ಆರೋಗ್ಯ ಸಿಬ್ಬಂದಿ ಗುಣಮಟ್ಟದ ಸೇವೆ ನೀಡಲಿ: ಬಸವರಾಜ ಶಿವಣ್ಣನವರ

KannadaprabhaNewsNetwork |  
Published : Aug 28, 2026, 02:15 AM IST
ಬ್ಯಾಡಗಿ ತಾಲೂಕಿನ ಕೆರೂಡಿ, ಅಂಗರಗಟ್ಟಿ ಗ್ರಾಮದಲ್ಲಿ ಆಯುಷ್ಮಾನ್‌ ಆರೋಗ್ಯ ಕೇಂದ್ರ ಕಟ್ಟಡ ಭೂಮಿಪೂಜೆಯನ್ನು ಶಾಸಕ ಬಸವರಾಜ ಶಿವಣ್ಣನವರ ನೆರವೇರಿಸಿದರು. | Kannada Prabha

ಸಾರಾಂಶ

ಬ್ಯಾಡಗಿ ತಾಲೂಕಿನ ಕೆರೂಡಿ, ಅಂಗರಗಟ್ಟಿ ಗ್ರಾಮಗಳಲ್ಲಿ ₹65 ಲಕ್ಷ ವೆಚ್ಚದ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬಸವರಾಜ ಶಿವಣ್ಣನವರ ಭೂಮಿಪೂಜೆ ನೆರವೇರಿಸಿದರು.

ಬ್ಯಾಡಗಿ: ವೈದ್ಯಕೀಯ ಸಿಬ್ಬಂದಿ ಮಾನವೀಯತೆ ಮೇಲೆ ಗುಣಮಟ್ಟದ ಸೇವೆ ನೀಡಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ತಾಲೂಕಿನ ಕೆರೂಡಿ, ಅಂಗರಗಟ್ಟಿ ಗ್ರಾಮಗಳಲ್ಲಿ ₹65 ಲಕ್ಷ ವೆಚ್ಚದ ಆಯುಷ್ಮಾನ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಬಡವರು ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿರುವ ಗ್ರಾಮೀಣ ಪ್ರದೇಶದಲ್ಲಿ ರೋಗ-ರುಜಿನಗಳು ಕಾಣಿಸಿಕೊಂಡಾಗ ಪಟ್ಟಣಕ್ಕೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಆರೋಗ್ಯ ಕೇಂದ್ರಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಕೇಂದ್ರಗಳಲ್ಲಿ 100 ಹಾಸಿಗೆ ಆಸ್ಪತ್ರೆ, ಕಾಗಿನೆಲೆ, ಚಿಕ್ಕಬಾಸೂರು, ಕದರಮಂಡಲಗಿ ಸೇರಿದಂತೆ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈಗ ತಾಲೂಕಿನ ಮೋಟೆಬೆನ್ನೂರು ಗ್ರಾಮಕ್ಕೂ ಹೊಸದಾಗಿ ಆಸ್ಪತ್ರೆ ಮಂಜೂರಾಗಿದೆ. ಗ್ರಾಪಂ ಮಟ್ಟದಲ್ಲಿ ಉಪ ಆರೋಗ್ಯ ಕೇಂದ್ರಗಳನ್ನು ಆರಂಭಿಸಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಅನುದಾನ ಒದಗಿಸುತ್ತಿದ್ದು, ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದೆ. ತಾಲೂಕಿನ 21 ಗ್ರಾಪಂಗಳಲ್ಲಿ ಇಂತಹ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ವೈದ್ಯರು ಇರುವುದಿಲ್ಲ, ಆರೋಗ್ಯ ಕಾರ್ಯಕರ್ತರು, ಸ್ಥಳೀಯ ಆಶಾಗಳು ಸೇವೆ ಸಲ್ಲಿಸುತ್ತಿದ್ದು, ಪ್ರಾಥಮಿಕವಾಗಿ ಕಂಡುಬಂದ ಸಣ್ಣಪುಟ್ಟ ರೋಗಗಳಿಗೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವಿದೆ. ಗರ್ಭಿಣಿ, ಬಾಣಂತಿಯರಿಗೆ ಮಾರಕ ಕಾಯಿಲೆಗಳ ಚಿಕಿತ್ಸೆ, ವಿವಿಧ ಚುಚ್ಚುಮದ್ದುಗಳು, ಜ್ವರ, ವಾಂತಿ-ಭೇದಿ, ತಲೆನೋವು ಸೇರಿದಂತೆ ವಿವಿಧ ಕಾಯಿಲೆಗಳಿಗೆ ನುರಿತ ಆರೋಗ್ಯ ಕಾರ್ಯಕರ್ತರ ಸೇವೆ ಲಭ್ಯವಾಗಲಿದೆ. ಗ್ರಾಮಸ್ಥರು ಕಟ್ಟಡ ನಿರ್ಮಿಸಲು, ಸಹಕಾರ ಹಾಗೂ ಭವಿಷ್ಯದಲ್ಲಿ ಗ್ರಾಮಸ್ಥರ ಆಸ್ತಿಯಂತೆ ಕಾಪಾಡುವ ಜತೆಗೆ ಸಿಬ್ಬಂದಿ ಸೇವೆ ಪಡೆಯುವಂತೆ ಮನವಿ ಮಾಡಿದರು.

ಗ್ರಾಮದಲ್ಲಿ ಪಶು ಆಸ್ಪತ್ರೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಿರುವೆ. ಗ್ರಾಮಸ್ಥರ ಬೇಡಿಕೆ ಶೀಘ್ರ ಈಡೇರಲಿದೆ. ಅಂಗರಗಟ್ಟಿ, ನಂದಿಹಳ್ಳಿ, ಕೆರೂಡಿ, ರಾಮಗೊಂಡನಹಳ್ಳಿ ಮಾರ್ಗದ ಹೊಸ ರಸ್ತೆಗೆ ₹7 ಕೋಟಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣೆವ್ವ ಯಲಿಗಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭನಗೌಡ್ರ ಪಾಟೀಲ, ಕೆಸಿಸಿ ಬ್ಯಾಂಕ್‌ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ದಾನಪ್ಪ ಚೂರಿ, ಮಾರುತಿ ಅಚ್ಚೀಗೇರಿ, ಗ್ರಾಮಸ್ಥರಾದ ರುದ್ರಪ್ಪ ಮಲ್ಲಾಡದ, ಷಣ್ಮುಖಪ್ಪ ಕುಂಚೂರು, ಶೇಖಪ್ಪ ಮತ್ತೂರು, ಶಂಭು ಎಲಿಗಾರ, ನಾಗರಾಜ ಮಲ್ಲಾಡದ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಕ್ಷೇತ್ರಕ್ಕೆ ಶಿರಸಂಗಿ ಲಿಂಗರಾಜರ ಕೊಡುಗೆ ಅಪಾರ: ಡಾ. ನಿಂಗು ಸೊಲಗಿ
ಪು.ಬಡ್ನಿ ಗ್ರಾಮದಲ್ಲಿ ಅನೈತಿಕ ಸಂಬಂಧ: ಯುವಕನ ಕೊಲೆ