲ್ಲಿ ಇನ್ನೂ ಬಾಕಿ ಇರುವ 14 ತಿಂಗಳವರೆಗೆ ಆಡಳಿತಾವಧಿ ಮುಂದುವರೆಸುವಂತೆ ಚುನಾಯಿತ ಪ್ರತಿನಿಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ನಗರಸಭೆ ಚುನಾಯಿತ ಸಮಿತಿಯ ಅವಧಿ ನವೆಂಬರ್ 2ಕ್ಕೆ ಪೂರ್ಣಗೊಳ್ಳಲಿದೆ. ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ 30 ತಿಂಗಳು ಎಂದು ನಿಗದಿಪಡಿಸಲಾಗಿದೆ. ಆ ಪ್ರಕಾರ ಚುನಾಯಿತ ಮಂಡಳಿಯ ಅಧಿಕಾರವಧಿ ಮುಕ್ತಾಯಕ್ಕೆ ಇನ್ನೂ 14 ತಿಂಗಳು ಬಾಕಿ ಇದೆ. ಕಳೆದ 2018 ಆಗಸ್ಟ್ ತಿಂಗಳಲ್ಲಿ ನಗರಸಭೆಗಳಿಗೆ ಚುನಾವಣೆ ನಡೆದು ಸೆಪ್ಟೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಣೆಯಾಗಿತ್ತು.
ಆದರೆ, ರಾಜ್ಯ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ಘೋಷಣೆ ಮಾಡಲಿಲ್ಲ. 14 ತಿಂಗಳ ಕಾಲ ಮೀಸಲಾತಿ ಘೋಷಣೆಯಾಗದೆ ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ಈ ಅವಧಿಯಲ್ಲಿ ಚುನಾಯಿತ ಪ್ರತಿನಿಧಿಗಳು ಯಾವ ಅಧಿಕಾರವಿಲ್ಲದೆ ವಂಚಿತರಾಗಿದ್ದರು. ಈ ಕಾಲಾವಧಿಯನ್ನೂ ಚುನಾಯಿತ ಮಂಡಳಿಯ ಆಡಳಿತಾವಧಿಯಾಗಿ ಪರಿಗಣಿಸಿರುವುದು ಸರಿಯಲ್ಲ ಎನ್ನುವುದು ಚುನಾಯಿತ ಪ್ರತಿನಿಧಿಗಳ ವಾದವಾಗಿದೆ.ಕಲಬುರಗಿ ಹೈಕೋರ್ಟ್ ಮಧ್ಯಂತರ ಆದೇಶ:
ಇದೇ ವಾದವನ್ನು ಮುಂದಿಟ್ಟುಕೊಂಡು ರಾಯಚೂರು ಜಿಲ್ಲೆಯ ನಗರಸಭೆ ಚುನಾಯಿತ ಪ್ರತಿನಿಧಿಗಳು ಕಲಬುರಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾಯಿತ ಮಂಡಳಿಯ ಅಧಿಕಾರವಧಿ 30 ತಿಂಗಳ ಕಾಲ ಆಡಳಿತ ನಡೆಸಲು ಅವಕಾಶ ನೀಡಬೇಕೆಂಬ ಮನವಿಯನ್ನು ಕಲಬುರಗಿ ಹೈಕೋರ್ಟ್ ಪುರಸ್ಕರಿಸಿ ಮಧ್ಯಂತರ ಆದೇಶ ನೀಡಿದೆ. ಇದೇ ಆದೇಶವನ್ನು ರಾಜ್ಯ ಉಚ್ಛ ನ್ಯಾಯಾಲಯ ಎತ್ತಿ ಹಿಡಿಯುವ ಸಾಧ್ಯತೆಗಳಿವೆ ಎಂದು ನಂಬಲಾರ್ಹ ಮೂಲಗಳು ತಿಳಿಸಿವೆ.ಚುನಾಯಿತ ಮಂಡಳಿಯ ಅಧಿಕಾರವಧಿ ಪೂರ್ಣಗೊಳಿಸಲು ಅವಕಾಶ ನೀಡುವಂತೆ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಮತ್ತು ಇತರರು ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದ್ದು, ಅ.9ಕ್ಕೆ ಮತ್ತೆ ವಿಚಾರಣೆಗೆ ಬರುತ್ತಿದೆ. ಕಲಬುರಗಿ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಿಂದ ಸಂತಸಗೊಂಡಿರುವ ನಗರಸಭಾ ಸದಸ್ಯರು ಇದೇ ಮಧ್ಯಂತರ ಆದೇಶವನ್ನು ಆಧರಿಸಿ ರಾಜ್ಯ ಹೈಕೋರ್ಟ್ ಕೂಡ ಅಧಿಕಾರವಧಿ ವಿಸ್ತರಣೆಗೆ ಅವಕಾಶ ಮಾಡಿಕೊಡಬಹುದೆಂಬ ಭರವಸೆಯಲ್ಲಿ ಕುತೂಹಲದಿಂದ ಎದುರುನೋಡುತ್ತಿದ್ದಾರೆ.
