ಬಳ್ಳಾರಿ: ಮಕ್ಕಳಿಗೆ ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳನ್ನು ತಡೆಯಲು ತಪ್ಪದೆ ಲಸಿಕೆಗಳನ್ನು ಹಾಕಿಸಬೇಕು ಎಂದು ನಗರದ ಗುಗ್ಗರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೇಗುಫ್ತಾ ಷಾಹೀನ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗುಗ್ಗರಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಅಲೆಮಾರಿ ಜನತೆ ಹೆಚ್ಚಿರುವ ಪದ್ಮಾವತೆಮ್ಮ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.ದಡಾರ-ರೂಬೆಲ್ಲಾ ಒಳಗೊಂಡಂತೆ 12 ಮಾರಕ ರೋಗಗಳ ವಿರುದ್ದ ತಪ್ಪದೇ ಲಸಿಕೆಗಳನ್ನು ಹಾಕಿಸಲು ಪಾಲಕರು ಕೈಜೊಡಿಸಬೇಕು. ದಡಾರ ಸಾಂಕ್ರಾಮಿಕ ಮತ್ತು ಮರಣಾಂತಿಕ ಕಾಯಿಲೆಯೂ ಆಗಿದ್ದು, ಮಕ್ಕಳಲ್ಲಿ ಅಂಗವಿಕಲತೆ ಅಥವಾ ಸಾವನ್ನು ಸಹ ತರಬಹುದು. ಇದು ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರ ಮಗುವನ್ನು ನ್ಯುಮೋನಿಯಾ, ಅತಿಸಾರ, ಮೆದುಳಿನ ಸೋಂಕಿನ ಪ್ರಾಣಾಂತಿಕ ಕಾಯಿಲೆಗಳಿಗೆ ಪಾರಾಗಲು ಸಹಾಯ ಮಾಡುತ್ತದೆ.
ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ಇವು ದಡಾರದ ಮುಖ್ಯ ಲಕ್ಷಣಗಳಾಗಿವೆ ಎಂದು ತಿಳಿಸಿದರು.ಯಾವುದೇ ಮುಂಜಾಗ್ರತೆ ವಹಿಸದ ತಾಯಂದಿರಲ್ಲಿ ಕಂಡುಬರುವ ರೂಬೆಲ್ಲಾ ವೈರಸ್, ಮಗುವಿಗೆ ಗ್ಲುಕೋಮಾ, ಕಿವುಡುತನ, ಕಣ್ಣಿನಪೊರೆ, ಮೆದುಳು (ಮಾನಸಿಕ ಅಸ್ವಸ್ಥತೆ ಅಥವಾ ಬುದ್ಧಿಮಾಂಧ್ಯತೆ) ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಈಡು ಮಾಡಬಹುದು ಮತ್ತು ಗರ್ಭಪಾತ ಅಥವಾ ನಿರ್ಜೀವ ಜನನಕ್ಕೆ ಕಾರಣವಾಗಬಹುದು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ ಮಾತನಾಡಿ, ಮುಂಗಾರು ಮಳೆಯ ಆರಂಭಿಕ ಹಂತವಾಗಿರುವುದರಿಂದ ಅಲ್ಲಲ್ಲಿ ನೀರು ನಿಂತುಕೊಳ್ಳುವುದು ತಪ್ಪಿಸಬೇಕು, ಸೊಳ್ಳೆಗಳ ಉತ್ಪತ್ತಿಯಿಂದ ಡೆಂಘೆ ಜ್ವರ ಬರುವ ಸಾಧ್ಯತೆಯಿದ್ದು, ಮನೆ ಸುತ್ತಲೂ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು.ಆರೋಗ್ಯ ಇಲಾಖೆಯ ಐಇಸಿ ವಿಭಾಗದ ಸಂಯೋಗದೊಂದಿಗೆ ಶಿಬಿರದಲ್ಲಿ 100 ಹೆಚ್ಚು ಜನರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ, ಗರ್ಭಿಣಿಯರ ತಪಾಸಣೆ ಹಾಗೂ ಮಕ್ಕಳಿಗೆ ಲಸಿಕೆ ಹಾಕಲಾಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ ಉಪ್ಪಾರ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಯಶೋಧಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ವಿ.ಉಮಾ ಮಹೇಶ್ವರಿ, ಅರುಣಾ, ಎನ್.ಉಮಾ ಮಹೇಶ್ವರಿ, ಔಷಧೀಯ ಅಧಿಕಾರಿ ಪ್ರಿಯಾಂಕಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಿರಂಜನ್, ಈರಯ್ಯ, ಯರಿಸ್ವಾಮಿ, ದೇವರಾಜ್, ಪಂಪಾಪತಿ, ಪ್ರಕಾಶಬಾಬು, ಸ್ಥಳೀಯರಾದ ಚಾಂದಪಾಶಾ, ಮಾರೆಪ್ಪ, ಸೂರ್ಯ ನಾರಾಯಣ್ ಸೇರಿದಂತೆ ತಾಯಂದಿರು, ಸಾರ್ವಜನಿಕರು ಉಪಸ್ಥಿತರಿದ್ದರು.