ಶಿವಾನಂದ ಗೊಂಬಿ
ಹುಬ್ಬಳ್ಳಿ: ಹಾಸನ ಸೇರಿದಂತೆ ವಿವಿಧೆಡೆ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹುಬ್ಬಳ್ಳಿ ಕೆಎಂಸಿಆರ್‌ಐ ಸೇರಿದಂತೆ ಖಾಸಗಿ ಆಸ್ಪತ್ರೆಗಳತ್ತ ಜನ ಹೆಜ್ಜೆ ಹಾಕುತ್ತಿದ್ದಾರೆ. ಈ ನಡುವೆ 2 ದಿನದಲ್ಲಿ ಮೂವರು ಯುವಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.ಹಾಸನ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಸರಣಿ ಹೃದಯಾಘಾತದ ಸಾವುಗಳಿಂದ ಹುಬ್ಬಳ್ಳಿ- ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕದಲ್ಲಿ ಜನರಲ್ಲಿ ಹೆದರಿಕೆ ಶುರುವಾಗಿದೆ. ಹೀಗಾಗಿ ಈ ಭಾಗದ ಸಂಜೀವಿನಿ ಎನಿಸಿರುವ ಕೆಎಂಸಿಆರ್‌ಐಗೆ ಹೊರರೋಗಿಗಳ ವಿಭಾಗಕ್ಕೆ ಜನತೆ ದಾಂಗುಡಿ ಇಡುತ್ತಿದ್ದಾರೆ. ಬರೀ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲ. ಅತ್ಯಾಧುನಿಕ ಯಂತ್ರೋಪಕರಣಗಳಿರುತ್ತವೆ. ಇಲ್ಲೇ ಚಿಕಿತ್ಸೆ ಉತ್ತಮವಾಗಿರುತ್ತದೆ ಎಂದು ಹಾವೇರಿ, ಗದಗ, ಶಿರಸಿ ಭಾಗಗಳಿಂದ ಕೆಎಂಸಿಆರ್‌ಐಗೆ ಬರುತ್ತಿದ್ದಾರೆ.
ಪ್ರತಿನಿತ್ಯ 60- 70 ಜನರು ಹೊರರೋಗಿಗಳು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಇದೀಗ 100ರ ಗಡಿ ದಾಟುತ್ತಿದೆ. ಅದರಲ್ಲೂ ಕಳೆದ 10-15 ದಿನಗಳಲ್ಲಿ ಇದರ ಪ್ರಮಾಣ ಜಾಸ್ತಿಯಾಗುತ್ತಿದೆ. ಇನ್ನು ಇಕೋ, ಇಸಿಜಿ ಪ್ರಮಾಣವೂ ಹೆಚ್ಚಾಗುತ್ತಿದೆ. ಮೊದಲೆಲ್ಲ 150 ಇಕೋ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ, ಇದೀಗ 200-250 ಇಕೋ ಟೆಸ್ಟ್ ಮಾಡಲಾಗುತ್ತಿದೆ ಎಂದು ಕೆಎಂಸಿಆರ್‌ಐನ ಮೂಲಗಳು ತಿಳಿಸುತ್ತವೆ.ಇದು ಕೆಎಂಸಿಆರ್‌ಐನಲ್ಲಿನ ಅಂಕಿ ಅಂಶಗಳಾದರೆ, ಇದನ್ನು ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳತ್ತ ಕೂಡ ಭಯಗೊಂಡು ಎದೆನೋವು ಆಗುತ್ತಿದೆ. ಚೆಕ್ ಮಾಡಿ ಎಂದು ದಾಂಗುಡಿ ಇಡುತ್ತಿದ್ದಾರೆ. ಬಿಪಿ ಶುಗರ್ ಅಷ್ಟೇ ಚೆಕ್ ಮಾಡಿದರೆ ನಡೆಯಲ್ಲ. ಇಸಿಜಿ, ಇಕೋ ಟೆಸ್ಟ್ ಕೂಡ ಮಾಡಿ ಎಂದು ತಾವೇ ಹೇಳಿ ಮಾಡಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸುತ್ತಾರೆ. ಇದು ಕೂಡ ಒಳ್ಳೆಯದೇ. ಒಂದು ಸಲ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಆದರೆ, ಭಯ ಪಡಬಾರದು ಎಂದು ವೈದ್ಯರು ಸಲಹೆ ಮಾಡುತ್ತಾರೆ.
