ಉನ್ನತ ಶಿಕ್ಷಣದಿಂದ ಸಮಾಜದ ಸ್ವಾಸ್ಥ್ಯ ಉಳಿವು: ನಿಸಾರ್ ಅಹಮದ್

KannadaprabhaNewsNetwork |  
Published : Nov 04, 2024, 12:19 AM IST
ಚಿತ್ರ : 3ಎಂಡಿಕೆ6 : ಯು. ನಿಸಾರ್ ಅಹಮದ್  ಮಾತನಾಡುತ್ತಿರುವುದು | Kannada Prabha

ಸಾರಾಂಶ

ಉನ್ನತ ಶಿಕ್ಷಣದಿಂದ ಸಾಮಾಜಿಕ ಸ್ಥಾನಮಾನ, ಸ್ವಾಭಿಮಾನದ ಬದುಕು ಗಳಿಸಲು ಸಾಧ್ಯ ಎಂದು ಯು. ನಿಸಾರ್‌ ಅಹಮ್ಮದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಉನ್ನತ ಶಿಕ್ಷಣದಿಂದ ಸಾಮಾಜಿಕ ಸ್ಥಾನಮಾನ, ಸ್ವಾಭಿಮಾನದ ಬದುಕು ಗಳಿಸಲು ಸಾಧ್ಯ. ಜೊತೆಗೆ ಆರೋಗ್ಯಕರ ಮತ್ತು ಸಂಸ್ಕಾರಕ್ಕೆ ಸಮನಾಗಿರುವ ಉನ್ನತ ಶಿಕ್ಷಣದಿಂದ ಸಮಾಜದ ಸ್ವಾಸ್ಥ್ಯವೂ ಕಾಪಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರೂ ಆಗಿರುವ ನಿವೃತ್ತ ಐ.ಪಿ.ಎಸ್. ಅಧಿಕಾರಿ ಯು. ನಿಸಾರ್ ಅಹಮದ್ ಹೇಳಿದ್ದಾರೆ.

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಆಶ್ರಯದಲ್ಲಿ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2024 ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಸೇರ ಬಯಸುವ ವಿದ್ಯಾರ್ಥಿ ದರ ಶೇ. 30 ಕ್ಕಿಂತ ಕಡಿಮೆಯಿದೆ. ಕೌಶಲ್ಯಾಧಾರಿತ ಪ್ರಮಾಣೀಕೃತ ಕಲಿಕೆಗಳು ಉದ್ಯೋಗ ದೊರೆಯುವಲ್ಲಿ ಸಾಕಷ್ಟು ದೊಡ್ಡ ಪಾತ್ರವಹಿಸುತ್ತವೆ. ಆದ್ದರಿಂದ ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗುವುದು ಎಲ್ಲಕಿಂತ ಮೊದಲು ವಿದ್ಯಾರ್ಥಿಗಳ ಆದ್ಯತೆಯಾಗಬೇಕು ಎಂದು ಕರೆ ನೀಡಿದರು.

ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷರಾದ ಚಪ್ಪಂಡ ಹರೀಶ್ ಉತ್ತಯ್ಯ ಮಾತನಾಡಿ, ಸಭೆ ಸಮಾರಂಭಗಳಲ್ಲಿ ಜನರನ್ನು ಆಕರ್ಷಿಸಲು ಸಿನಿಮಾ ತಾರೆಗಳಿಗೆ ಆದ್ಯತೆ ನೀಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ದೇಶಭಕ್ತಿ, ತ್ಯಾಗ ಮತ್ತು ಬದ್ಧತೆಯಿಂದ ರಾಷ್ಟ್ರಸೇವೆಗೈದ ಯೋಧರನ್ನು ಪರಿಗಣಿಸಿ ಅವರಿಗೆ ಗೌರವ ನೀಡಿದರೆ ಅದು ಇಡೀ ದೇಶದ ಯೋಧರಿಗೆ ನೀಡಿದ ಗೌರವವಾಗುತ್ತದೆ ಎಂದರು.

ಸಂಸ್ಥೆಯ ಸ್ಥಾಪಕಾಧ್ಯಕ್ಷ , ಕಿತ್ತಳೆನಾಡು ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕ ಕುವೇಂಡ ವೈ. ಹಂಝತುಲ್ಲಾ ಅವರು ಸಾಂಪ್ರದಾಯಿಕ ದಫ್ ಬಾರಿಸುವ ಮೂಲಕ ಉದ್ಘಾಟಿಸಿದರು.

ನಿವೃತ್ತ ಎಡಿಜಿಪಿ ಜಿ.ಎಂ. ಹಯಾತ್ ಮಾತನಾಡಿದರು. ವೇದಿಕೆಯಲ್ಲಿ ಕೆ.ಎಂ. ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ ಮತ್ತಿತರರಿದ್ದರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಳುಮಂಡ ಮೊಹಮ್ಮದ್ ಸಿನಾನ್ ಖಿರಾಹತ್ ಪಠಿಸಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಈತಲತಂಡ ರಫೀಕ್ ತೂಚಮಕೇರಿ, ದುದ್ದಿಯಂಡ ಮುಸ್ಕಾನ್ ಸೂಫಿ, ಕರತೊರೆರ ಶರ್ಪುದ್ದೀನ್ ಮತ್ತು ಅಕ್ಕಳತಂಡ ಫಿದಾ ಸಾನಿಯ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕರಾದ ಪೊಯಕೆರ ಎಸ್. ರಫೀಕ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು