ರಾಣಿಬೆನ್ನೂರು: ಯುಕ್ತ ಆಹಾರ ಸೇವನೆ ಹಾಗೂ ಯೋಗ ಪಾಲನೆಯಿಂದ ಆರೋಗ್ಯಕರ ಜೀವನ ಹೊಂದಲು ಸಾಧ್ಯ ಎಂದು ಸ್ಥಳೀಯ ರಾಮಕೃಷ್ಣ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ನುಡಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜರಾಜೇಶ್ವರಿ ಮಹಿಳಾ ಕಾಲೇಜಿನ ಆವರಣದಲ್ಲಿ ಶುಕ್ರವಾರ ಪತಂಜಲಿ ಯೋಗ ಪೀಠ ಹಾಗೂ ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಬಲೀಬರಣಕ್ಕಾಗಿ ಯೋಗ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಯೋಗದಲ್ಲಿ ಬದುಕಿದ ಭಾರತ ಇಂದು ಮಧುಮೇಹ ರೋಗಿಗಳಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವುದು ವಿಷಾದಕರ ಸಂಗತಿಯಾಗಿದೆ. ಮಕ್ಕಳು ಬಾಲ್ಯದಿಂದಲೇ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. ಪ್ರತಿ ದಿನ 5 ನಿಮಿಷ ಪ್ರಾಣಾಯಾಮ, 10 ನಿಮಿಷ ಸೂರ್ಯ ನಮಸ್ಕಾರ ಸೇರಿ ಕನಿಷ್ಠ 15 ನಿಮಿಷ ಯೋಗ ಸಾಧನೆ ಮಾಡಬೇಕು. ಇದರಿಂದ ಆತ್ಮವಿಶ್ವಾಸ ವೃದ್ಧಿಯಾಗಿ ಏಕಾಗ್ರತೆ ಹೊಂದಲು ಸಾಧ್ಯವಾಗುತ್ತದೆ ಎಂದರು. ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮಾಲತಿ ಅಕ್ಕ ಮಾತನಾಡಿ, ಯೋಗ ಬದುಕುವ ಕಲೆ. ಅದು ಆತ್ಮದೊಂದಿಗೆ ಸಮ್ಮಿಲಿತವಾಗಿದೆ. ಮನಸ್ಸಿನ ವಿಚಾರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧ್ಯಾನ, ಯೋಗದಿಂದ ದೇಹ ಸದೃಢಗೊಳ್ಳುತ್ತದೆ ಎಂದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ ಮಾತನಾಡಿ, ಯೋಗದ ಉಗಮ ಸ್ಥಳ ಭಾರತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಪಂಚದಲ್ಲಿ ಯೋಗ ಆಚರಿಸುವಂತಾಯಿತು. ಯೋಗದಿಂದ ರೋಗಮುಕ್ತ ಜೀವನ ಸಾಗಿಸಬಹುದು ಎಂದರು. ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ, ಬಿಇಒ ಎಂ.ಎಚ್. ಪಾಟೀಲ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಹನುಮಂತಪ್ಪ ಬಿ.ಕೆ., ಕೆಎಲ್‌ಇ ಸ್ಥಳೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವ್ಹಿ.ಪಿ. ಲಿಂಗನಗೌಡ್ರ, ಜಿಲ್ಲಾ ಪತಂಜಲಿ ಮಹಿಳಾ ಘಟಕದ ಖಜಾಂಚಿ ಲಲಿತಾ ಮೇಲಗಿರಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ರವೀಂದ್ರ ಬಿಜಾಪುರ ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕ ಆರ್.ಬಿ. ಪಾಟೀಲ, ರಾಮಸಿಂಗ್ ರಾಠೋಡ, ಕವಿತಾ ಕುಬಸದ, ಮಲ್ಲಿಕಾರ್ಜುನ ಮೋಟಳ್ಳಿ, ಮಹೇಶ್ವರಿ ಕುಬಸದ, ಸರೋಜಾ ಸುಣಗಾರ, ಕೆ.ಸಿ. ಕೋಮಲಾಚಾರ, ಪಾರ್ವತಿ ಹೂಲಿಹಳ್ಳಿ, ಶಶಿಕಲಾ, ಎಚ್.ಸಿ. ಪಾಟೀಲ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.