ಇನ್ನೊಂದು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದ್ದ ಚುನಾಯಿತ ಪ್ರತಿನಿಧಿಗಳು ಇದೀಗ ಆಡಳಿತಾವಧಿ ಇನ್ನೂ 14 ತಿಂಗಳವರೆಗೆ ಸಿಗಬಹುದೆಂಬ ವಿಶ್ವಾಸದಲ್ಲಿದ್ದಾರೆ. ಇದು ನಿಜವೇ ಆದಲ್ಲಿ ಒಂದು ವರ್ಷ ಎರಡು ತಿಂಗಳು ಅಧಿಕಾರ ಕಳೆದುಕೊಳ್ಳುವ ಸದಸ್ಯರ ಆತಂಕ ದೂರವಾಗಲಿದೆ. 14 ತಿಂಗಳ ಅಧಿಕಾರವಧಿ ಮುಂದುವರೆಯುವ ನಿಟ್ಟಿನಲ್ಲಿ ನಿರಾಳರಾಗಲಿದ್ದಾರೆ.ಚುನಾವಣೆಗೆ ಹೊಸಬರ ಸಿದ್ಧತೆ:
ನವೆಂಬರ್ 2ಕ್ಕೆ ಚುನಾಯಿತ ಸದಸ್ಯರ ಅಧಿಕಾರವಧಿ ಪೂರ್ಣಗೊಂಡು ವಾರ್ಡ್‌ಗಳಿಗೆ ನಿಗದಿಪಡಿಸಿರುವ ಹಳೆಯ ಮೀಸಲಾತಿ ಮುಂದುವರೆಯುವುದರಿಂದ ಅನೇಕರು ಚುನಾವಣೆಗೆ ಈಗಾಗಲೇ ಪೂರ್ವತಯಾರಿ ನಡೆಸಿದ್ದಾರೆ. ಹೊಸಬರು ಚುನಾವಣೆ ಎದುರಿಸುವುದಕ್ಕೆ ಸಜ್ಜಾಗಿದ್ದಾರೆ. ಜಿಲ್ಲಾಡಳಿತ ಕೂಡ ವಾರ್ಡ್‌ಗಳ ಪುನರ್‌ವಿಂಗಡಣೆ ಪ್ರಕ್ರಿಯೆ ಆರಂಭಿಸಿದೆ. ಚುನಾವಣಾ ಆಕಾಂಕ್ಷಿಗಳು ತಾವು ಸ್ಪರ್ಧಿಸುವ ವಾರ್ಡ್‌ಗಳಿಗೆ ಹೊಸದಾಗಿ ಸೇರ್ಪಡೆಯಾಗುವ ಪ್ರದೇಶಗಳು ಯಾವುವು, ಎಷ್ಟು ಸಂಖ್ಯೆಯ ಜನರು ಹೊಸದಾಗಿ ಸೇರ್ಪಡೆಗೊಳ್ಳುವರು. ಕಳೆದುಕೊಳ್ಳುವ ಪ್ರದೇಶಗಳು, ಅಲ್ಲಿದ್ದ ಜನಸಂಖ್ಯೆ ಇವೆಲ್ಲವನ್ನೂ ಲೆಕ್ಕ ಹಾಕುವುದರಲ್ಲಿ ನಿರತರಾಗಿದ್ದಾರೆ.ಹೊಸಬರು ಅತ್ಯುತ್ಸಾಹದಿಂದಲೇ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ತಾವು ಸ್ಪರ್ಧಿಸುವ ವಾರ್ಡ್‌ಗಳಿಂದ ಟಿಕೆಟ್ ದೊರಕಿಸುವಂತೆ ನಾಯಕರ ಬೆನ್ನುಹತ್ತಿದ್ದಾರೆ. ವಾರ್ಡ್‌ಗಳಲ್ಲಿ ತಮ್ಮ ಪ್ರಭಾವ, ಜನಪ್ರಿಯತೆ ಇರುವುದನ್ನು ಮನದಟ್ಟು ಮಾಡಿಕೊಡುತ್ತಿದ್ದು, ವಾರ್ಡ್‌ನೊಳಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ.
ಹಳಬರೂ ಸ್ಪರ್ಧೆಗೆ ಒಲವು:ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದ ಹಳಬರೇ ಮತ್ತೊಂದು ಅವಧಿಗೆ ಸ್ಪರ್ಧಿಸಲು ಆಸಕ್ತಿ ತೋರಿದ್ದರೆ ಅವರಿಗೆ ಪಕ್ಷದ ಟಿಕೆಟ್ ತಪ್ಪಿಸಿ ತಾವು ಅಭ್ಯರ್ಥಿಗಳಾಗುವುದಕ್ಕೆ ಅನೇಕರು ಶತಪ್ರಯತ್ನ ನಡೆಸುತ್ತಿದ್ದಾರೆ.
