ಕನ್ನಡಪ್ರಭ ವಾರ್ತೆ ಹರಿಹರ
ಅನಾರೋಗ್ಯ ಉಂಟಾದಾಗ ಆಸ್ಪತ್ರೆ ಅಲೆಯುವ ಪರಿಸ್ಥಿತಿ ಇತ್ತು. ಆದರೆ ಇಂದು ವಿವಿಧ ಸಂಘ ಸಂಸ್ಥೆಗಳ ಸಹಕಾರ ಹಾಗೂ ಆಸ್ಪತ್ರೆಗಳ ವೈಧ್ಯರು ತಾವೇ ಆಗಮಿಸಿ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಸಾಹಿತಿ ಯು.ಕೆ.ಅಣ್ಣಪ್ಪ ತಿಳಿಸಿದರು.ಕಾವೇರಿ ಆಸ್ಪತ್ರೆ ಬೆಂಗಳೂರು, ಶ್ರೀ ಸಿಮೆಂಟ್ ಕಂಪನಿ ಹುಬ್ಬಳ್ಳಿ, ಭಾನುವಳ್ಳಿ ಗ್ರಾಮ ಪಂಚಾಯತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘ, ರೇವಣಸಿದ್ದೇಶ್ವರ ಟ್ರೇಡರ್ಸ್, ಹಾಲು ಉತ್ಪಾದಕರ ಸಹಕಾರ ಸಂಘ ಭಾನುವಳ್ಳಿ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಗಟೇರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರ ದಾವಣಗೆರೆ ಜಂಟಿಯಾಗಿ ಮಂಗಳವಾರ ಭಾನುವಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಉಚಿತ ಹೃದ್ರೋಗ ಮತ್ತು ಮಂಡಿಚಿಪ್ಪು ಬದಲಾವಣೆ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಅನೇಕ ಗ್ರಾಮಗಳ ರೈತರು, ಕೂಲಿ ಕಾರ್ಮಿಕರು, ನಿರ್ಗತಿಕರು ಹಣ ಹಾಗೂ ಸಮಯದ ಅಭಾವದಿಂದ ನಗರ ಪ್ರದೇಶಗಳ ಆಸ್ಪತ್ರೆಗೆ ತೆರಳಿ ತಮ್ಮ ಅನಾರೊಗ್ಯ ಸರಿಪಡಿಸಿಕೊಳ್ಳಲು ಆಗುವುದಿಲ್ಲ. ಅವರ ಸಂಕಷ್ಟ ಅರಿತ ವಿವಿಧ ಸಂಘ ಸಂಸ್ಥೆಗಳು, ಆಸ್ಪತ್ರೆಗಳನ್ನೆ ಸ್ಥಳಕ್ಕೆ ಕರೆಸುವ ಕಾರ್ಯ ಮಾಡುತ್ತಿರುವುದು ಅನುಕರಣೀಯ ಎಂದರು.ಹುಬ್ಬಳ್ಳಿ ಶ್ರೀ ಸಿಮೆಂಟ್ ರಿಜನಲ್ ಹೆಡ್ ಬಸವರಾಜ ಬಾಗೇವಾಡಿ ಮಾತನಾಡಿ, ಇತ್ತೀಚೆಗೆ ಜನಸಾಮಾನ್ಯರು ಹಲವಾರು ಒತ್ತಡಗಳ ಮಧ್ಯದಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನಹರಿಸುತ್ತಿಲ್ಲ. ಹಾಗಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಎಂದರು.
ಕಾವೇರಿ ಆಸ್ಪತ್ರೆಯ ಕೀಲು ಮೂಳೆ ಅಪಘಾತ, ಮತ್ತು ರೋಬೋಟಿಕ್ ಮಂಡಿ ಬದಲಾವಣೆ ಶಸ್ತ್ರ ಚಿಕಿತ್ಸೆಯ ಹಿರಿಯ ಸಲಹೆಗಾರ ಡಾ. ಪಿ.ಸಿ ಜಗದೀಶ ಮಾತನಾಡಿ, ರಾಜ್ಯದ ನಗರ ಮತ್ತು ಗ್ರಾಮಾಂತರ ಪ್ರದೇಶದ ಅನೇಕ ಜನರನ್ನು ಮಂಡಿನೋವು ಸಮಸ್ಯೆ ಕಾಡುತ್ತಿದೆ ಎಂದರು.ಶಿಬಿರದಲ್ಲಿ 285 ಜನರ ವಿವಿಧ ರೋಗಗಳ ತಪಾಸಣೆ ನಡೆಸಲಾಯಿತು, ಸ್ವಯಂ ಪ್ರೇರಿತರಾಗಿ 15 ಜನರು ರಕ್ತದಾನ ಮಾಡಿದರು, 185 ಜನರು ಮೊಣಕಾಲು ನೋವುಳ್ಳವರು, ಕೀಲು ಬಿಗಿತ, ಊದಿಕೊಳ್ಳುವ ನೋವಿನಿಂದ ನರಳುವವರು ಚಿಕಿತ್ಸೆ ಪಡೆದರು. 85 ಜನರು ಇಸಿಜಿ, ಬಿ.ಪಿ, ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಿಕೊಂಡರು.
ತಾಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ, ಭಾನುವಳ್ಳಿ ಗ್ರಾ.ಪಂ ಅಧ್ಯಕ್ಷ ವೆಂಕಪ್ಪರೆಡ್ಡಿ, ಕಾವೇರಿ ಆಸ್ಪತ್ರೆಯ ಡಾ. ಹೆಚ್.ಎಂ ಮಧುಕರ, ಪ್ರಾ.ಆ.ಕೇದ್ರದ ಡಾ. ತಿಪ್ಪೆಸ್ವಾಮಿ, ಶ್ರೀ ಸಿಮೆಂಟ್‍ನ ರಾಜ್ಯ ಮುಖ್ಯಸ್ಥ ವೆಂಕಟರಾಮರೆಡ್ಡಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕಾಳಮ್ಮ, ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಎನ್.ಜೆ. ಹನುಮಂತಪ್ಪ, ಡಿ.ಧರ್ಮಪ್ಪ, ಎಚ್.ಪಿ. ಮಂಜುನಾಥ, ಉಮ್ಮಣ್ಣ, ನಾಗರಾಜ್, ಮಾಲತೇಶ, ವೀರಭದ್ರಪ್ಪ, ಆಶಾ ಹಾಗೂ ಇತರರು ಭಾಗವಹಿಸಿದ್ದರು.