ಜೀವನ ಶೈಲಿ ಬದಲಿಸಿಕೊಳ್ಳಿ: ಒತ್ತಡದ ಬದುಕು, ಚಟುವಟಿಕೆ, ವ್ಯಾಯಾಮ ಮಾಡದೇ ಇರುವುದು. ಜಂಕ್‌ಫುಡ್, ಬದಲಾದ ಜೀವನ ಶೈಲಿಗಳಿಂದಾಗಿ ಹೃದಯಾಘಾತಗಳು ಸಂಭವಿಸುತ್ತಿವೆ. ಆದಕಾರಣ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ, ವಾಕಿಂಗ್, ಯೋಗಾಸನಗಳನ್ನು ಮಾಡಬೇಕು. ಧೂಮಪಾನ, ತಂಬಾಕು ಸೇವನೆ ಬಿಡಬೇಕು. ಅತಿಯಾದ ಮದ್ಯಸೇವನೆಯೂ ಒಳ್ಳೆಯದಲ್ಲ ಎಂದು ವೈದ್ಯರು ಸಲಹೆ ಮಾಡುತ್ತಾರೆ.ಒಟ್ಟಿನಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣಗಳು ಜನರಲ್ಲಿ ಆತಂಕವನ್ನುಂಟು ಮಾಡಿದ್ದು, ಆಸ್ಪತ್ರೆಗಳತ್ತ ಜನತೆ ದೌಡಾಯಿಸುತ್ತಿರುವುದಂತೂ ಸತ್ಯ.
ಆರು ತಿಂಗಳು ವರದಿ: ಕೆಎಂಸಿಆರ್‌ಐನಲ್ಲಿ ಪ್ರತಿ ತಿಂಗಳು ಸರಾಸರಿ 10-12 ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ರಾಜ್ಯದಲ್ಲಿ ಹೃದಯಾಘಾತದ ಸಾವುಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ಹೃದ್ರೋಗ ವಿಭಾಗ ಲೆಕ್ಕ ಹಾಕಿದೆ. 6 ತಿಂಗಳದ ಲೆಕ್ಕ ಅವಲೋಕಿಸಿದಾಗ ಪ್ರತಿ ತಿಂಗಳು 10-12 ಜನ ಸಾವನ್ನಪ್ಪುತ್ತಾರೆ. ಅದರಲ್ಲಿ ಒಂದೋ, ಎರಡೋ 40 ವರ್ಷದೊಳಗಿನ ಯುವಕರಿದ್ದರೆ, 8-10 ಜನ 40 ವರ್ಷದ ಮೇಲ್ಪಟ್ಟವರು ಇರುತ್ತಾರೆ ಎಂದು ವೈದ್ಯರು ತಿಳಿಸುತ್ತಾರೆ.2 ದಿನದಲ್ಲಿ ಮೂವರ ಸಾವು: ಈ ನಡುವೆ ಹುಬ್ಬಳ್ಳಿಯಲ್ಲಿ ಬುಧವಾರ ಮಧ್ಯಾಹ್ನ 17 ವರ್ಷದ ಕಾಲೇಜ್ ವಿದ್ಯಾರ್ಥಿಯೊಬ್ಬ ಕ್ಲಾಸ್‌ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ನವಲಗುಂದ ತಾಲೂಕಲ್ಲಿ ಮಂಗಳವಾರ ಒಂದೇ ದಿನ 40 ವರ್ಷದೊಳಗಿನ ಇಬ್ಬರು ಯುವಕರು ಹೃದಯಾಘಾತದಿಂದ ಮೃತಪಟ್ಟಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಕೆಎಂಸಿಆರ್‌ಐಗೆ ಪ್ರತಿನಿತ್ಯ 60-70 ಜನ ಹೊರರೋಗಿಳಾಗಿ ಬರುತ್ತಿದ್ದಾರೆ. ಇದೀಗ ಇದರ ಪ್ರಮಾಣ ಸಣ್ಣದಾಗಿ ಹೆಚ್ಚುತ್ತಿದೆ. 100ರ ವರೆಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೊಳಪಡುವುದು ಉತ್ತಮ. ಜತೆಗೆ ಆರೋಗ್ಯದ ಕಡೆಗೂ ಗಮನಕೊಡಬೇಕು. ವ್ಯಾಯಾಮ, ಯೋಗಾಸನಗಳತ್ತ ಗಮನಕೊಡಬೇಕು ಎಂದು ಕೆಎಂಸಿಆರ್‌ಐನ ಹೃದ್ರೋಗ ತಜ್ಞರಾದ ಡಾ. ರಾಜಕುಮಾರ ಹಿರೇಮಠ ಹೇಳಿದರು.ಜಂಕ್‌ಫುಡ್, ತಂಬಾಕು ಸೇವನೆ, ಸಿಗರೇಟ್ ಸೇವನೆ, ಮದ್ಯಪಾನ ಇವು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತವೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೇ ಆಗಾಗ ಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ. ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನ ಹೃದ್ರೋಗ ತಜ್ಞರಾದ ಡಾ. ರವಿ ಜೈನಾಪುರ ಹೇಳಿದರು.