ಒಮ್ಮೆ ಏನಾದರೂ ಹೈಕೋರ್ಟ್ 14 ತಿಂಗಳ ಅವಧಿ ಮುಂದುವರಿಕೆಗೆ ಅವಕಾಶ ನೀಡಿದರೆ ಆಕಾಂಕ್ಷಿಗಳಿಗೆ ಆಶಾಭಂಗವಾಗುವುದಂತೂ ಖಚಿತ. ರಾಜ್ಯ ಸರ್ಕಾರವೇನದರೂ ಸಕಾರಣವನ್ನು ಮುಂದಿಟ್ಟು ಮಧ್ಯಂತರ ಆದೇಶ ತೆರವಿಗೆ ಮುಂದಾದರೆ ಆಗ ಇವರ ಆಸೆ ಜೀವಂತವಾಗಬಹುದೆಂಬ ನಿರೀಕ್ಷೆ ಇದೆ.ಸರ್ಕಾರದ ವೈಫಲ್ಯಕ್ಕೆ ಶಿಕ್ಷೆ ನಮಗೇಕೆ?
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ 14 ತಿಂಗಳು ವಿಳಂಬವಾಗಿ ಮೀಸಲಾತಿ ನಿಗದಿಪಡಿಸಿದ್ದು ಸರ್ಕಾರದ ವೈಫಲ್ಯ. ಅದಕ್ಕಾಗಿ ನಮ್ಮ ಅಧಿಕಾರವಧಿಯನ್ನೇ ಕಸಿದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಮುಂದೆಯೂ ಚುನಾವಣೆ ನಡೆಸಿ ಇದೇ ರೀತಿಯಾದರೆ ಸ್ಥಳೀಯ ಸಂಸ್ಥೆಗಳು ಅಧಿಕಾರ ನಡೆಸುವುದಾದರೂ ಹೇಗೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳು ಅಭಿವೃದ್ಧಿಯತ್ತ ಮುನ್ನಡೆಸುವುದು ಹೇಗೆ. ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ ಮೊಟಕುಗೊಳಿಸುವ ಹುನ್ನಾರ ಸರಿಯಲ್ಲ ಎಂದು ನಗರಸಭಾ ಸದಸ್ಯರು ದೂಷಿಸಿದ್ದಾರೆ.ಇದು ನಿಜಕ್ಕೂ ಚುನಾಯಿತ ಪ್ರತಿನಿಧಿಗಳ ಹಕ್ಕಿನ ಕಸಿತ. ರಾಜ್ಯ ಸರ್ಕಾರ ಚುನಾವಣೆ ನಡೆಸಿದ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ಚುನಾವಣೆ ನಡೆಸಬೇಕಿತ್ತು. 1 ವರ್ಷ 2 ತಿಂಗಳು ವಿಳಂಬ ಮಾಡಿದ್ದು ಸರ್ಕಾರದ ತಪ್ಪು. ಆ 14 ತಿಂಗಳ ಅವಧಿಯನ್ನು ಕಸಿಯುತ್ತಿರುವುದು ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನೇ ಕಸಿದಂತೆ. 30 ತಿಂಗಳು ಅಧಿಕಾರದಲ್ಲಿ ಮುಂದುವರೆಯುವುದಕ್ಕೆ ನಮಗೆ ಅವಕಾಶ ನೀಡಬೇಕು.- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆನಗರಸಭೆ ಚುನಾಯಿತ ಮಂಡಳಿಗೆ ಇದುವರೆಗೆ ಕೇವಲ 15 ತಿಂಗಳು ಮಾತ್ರ ಆಡಳಿತ ನಡೆಸಲು ಅವಕಾಶ ದೊರಕಿದೆ. ಉಳಿದ 16 ತಿಂಗಳು ಆಡಳಿತಾಧಿಕಾರಿಗಳ ಕೈಯ್ಯಲ್ಲೇ ಅಧಿಕಾರವಿತ್ತು. ಸಂವಿಧಾನಬದ್ಧವಾಗಿ ಸರ್ಕಾರ ನಿಗದಿಪಡಿಸಿದ 30 ತಿಂಗಳ ಅವಧಿ ಪೂರ್ಣಗೊಳಿಸಲು ನಮಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸಂವಿಧಾನವನ್ನು ಉಲ್ಲಂಘಿಸಿದಂತಾಗುವುದು. ನ್ಯಾಯಾಲಯದಿಂದ ಉತ್ತಮ ಆದೇಶ ಹೊರಬೀಳುವ ನಿರೀಕ್ಷೆ ಇದೆ.
- ಎಚ್.ಎಸ್.ಮಂಜು, ಮಾಜಿ ಅಧ್ಯಕ್ಷರು, ನಗರಸಭೆ