ರಾಷ್ಟ್ರೀಯ ಆಯುಷ್ ಅಭಿಯಾನದಡಿ ಹಮ್ಮಿಕೊಂಡಿದ್ದ ಎಂಎಸ್‌ಡಿ ವಯೋಮಿತ್ರ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೈಜ್ಞಾನಿಕ ವೈದ್ಯಕೀಯ ಪದ್ಧತಿಯಾಗಿದ್ದು, ರೋಗದ ಲಕ್ಷಣಗಳನ್ನು ಮಾತ್ರವಲ್ಲದೆ ಅದರ ಮೂಲ ಕಾರಣವನ್ನು ಪತ್ತೆಹಚ್ಚಿ ಚಿಕಿತ್ಸೆಯನ್ನು ನೀಡುವ ವಿಶೇಷತೆಯನ್ನು ಹೊಂದಿದೆ. ಪಂಚಕರ್ಮ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತವೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಆಯುರ್ವೇದ ಪದ್ಧತಿಯ ಪಾತ್ರ ಮಹತ್ವದ್ದಾಗಿದ್ದು, ರೋಗ ಕಾಣಿಸಿಕೊಂಡ ಬಳಿಕ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದು ಆಯುರ್ವೇದದ ಪ್ರಮುಖ ಉದ್ದೇಶವಾಗಿದೆ ಎಂದು ಜೆಸಿ ಸರ್ಕಾರಿ ಆಸ್ಪತ್ರೆಯ ಆಡಳಿತ ತಜ್ಞ ವೈದ್ಯಾಧಿಕಾರಿ ಡಾ. ಜ್ಞಾನೇಶ್ ನಾಯಕ್ ಹೇಳಿದರು.ನಗರದ ಜೆಸಿ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 2026–27ನೇ ಸಾಲಿನ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಹಮ್ಮಿಕೊಂಡಿದ್ದ ಎಂಎಸ್‌ಡಿ ವಯೋಮಿತ್ರ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೈಜ್ಞಾನಿಕ ವೈದ್ಯಕೀಯ ಪದ್ಧತಿಯಾಗಿದ್ದು, ರೋಗದ ಲಕ್ಷಣಗಳನ್ನು ಮಾತ್ರವಲ್ಲದೆ ಅದರ ಮೂಲ ಕಾರಣವನ್ನು ಪತ್ತೆಹಚ್ಚಿ ಚಿಕಿತ್ಸೆಯನ್ನು ನೀಡುವ ವಿಶೇಷತೆಯನ್ನು ಹೊಂದಿದೆ. ಪಂಚಕರ್ಮ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತವೆ ಎಂದು ತಿಳಿಸಿದರು.
ಇಂದಿನ ಜೀವನಶೈಲಿಯಿಂದ ಮಧುಮೇಹ, ರಕ್ತದೊತ್ತಡ, ಸಂಧಿವಾತ ಸೇರಿದಂತೆ ಅನೇಕ ದೀರ್ಘಕಾಲೀನ ಕಾಯಿಲೆಗಳು ಹೆಚ್ಚುತ್ತಿವೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಯೋಗಾಭ್ಯಾಸ ಹಾಗೂ ಆಯುರ್ವೇದದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಇಂತಹ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದು ಸಲಹೆ ನೀಡಿದರು. ಪ್ರತಿ ತಿಂಗಳ ಮೂರನೇ ಶನಿವಾರ ಆಯೋಜಿಸಲಾಗುವ ವಯೋಮಿತ್ರ ಆರೋಗ್ಯ ಶಿಬಿರದಲ್ಲಿ ಹಿರಿಯ ನಾಗರಿಕರಿಗೆ ಕೀಲುನೋವು, ಸೊಂಟನೋವು, ಉರಿಯೂತ, ಮಧುಮೇಹ, ರಕ್ತದೊತ್ತಡ, ಮಲಬದ್ಧತೆ, ನಿದ್ರಾಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ, ಸಮಾಲೋಚನೆ ಹಾಗೂ ಔಷಧೋಪಚಾರ ನೀಡಲಾಗುತ್ತಿದೆ ಎಂದು ಹೇಳಿದರು.ಶಿಬಿರದಲ್ಲಿ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಿ, ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಒದಗಿಸಲಾಯಿತು. ಯೋಗ ತರಬೇತುದಾರ ನಾಗರಾಜ್ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡುವ ಮೂಲಕ ಯೋಗಾಭ್ಯಾಸದ ಮಹತ್ವದ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಪ್ರತಾಪ್, ಡಾ. ಸೌಮ್ಯ, ಡಾ. ಮಲ್ಲಿಕಾರ್ಜುನ್, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.