ಪ್ರಕೃತಿ ಚಿಕಿತ್ಸೆ ವಿಧಾನದಿಂದ ಅಡ್ಡ ಪರಿಣಾಮವಿಲ್ಲದೇ ಆರೋಗ್ಯ: ಡಾ. ಶಶಿಭೂಷಣ ಹೆಗಡೆ

KannadaprabhaNewsNetwork |  
Published : Nov 20, 2024, 12:31 AM IST
ಸಿದ್ದಾಪುರದಲ್ಲಿ ಪ್ರಕೃತಿ ಚಿಕಿತ್ಸಾ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಡಾ. ಶಶಿಭೂಷಣ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಔಷಧ ರಹಿತವಾಗಿ ರೋಗಗಳನ್ನು ಹೇಗೆ ಗುಣಪಡಿಸಬಹುದೆಂಬ ಮಾರ್ಗವನ್ನು ಪ್ರಕೃತಿ ಚಿಕಿತ್ಸೆ ತಿಳಿಸಿಕೊಡುತ್ತದೆ.

ಸಿದ್ದಾಪುರ: ಪ್ರಕೃತಿ ಚಿಕಿತ್ಸೆಯ ಮೂಲಕ ಯಾವುದೇ ಬದಲಿ ಪರಿಣಾಮವಿಲ್ಲದೆ ಆರೋಗ್ಯ ಪಡೆಯಲು ಸಾಧ್ಯ. ನಮ್ಮ ಪೂರ್ವಜರು ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ನ. ೧೮ಅನ್ನು ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನಾಗಿ ಘೋಷಿಸಲಾಗಿದ್ದು, ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದು ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ತಿಳಿಸಿದರು.

ಸಿದ್ದಾಪುರ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಸಿದ್ಧಿವಿನಾಯಕ ಕಾಂಪ್ಲೆಕ್ಸ್‌ನಲ್ಲಿ ಸಂಘಟಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪ್ರಪ್ರಥಮ ಬಾರಿಗೆ ಏರ್ಪಡಿಸಿರುವ ಈ ಶಿಬಿರದ ಪ್ರಯೋಜನವನ್ನು ತಾಲೂಕಿನ ಜನತೆ ಪಡೆದುಕೊಂಡು ಚಿಕಿತ್ಸೆಯನ್ನು ಮುಂದುವರಿಸಿ ರೋಗದಿಂದ ಗುಣಮುಖರಾಗಬೇಕು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ವಾಣಿ ಜೀರಗಲ್ ಮಾತನಾಡಿ, ಔಷಧ ರಹಿತವಾಗಿ ರೋಗಗಳನ್ನು ಹೇಗೆ ಗುಣಪಡಿಸಬಹುದೆಂಬ ಮಾರ್ಗವನ್ನು ಪ್ರಕೃತಿ ಚಿಕಿತ್ಸೆ ತಿಳಿಸಿಕೊಡುತ್ತದೆ. ಋಗ್ವೇದ, ಸಾಮವೇದ, ಅಥರ್ವವೇದ ಸೇರಿದಂತೆ ಉಪನಿಷತ್ತುಗಳಿಂದ ಪ್ರಕೃತಿ ಚಿಕಿತ್ಸೆಯ ಮಾಹಿತಿ ಪಡೆಯಲಾಗಿದೆ. ಇಂದು ಪ್ರಪಂಚದ ೯೮ ರಾಷ್ಟ್ರಗಳಲ್ಲಿ ಪ್ರಕೃತಿ ಚಿಕಿತ್ಸೆ ಗುರುತಿಸಿಕೊಂಡು ಆಚರಣೆಯಲ್ಲಿದೆ. ದೇಹದ ಮಸಾಜ್, ಅಕ್ಯುಪಂಕ್ಚರ್ ಸಹ ಪ್ರಕೃತಿ ಚಿಕಿತ್ಸೆಯ ಒಂದು ಭಾಗವೇ ಆಗಿದೆ ಎಂದರು. ಡಾ. ಅಶ್ವಥ್ ಹೆಗಡೆ ಮಾತನಾಡಿ ಮಧುಮೇಹ, ಅಧಿಕ ರಕ್ತದೊತ್ತಡ, ಜೀವನಶೈಲಿ ಸಂಬಂಧಿತ ಕಾಯಿಲೆಗಳಿಗೆ ಪ್ರಕೃತಿ ಚಿಕಿತ್ಸೆ ರಾಮಬಾಣವಾಗಿದೆ. ಸ್ವಸ್ಥ ಜೀವನವನ್ನು ನಡೆಸಿಕೊಂಡು ಹೋಗಲು ಪ್ರಕೃತಿ ಚಿಕಿತ್ಸೆ ಹಾಗೂ ಯೋಗವನ್ನು ಅಳವಡಿಸಿಕೊಳ್ಳಿ ಎಂದರು. ಡಾ. ಶ್ರೀದೇವಿ ಭಟ್ಟ ಮಾತನಾಡಿ, ಪ್ರಕೃತಿ ಚಿಕಿತ್ಸೆಯಲ್ಲಿ ಆಹಾರ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಜಲಚಿಕಿತ್ಸೆ, ಕಲರ್ ಚಿಕಿತ್ಸೆ, ಮೆಗ್ನೆಟ್ ಚಿಕಿತ್ಸೆ ಸೇರಿದಂತೆ ಹಲವು ರೀತಿಯ ಚಿಕಿತ್ಸೆಗಳನ್ನು ಹಾಗೂ ಪಂಚಮಹಾಭೂತಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಯಾವ ರೋಗಕ್ಕೆ ಯಾವ ಯೋಗವೆಂಬ ಮಾಹಿತಿಯನ್ನೂ ನೀಡಲಾಗುತ್ತದೆ ಎಂದರು.

ಮಹಾವಿದ್ಯಾಲಯದ ವೈದ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತಾಲೂಕಿನ ನಾನಾ ಭಾಗಗಳ ಜನತೆ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡು ಮಾರ್ಗದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