ಎಲ್ಲಕ್ಕಿಂತ ಆರೋಗ್ಯ ಸಂಪತ್ತೇ ಮಿಗಿಲು: ಶಾಸಕ ಪ್ರಸಾದ ಅಬ್ಬಯ್ಯ

KannadaprabhaNewsNetwork |  
Published : Jan 12, 2026, 02:15 AM IST
ಫೋಟೋ | Kannada Prabha

ಸಾರಾಂಶ

ಜನರಿಗೆ ಆರೋಗ್ಯ ಸೇವೆ ನೀಡಬೇಕು ಎಂಬ ಕಲ್ಪನೆಯಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಮಾಜ ಸೇವೆಗೆ ಮುಂದಾಗಿರುವುದು ಅಭಿನಂದನಾರ್ಹ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹುಬ್ಬಳ್ಳಿ: ಎಲ್ಲಕ್ಕಿಂತಲೂ ಆರೋಗ್ಯ ಸಂಪತ್ತೇ ಮಿಗಿಲು. ಈ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎಂಬ ಕಲ್ಪನೆಯಿಂದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಮಾಜ ಸೇವೆಗೆ ಮುಂದಾಗಿರುವುದು ಅಭಿನಂದನಾರ್ಹ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಂದಿರಾ ಗಾಜಿನ ಮನೆಯಲ್ಲಿ "ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ " ಸಹಯೋಗದೊಂದಿಗೆ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ " ಸುವರ್ಣ ಆರೋಗ್ಯ ಶಿಬಿರ "ದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಷ್ಟು ಹಣವಿದ್ದರೂ ಅದನ್ನು ಅನುಭವಿಸಲು ಆರೋಗ್ಯಯುತ ಶರೀರ ಇರದಿದ್ದರೆ ಪ್ರಯೋಜನವಿಲ್ಲ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಹಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಂದು ಉಳ್ಳವರು ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಾರೆ. ಬಡವರು, ನಿರ್ಗತಿಕರು ಸರಿಯಾದ ಚಿಕಿತ್ಸೆ ಪಡೆಯದೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದನ್ನು ಕಾಣುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು "ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ " ಸಂಸ್ಥೆಯು 20ಕ್ಕೂ ಅಧಿಕ ಪ್ರತಿಷ್ಠಿತ ಆಸ್ಪತ್ರೆಗಳನ್ನು ಒಂದೆಡೆ ಸೇರಿಸಿ ಸರ್ವ ರೋಗಗಳಿಗೂ ಚಿಕಿತ್ಸೆ, ವೈದ್ಯರಿಂದ ಸಮಾಲೋಚನೆ, ಅಗತ್ಯ ಪರಿಹಾರೋಪಾಯಗಳ ಕುರಿತು ಅರಿವು ಮೂಡಿಸುವ ಕಾರ್ಯ ಕೈಗೊಂಡಿರುವುದು ಅಭಿನಂದನಾರ್ಹ ಎಂದರು.

ಈ ಶಿಬಿರದಲ್ಲಿ ವೈದ್ಯರು ಕೇವಲ ಚಿಕಿತ್ಸೆ ನೀಡದೇ ಉತ್ತಮ ಆರೋಗ್ಯ ಹೊಂದಲು ಬೇಕಾದ ಅಗತ್ಯ ಸಲಹೆ, ಆರೋಗ್ಯಯುತವಾದ ಜೀವನ ಪದ್ಧತಿ ಕುರಿತು ಸಲಹೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಇಂದು ಚಿಕ್ಕಮಕ್ಕಳಿಂದ ಹಿಡಿದು ವೃದ್ಧರಿಗೂ ಆರೋಗ್ಯ ಸಮಸ್ಯೆಗಳನ್ನು ನಾವಿಂದು ಕಾಣುತ್ತೇವೆ. ಒತ್ತಡದ ಕೆಲಸ, ಕಲಬೆರಕೆಯ ಆಹಾರವೇ ಇದಕ್ಕೆ ಪ್ರಮುಖ ಕಾರಣ. ಹಾಗಾಗಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕುರಿತು ಕಾಳಜಿ ಹೊಂದುವಂತೆ ಕರೆ ನೀಡಿದರು.

