ಮಾಗಡಿ: ಕಾಡುಗೊಲ್ಲರ ಸಂಘದಿಂದ ಜಾತಿ ಪ್ರಮಾಣ ಪತ್ರ ಪಡೆಯಲು ಅಧಿಕಾರಿಗಳ ಮೇಲೆ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಬಮೂಲ್ ನಿರ್ದೇಶಕ ಎಚ್.ಎನ್.ಅಶೋಕ್ ಸತತ ಒತ್ತಡ ಹಾಕಿದ ಪರಿಣಾಮ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಸಿಕ್ಕಿದೆ ಎಂದು ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬಸವೇನಹಳ್ಳಿ ಸುರೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ಜಿಲ್ಲೆಯ 5 ತಾಲೂಕುಗಳಲ್ಲಿ ನೆಲೆಸಿರುವ ಕಾಡುಗೊಲ್ಲರು ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳು ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಿ ಪ್ರವರ್ಗ-1ರಲ್ಲಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಪಡೆಯಬೇಕು. ಮಾಗಡಿ ತಾಲೂಕಿನ 30 ಗ್ರಾಮಗಳ ಹೊರಗೆ ಹೊಲಮಾಳದಲ್ಲಿ ಕಾಡುಗೊಲ್ಲರು ಗುಡಿಸಲು ಮತ್ತು ಹೆಂಚಿನ ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಕಾಡುಗೊಲ್ಲರು ತಹಸೀಲ್ದಾರರ ಕಚೇರಿಗೆ ತೆರಳಿ ನಾಳೆಯಿಂದಲೇ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕು ಎಂದರು.ಸಂಶೋಧಕ ಡಾ.ಕೆಂಚಪ್ಪ ಮಾತನಾಡಿ, ಕಾಡುಗೊಲ್ಲರು ಕರ್ನಾಟಕದ ಮೂಲನಿವಾಸಿಗಳು. ಅಡವಿಯ ಹುಲ್ಲು, ಮಡುವಿನ ನೀರು, ತೆವರು, ದಿಣ್ಣೆ, ನೀರು ಇರುವಲ್ಲಿ ಹಸು, ಕರು, ಕುರಿ, ಮೇಕೆ ಇತರೆ ಪ್ರಾಣಿಗಳನ್ನು ಸಾಕಲು ಹಟ್ಟಿ, ದನವಿನ ಗೂಡು, ಕರುವಿನ ಗೂಡು ಕಟ್ಟಿಕೊಂಡು ವಾಸಿಸುತ್ತಿದ್ದವರು. ಇಂದಿಗೂ ಕಾಡುಗೊಲ್ಲರ ಹಟ್ಟಿಗಳಲ್ಲಿ ಮೂಲ ಸವಲತ್ತುಗಳಿಲ್ಲ. ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ, ಸರ್ಕಾರ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರಬೇಕು. ಬುಡಕಟ್ಟು ಸಮುದಾಯದ ಆಚಾರವಿಚಾರ ಇತರೆ ಸಂಪ್ರದಾಯಗಳನ್ನು ಅಕ್ಷರವಂಚಿತ ಪಶುಪಾಲಕರನ್ನು ಮುಂದುವರಿದಿರುವ ಸಮುದಾಯಗಳು ಟೀಕಿಸುವುದನ್ನು ಬಿಟ್ಟು, ಕಾಡುಗೊಲ್ಲರಿಗೆ ಸಮಾನ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ತಹಸೀಲ್ದಾರ್ ಕಚೇರಿಯಿಂದ ಕೊಡ ಮಾಡಿರುವ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ಬಿಡುಗಡೆ ಮಾಡಲಾಯಿತು.ಸಮುದಾಯದ ಮುಖಂಡರಾದ ಮಾರಣ್ಣ, ಚಿಕ್ಕಣ್ಣ, ಚಿತ್ತಯ್ಯ ಪೂಜಾರಿ, ದಾಸೇಗೌಡ, ಜಯರಾಮಯ್ಯ, ಜಯಣ್ಣ, ಮಾರಪ್ಪ, ಕಾಂತರಾಜು, ದಾಸಪ್ಪ, ನಾಗರಾಜು, ಮಧು, ಯೋಗೇಶ್, ಗಿರಿಯಪ್ಪ, ಸುರೇಶ್,ಗಂಗಣ್ಣ, ಗಿರೀಶ್, ಚಿಕ್ಕಮಾರಯ್ಯ, ಚಿಕ್ಕಣ್ಣ, ಪೂಜಾರಿ ನವೀನ್‌ಕುಮಾರ್, ರಾಜಣ್ಣ, ಪ್ರಸಾದ್, ಮಹಾಲಿಂಗಯ್ಯ, ನಾಗೇಶ್, ಧನಂಜಯ, ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.
(ಫೋಟೋ ಕ್ಯಾಫ್ಷನ್)ಮಾಗಡಿಯಲ್ಲಿ ಸರ್ಕಾರ ನೀಡಿರುವ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಬಸವೇನಹಳ್ಳಿ ಸುರೇಶ್ ಹಾಗೂ ಮುಖಂಡರು ಪ್ರದರ್ಶಿಸಿದರು.