- ಮಾ.14ಕ್ಕೆ ಸಭೆ ಮುಂದೂಡಿದ ಶಾಸಕ ಹರೀಶ್ । ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸಭೆ
ಕನ್ನಡಪ್ರಭ ವಾರ್ತೆ ಹರಿಹರ
ನಗರದ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಬಿ.ಪಿ. ಹರೀಶ್ ಅಧ್ಯಕ್ಷತೆಯಲ್ಲಿ ಶನಿವಾರ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಯಿತು. ಆದರೆ, ಸಮಿತಿ ಸದಸ್ಯರು ಹಾಗೂ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ.ಲತಾದೇವಿ ಮಧ್ಯೆ ತೀವ್ರ ವಾಗ್ವಾದದಿಂದಾಗಿ ಸಭೆ ನಡೆಸಲಾಗದೇ, ಮುಂದೂಡಲಾಯಿತು.ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ. ಲತಾದೇವಿ ತಾವು ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ ಸಾಧಿಸಿದ ಅಭಿವೃದ್ಧಿ ಕಾರ್ಯಗಳ ಕುರಿತು ವರದಿ ಸಲ್ಲಿಸಿ ಮಾತನಾಡಿದರು. ಅನಂತರ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಆರ್. ವಿಜಯಕುಮಾರ ಮಾತನಾಡಿ, ಡಾ. ಲತಾದೇವಿ ಹೆಸರಿಗೆ ಮಾತ್ರ ಪ್ರಭಾರ ಮುಖ್ಯ ವೈದ್ಯಾಧಿಕಾರಿ. ಈ ಆಸ್ಪತ್ರೆಯ ಆಡಳಿತವನ್ನು ಅವರ ಪತಿ, ನಿವೃತ್ತ ವೈದ್ಯ ಅವರೇ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನೂತನವಾಗಿ ಆರಂಭಗೊಂಡಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಟೇಬಲ್, ಕುರ್ಚಿ, ಮತ್ತಿತರೆ ಸಾಮಗ್ರಿಗಳನ್ನು ಖರೀದಿಸಿರುವ ಬಿಲ್ ಕೋಟಾ ಆಗಿದೆ. ರಾತ್ರಿ ಆಯಿತ್ತೆಂದರೆ ಆಸ್ಪತ್ರೆ ತುಂಬೆಲ್ಲಾ ಕತ್ತಲು ಆವರಿಸುತ್ತಿದೆ. ವಿಷಜಂತುಗಳು ತಮ್ಮ ರಾಜ್ಯಭಾರ ನಡೆಸುತ್ತಿವೆ. ಇದಕ್ಕೆಲ್ಲಾ ಮುಖ್ಯ ವೈದ್ಯಾಧಿಕಾರಿಗಳ ನಿರ್ಲಕ್ಷತನವೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದರು.
ವಿಜಯಕುಮಾರ ಡಾ. ಲತಾದೇವಿ ಅವರಿಗೆ ಮಾತನಾಡಲು ಅವಕಾಶ ನೀಡದೇ ಆರೋಪ ಮುಂದುವರೆಸಿದರು. ಇದರಿಂದ ಕೋಪಗೊಂಡ ವೈದ್ಯಾಧಿಕಾರಿ ಡಾ. ಲತಾದೇವಿ ಅವರು, ನಾನು ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೂ ಸ್ಥಾಯಿ ಸಮಿತಿ ಸದಸ್ಯರಾದ ವಿಜಯಕುಮಾರ್ ನಿತ್ಯ ಒಂದಿಲ್ಲ ಒಂದು ರೀತಿಯಿಂದ ನನಗೆ ತೊಂದರೆ ಕೊಡುತ್ತಲೇ ಇದ್ದಾರೆ. ನಮ್ಮ ಖಾತೆಯಲ್ಲಿ ಹಣ ಇಲ್ಲದಿದ್ದರೂ ಹೇಗಾದರೂ ಮಾಡಿ ಆಸ್ಪತ್ರೆಯ ಡೇಟಾ ಎಂಟ್ರಿ ಆಪರೇಟರ್ ಅವರಿಗೆ ಒಂದೊಂದು ತಿಂಗಳ ಸಂಬಳದ ಚೆಕ್ ನೀಡಿದರೂ ಸಹ, 2 ತಿಂಗಳ ಚೆಕ್ ನೀಡುವವರೆಗೂ ನೀವು ಚಕ್ ತೆಗೆದುಕೊಳ್ಳಬೇಡಿ ಎಂದು ಅವರಿಗೆ ಪ್ರಚೋದಿಸುತ್ತಾರೆ ಎಂದು ಹರಿಹಾಯ್ದರು.
ಆಗ ಶಾಸಕ ಬಿ.ಪಿ. ಹರೀಶ್ ಮಧ್ಯ ಪ್ರವೇಶಿಸಿ ಮಾತನಾಡಿ, ಇಂದು ನಡೆದ ಸಭೆಯಲ್ಲಿ ನನಗೆನೂ ಅರ್ಥವಾಗುತ್ತಿಲ್ಲ. ಮುಂದಿನ ಶನಿವಾರ ಮಾ.14ರಂದು ಬೆಳಗ್ಗೆ 10.30ಕ್ಕೆ ಸಭೆ ಕರೆಯಿರಿ. ಅಲ್ಲಿಯವರೆಗೂ ನಾನೂ ಈ ಆಸ್ಪತ್ರೆಯ ಸಮಗ್ರ ಮಾಹಿತಿ ಸಂಗ್ರಹಿಸುತ್ತೇನೆ. ಆ ಸಭೆಯಲ್ಲಿ ಎಲ್ಲ ವಿಷಯಗಳ ಕುರಿತು ಚರ್ಚಿಸೋಣ ಎಂದರು. ಆಗ ಸಭೆ ತಣ್ಣಗಾಗಿ, ಸಭೆ ಮುಂದೂಡಲ್ಪಟ್ಟಿತು.
- - -
* ಆಸ್ಪತ್ರೆ ಅಭಿವೃದ್ಧಿಗಾಗಿ ಶಾಸಕರಿಗೆ ಮನವಿ ಆರೋಗ್ಯ ರಕ್ಷಾ ಸಮಿತಿಯ ಮಾಜಿ ಸದಸ್ಯರಾದ ಎಂ.ಶಾಂತರಾಜ್, ಮಂಜಾನಾಯ್ಕ, ರಾಜಣ್ಣ, ರೂಪಾ ಕಾಟ್ವೆ, ಮಂಜುನಾಥ ಅವರು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಆಸ್ಪತ್ರೆ ಆವರಣದಲ್ಲಿ ಕಾರು, ಬೈಕ್ ನಿಲುಗಡೆಗೆ ಶೆಡ್, ಉದ್ಯಾನವನ, ಹೈಮಾಸ್ಟ್ ಲೈಟ್, ತುರ್ತು ಚಿಕಿತ್ಸಾ ಘಟಕದಲ್ಲಿ ನೆಲಕ್ಕೆ ಟೈಲ್ಸ್ ಅಳವಡಿಸಲು, ಆಸ್ಪತ್ರೆಯ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ದ್ವಾರಬಾಗಿಲು ಹಾಗೂ ಆಸ್ಪತ್ರೆಯ ಸುತ್ತಲು ಕಾಂಪೌಂಡ್ ನಿರ್ಮಾಣಕ್ಕಾಗಿ ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು.
-07HRR.04:
ಹರಿಹರದ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಸಭಾ ಭವನದಲ್ಲಿ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.