ಕೆಎಂಸಿಆರ್‌ಐನ ನಿರ್ದೇಶಕ ಡಾ. ಈಶ್ವರ ಹೊಸಮನಿ ಅವರು, ಬಡ ಜನರಿಗೆ ಉತ್ತಮ ಆರೋಗ್ಯ ಕಲ್ಪಿಸುವಲ್ಲಿ ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಖಾಸಗೀಯವರೂ ಕೈಗೂಡಿಸುವುದು ಇಂದಿನ ಅಗತ್ಯವಾಗಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳಾದ ಏಷಿಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಇಂಥದೊಂದು ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಮಾದರಿ ಕೆಲಸ ಮಾಡಿವೆ ಎಂದು ಶ್ಲಾಘಿಸಿದರು.

ಕನ್ನಡಪ್ರಭದ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ನಿತ್ಯದ ವಿದ್ಯಮಾನಗಳನ್ನು ಜನರಿಗೆ ತಿಳಿಸುವುದರ ಜತೆಗೆ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಈ ಶಿಬಿರ ಆಯೋಜಿಸಲಾಗಿದೆ. ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಸಂಕಲ್ಪದೊಂದಿಗೆ ಪ್ರತಿಷ್ಠಿತ ಆಸ್ಪತ್ರೆಗಳನ್ನು ಈ ಶಿಬಿರದಲ್ಲಿ ಒಂದೆಡೆ ಸೇರಿಸಲಾಗಿದೆ. ಈ ಹಿಂದೆಯೂ ಕೊರೋನಾ, ಅತಿವೃಷ್ಟಿಯಂತಹ ಸಂದರ್ಭದಲ್ಲೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ಜನರ ಬಾಗಿಲಿಗೆ ತೆರಳಿ ಪರಿಹಾರ ಸಾಮಗ್ರಿ ವಿತರಿಸುವ ಮೂಲಕ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಿದೆ ಎಂದರು.

ಈ ಸಂದರ್ಭದಲ್ಲಿ ಏಷ್ಯಾನೆಟ್‌ ಸುವರ್ಣಾ ನ್ಯೂಸ್‌ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಗುರುರಾಜ ಹೂಗಾರ, ಧಾರವಾಡ ವರದಿಗಾರ ಪರಶುರಾಮ ಅಂಗಡಿ, ಶ್ರೀನಿವಾಸ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮೃತಾ ಗೌಡ ಕಾರ್ಯಕ್ರಮ ನಿರೂಪಿಸಿದರು.ನೇತ್ರ ತಪಾಸಣೆ

ಸಮಾರೋಪ ಸಮಾರಂಭದ ಪೂರ್ವದಲ್ಲಿ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಶಿಬಿರದಲ್ಲಿನ ಪ್ರತಿಯೊಂದು ಮಳಿಗೆಗೆ ತೆರಳಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಶುಗರ್, ಬಿಪಿ, ರಕ್ತ ತಪಾಸಣೆ, ಕಣ್ಣುಗಳ ತಪಾಸಣೆ ಮಾಡಿಸಿಕೊಂಡರು.

ಈ ವೇಳೆ ಮಾತನಾಡಿದ ಶ್ರೀಗಳು, ಆರೋಗ್ಯಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ -ಕನ್ನಡಪ್ರಭದಿಂದ ಆಯೋಜಿಸಲಾದ ಸುವರ್ಣ ಆರೋಗ್ಯ ಶಿಬಿರದಲ್ಲಿ 20ಕ್ಕೂ ಅಧಿಕ ಪ್ರತಿಷ್ಠಿತ ಆಸ್ಪತ್ರೆಗಳನ್ನು ಒಂದೆಡೆ ಸೇರಿಸಿ ಸಾವಿರಾರು ಜನರಿಗೆ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಕಲ್ಪಿಸಿರುವುದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