ಮುಂಡರಗಿ: ಶ್ರಾವಣ ಶ್ರೇಷ್ಠ, ಆಷಾಢ ಕನಿಷ್ಠ ಎಂಬ ಜನರಲ್ಲಿನ ಮೂಢನಂಬಿಕೆ ಹೊಡೆದೋಡಿಸಲು ಹಿಂದಿನಿಂದಲೂ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದಲ್ಲಿ ಬಸವ ತತ್ವದಡಿಯಲ್ಲಿ ಪ್ರವಚನ ನಡೆಸುತ್ತಾ ಬಂದಿರುವುದು ವಿಶೇಷ, ಅದನ್ನು ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಹ ಮುಂದುವರಿಸಿದ್ದಾರೆ ಎಂದು ಗುಳೇದಗುಡ್ಡದ ನೇಕಾರ ಗುರುಪೀಠದ ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮೀಜಿ ಹೇಳಿದರು.
ಪ್ರವಚನಕಾರ ಬಸವೇಶ್ವರಿ ಮಾತಾಜಿ ಮಾತನಾಡಿ, ವರ್ತಮಾನದ ಬದುಕನ್ನು ರೂಪಿಸುವ ಮಾನವ ಸಮಾಜದ ಬಿಕ್ಕಟ್ಟಿನಲ್ಲಿ ಎಲ್ಲ ಸಮಾಜ ತನ್ನ ಎತ್ತರಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಯಾರಿಗೆ ಇರುತ್ತದೆಯೋ ಅವರು ಸಾಂಸ್ಕೃತಿಕ ನಾಯಕ ಆಗುತ್ತಾರೆ. ಆ ಎಲ್ಲ ಶಕ್ತಿ ಅಣ್ಣ ಬಸವಣ್ಣನವರಲ್ಲಿದ್ದವು. ನೆಲ ನೆಲದಲ್ಲಿನ ಅಜ್ಞಾನ ತಮ್ಮ ವಚನಗಳ ಮೂಲಕ ಹೊಡೆದೋಡಿಸಿದವರು ಬಸವಣ್ಣನವರು. ಹೀಗಾಗಿ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದರು.
ಇದೇ ಸಂದರ್ಭದಲ್ಲಿ ವಿಜಯ ರತ್ನ ಪ್ರಶಸ್ತಿ ಪಡೆದ ಆನಂದಗೌಡ ಪಾಟೀಲ ಅವರನ್ನು ಗೌರವಿಸಲಾಯಿತು.ಆನಂದಗೌಡ ಪಾಟೀಲರ ಸಾಮಾಜಿಕ ಕಾರ್ಯ ಕುರಿತು ಡಾ. ನಿಂಗು ಸೊಲಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಪ್ರಸ್ತುತ ವರ್ಷದ ಪ್ರವಚನ ಕಾರ್ಯಕ್ರಮ ವಿಶೇಷತೆಗಳಿಂದ ಕೂಡಿದ್ದು, ನೂತನ ಪಲ್ಲಕ್ಕಿ, ವಿಶ್ವಗುರು ಬಸವಣ್ಣ, ಎಡೆಯೂರು ಸಿದ್ದಲಿಂಗೇಶ್ವರ ಪಂಚಲೋಹದ ಮೂರ್ತಿಗಳ ಮೆರವಣಿಗೆ, ಮೂರು ದಿನ ವಿಶೇಷ ಕಾರ್ಯಕ್ರಮ ಜರುಗಿದ್ದು, ಈ ಎಲ್ಲ ಕಾರ್ಯಕ್ರಮ ಯಶಸ್ಸು ಶ್ರೀಮಠದ ಭಕ್ತರದ್ದಾಗಿದೆ ಎಂದರು.