ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವು, ಓರ್ವನಿಗೆ ಗಾಯ

KannadaprabhaNewsNetwork | Published : May 19, 2024 1:49 AM

ಸಾರಾಂಶ

ಮೊದಲು ಬಿದ್ದವನನ್ನು ಅಲ್ಲಿದ್ದ ಜನರು ಎಳೆದಿದ್ದರಿಂದ ಆ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನಿಬ್ಬರನ್ನು ರಕ್ಷಿಸಬೇಕೆನ್ನುವಷ್ಟರಲ್ಲಿಯೇ ಒಬ್ಬನ ಬೆನ್ನಿನ ಮೇಲೆ ಮತ್ತೊರ್ವನ ತಲೆಯ ಮೇಲೆ ರಥದ ಗಾಲಿ ಹರಿದಿದೆ

ರೋಣ: ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ವೀರಭದ್ರೇಶ್ವರ ರಥೋತ್ಸವದ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಮೃತರಾಗಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಡ ಘಟನೆ ಶನಿವಾರ ಸಂಜೆ ನಡೆದಿದ್ದು, ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಮಹಾರಥೋತ್ಸವ ನಡೆಯಿತು. ದೇವಸ್ಥಾನದಿಂದ ಪಾದಗಟ್ಟೆವರೆಗೆ ಯಾವುದೇ ಅಡತಡೆಯಿಲ್ಲದೇ ರಥ ಎಳೆಯಲಾಯಿತು. ಬಳಿಕ ವಾಪಸ್ ಮೂಲ‌ಸ್ಥಳಕ್ಕೆ ರಥ ಬರುವ ವೇಳೆ ಈ ಘಟನೆ ಸಂಭವಿಸಿದೆ. ಮೃತರಲ್ಲಿ ಓರ್ವ ರೋಣ ಪಟ್ಟಣದ ನಿವಾಸಿ ಮಲ್ಲಪ್ಪ ಲಿಂಗನಗೌಡ್ರ ( 55) ಎಂದು ಗುರುತಿಸಲಾಗಿದೆ. ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ. ಮುಖದ ಮೇಲೆ ರಥದ ಗಾಲಿ ಹರಿದಿರುವುದರಿಂದ ಮುಖ ನುಜ್ಜುಗುಜ್ಜಾಗಿ ವ್ಯಕ್ತಿಯ ಗುರುತು ಪತ್ತೆ ಸಿಗದಂತಾಗಿದೆ.

ಈ ಘಟನೆಯಿಂದಾಗಿ ಶ್ರದ್ಧಾ-ಭಕ್ತಿ, ಸಂಭ್ರಮ, ಸಡಗರದಿಂದ ನಡೆಯುತ್ತಿದ್ದ ಜಾತ್ರೆ ಶೋಕ ಸಾಗರದಲ್ಲಿ ಕೊನೆಗೊಂಡಿದೆ.

ಘಟನೆ ವಿವರ: ರಥ ಪಾದಗಟ್ಟೆ ತಲುಪಿ ವಾಪಸ್ ಮೂಲ‌ಸ್ಥಳಕ್ಕೆ ತೆರಳಲು ರಥ ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿದೆ. ರಥಕ್ಕೆ ಎಸೆಯುವ ಬಾಳೆ ಹಣ್ಣು ಹಾಗೂ ಉತ್ತತ್ತಿ ಆಯ್ದುಕೊಳ್ಳುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಮೊದಲು ಓರ್ವ ನೆಲಕ್ಕೆ ಬಿದ್ದಿದ್ದು, ಆ ಬಳಿಕ ಮತ್ತಿಬ್ಬರು ಬಿದ್ದಿದ್ದಾರೆ. ಮೊದಲು ಬಿದ್ದವನನ್ನು ಅಲ್ಲಿದ್ದ ಜನರು ಎಳೆದಿದ್ದರಿಂದ ಆ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನಿಬ್ಬರನ್ನು ರಕ್ಷಿಸಬೇಕೆನ್ನುವಷ್ಟರಲ್ಲಿಯೇ ಒಬ್ಬನ ಬೆನ್ನಿನ ಮೇಲೆ ಮತ್ತೊರ್ವನ ತಲೆಯ ಮೇಲೆ ರಥದ ಗಾಲಿ ಹರಿದಿದೆ. ರಥದ ಬಲಭಾಗದ ಗಾಲಿಗೆ ಇಬ್ಬರು ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದೇ ಮೊದಲು: ವೀರಭದ್ರೇಶ್ವರನ ಜಾತ್ರೆಗೆ ರೋಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಲಕ್ಷಾಂತರ ಭಕ್ತ ಸಾಗರವೇ ಸೇರುತ್ತದೆ. ಇಂತಹ ದುರ್ಘಟನೆ ನಡೆದಿದ್ದು ಇತಿಹಾಸದಲ್ಲಿ ಇದೇ ಮೊದಲು. ಈ ಘಟನೆಯಿಂದ ನೆರದ ಭಕ್ತರು ದಿಗ್ಭ್ರಮೆಗೊಂಡಿದ್ದಾರೆ.

ಈ ದುರ್ಘಟನೆ ಸಂಭವಿಸುತ್ತಿದಂತೆ ಅಲ್ಲಿದ್ದ ಜನರನ್ನು ಚದುರಿಸಲು ಪೊಲೀಸರು ಕೆಲಕಾಲ ಹರಸಾಹಸ ಪಡಬೇಕಾಯಿತು. ಬಳಿಕ ಆ್ಯಂಬುಲೆನ್ಸ್‌ ಮೂಲಕ ಪಟ್ಟಣದಲ್ಲಿನ ಶವಾಗಾರಕ್ಕೆ ಮೃತ ದೇಹಗಳನ್ನು ಕಳುಹಿಸಲಾಯಿತು.

ಇನ್ನೋರ್ವನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ವ್ಯಕ್ತಿಯ ಬಲ ಕೈಯಲ್ಲಿ ಕರಿದಾರ ಮತ್ತು ಬೆಳ್ಳಿ ಕಡಗ ಧರಿಸಿದ್ದಾನೆ. ಆರ್.ಕೆ.ಪಿ. ಡಬ್ಲೂ, ಎಂ.ಎಂ.ಬಿ ಮತ್ತು ಜಿ ಲವ್ ವಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ. ಇದನ್ನು ಹೊರತುಪಡಿಸಿ ಮೃತನ ಬಳಿ ಮೊಬೈಲ್, ಯಾವುದಾದರೂ ಗುರುತಿನ ಚೀಟಿ ಪತ್ತೆಯಾಗಿಲ್ಲ. ಇದರಿಂದ ಮೃತರ ಗುರುತು ಪತ್ತೆ ಪೊಲೀಸರಿಗೆ ಕಷ್ಟಕರವಾಗಿದೆ.

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article