ಇವುಗಳ ಸೇವನೆ ಹೆಚ್ಚಿದರೂ ಹೃದಯಾಘಾತವಾಗುತ್ತೆ

KannadaprabhaNewsNetwork |  
Published : Jul 09, 2025, 12:24 AM ISTUpdated : Jul 09, 2025, 09:56 AM IST
low blood pressure heart attack risk truth and prevention tips

ಸಾರಾಂಶ

 ಜಿಲ್ಲೆಯಲ್ಲಿ ಸರಣಿ ಸಾವಿಗೆ ಮಾಂಸಾಹಾರದ ಅತಿಯಾದ ಸೇವನೆ, ಬೀಗರೂಟಗಳಲ್ಲಿ ಅತಿಯಾದ ರೆಡ್‌ ಮೀಟ್(ಕುರಿ, ಆಡು, ಹಂದಿ ಮಾಂಸ) ಸೇವನೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಜೀವನಶೈಲಿ ಬದಲಾಗಬೇಕು.

ಹಾಸನ: ಜಿಲ್ಲೆಯಲ್ಲಿ ಸರಣಿ ಸಾವಿಗೆ ಮಾಂಸಾಹಾರದ ಅತಿಯಾದ ಸೇವನೆ, ಬೀಗರೂಟಗಳಲ್ಲಿ ಅತಿಯಾದ ರೆಡ್‌ ಮೀಟ್(ಕುರಿ, ಆಡು, ಹಂದಿ ಮಾಂಸ) ಸೇವನೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ಜೀವನಶೈಲಿ ಬದಲಾಗಬೇಕು. ಜಿಲ್ಲೆಯಲ್ಲಿ ಬಾರ್‌ಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಮದ್ಯ ಸೇವನೆ ಕೂಡ ಹೆಚ್ಚಾಗಿದೆ. ಇದೆಲ್ಲವೂ ಹೃದಯಾಘಾತ ಹೆಚ್ಚಾಗಲು ಕಾರಣವಾಗಿದೆ ಎಂದು ಶಾಸಕರು ಹಾಗೂ ಜಿಲ್ಲಾ ಕಾಗದ ಮತ್ತು ಲೆಕ್ಕಪತ್ರ ಸಮಿತಿ ಅಧ್ಯಕ್ಷರಾದ ರೇವಣ್ಣ ಅಸಮದಾನ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ ಇ್ತತೀಚಿನ ದಿನಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿರುವ ಹೃದಯಾಘಾತದಿಂದ ಸಾವುಗಳ ಬಗ್ಗೆ ನಗರದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಸರ್ಕಾರಕ್ಕೆ ಹೆಚ್ಚು ಆದಾಯ ಬರುತ್ತದೆ ಎಂದು ಜಿಲ್ಲೆಯಲ್ಲಿ ಮದ್ಯದಂಗಡಿಗಳನ್ನು ಹೆಚ್ಚಾಗಿ ತೆರೆಯಲು ಅನುಮತಿ ನೀಡಲಾಗಿದೆ. ಹಾಗಾಗಿ ಜನರಿಗೆ ಸುಲಭವಾಗಿ ಹತ್ತಿರದಲ್ಲೇ ಮದ್ಯ ಸಿಗುತ್ತಿದ್ದು, ಕುಡಿಯುವವರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಸರ್ಕಾರದತ್ತ ಬೆಟ್ಟು ಮಾಡಿದರು.

ಜಿಲ್ಲೆಯಲ್ಲಿ ಹೃದಯ ಸಂಬಂಧ ಮೆಗಾ ಹೆಲ್ತ್ ಕ್ಯಾಂಪ್ ನಡೆಸುವ ಅವಶ್ಯಕತೆ ಇದ್ದು, ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಲಿ. ಬಡವರ ಹಿತ ಕಾಪಾಡಲಿ. ನಗರದಲ್ಲಿ ಸುಸಜ್ಜಿತವಾದ ಕಾಲೇಜು ಮತ್ತು ಆಸ್ಪತ್ರೆ ಇದ್ದು ಇದರ ಜೊತೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅಗತ್ಯ ಅನುದಾನದ ಕೊರತೆಯಿಂದ ಉದ್ಘಾಟನೆಯಾಗಿಲ್ಲ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರದಲ್ಲೇ  25 ಕೋಟಿ ಅನುದಾನ ನೀಡಿದರೆ ಜಯದೇವ ಆಸ್ಪತ್ರೆಯ ಒಂದು ಘಟಕವನ್ನು ಇಲ್ಲಿ ತೆರೆಯಬಹುದು. ಆರೋಗ್ಯ ತಪಾಸಣೆಗೆ ಬೇಕಾದ ವ್ಯವಸ್ಥೆ ಮಾಡಿ ಎಂದು ರೇವಣ್ಣ ಆಗ್ರಹಿಸಿದರು. ಕೋವಿಡ್ ಸಮಯದಲ್ಲಿ ಕೊಟ್ಟಂತೆ ವಿಶೇಷ ಅನುದಾನ ಕೊಡಿ ಎಂದು ಇದೇ ವೇಳೆ ಅಗ್ರಹಿಸಿದರು. ಹಾಸನದ ಮೆಡಿಕಲ್ ಕಾಲೇಜಿನಲ್ಲಿ ಹೃದ್ರೋಗ ವಿಭಾಗ ತೆರೆಯಬೇಕು. ಇನ್ನು ಮಾಜಿ ಪ್ರಧಾನಿ ಜಿಲ್ಲೆಯಲ್ಲಿ ಈ ಸೆಂಟರ್ ಓಪನ್ ಆಗಲಿ ಎಂದು ರೇವಣ್ಣ ಒತ್ತಾಯಿಸಿದರು. 

ನರ್ಸಿಂಗ್‌ ಹೋಮ್‌ಗಳತ್ತ 108 ಆಂಬ್ಯುಲೆನ್ಸ್‌:

ಜಿಲ್ಲೆಯ ಎಲ್ಲಾ ಆಂಬ್ಯುಲೆನ್ಸ್‌ಗಳ ಕಾರ್ಯಾಚರಣೆ ಸರಿಯಾಗಿ ನಡೆಯಬೇಕು. ಕೆಲ ೧೦೮ ಆಂಬ್ಯುಲೆನ್ಸ್‌ಗಳು ರೋಗಿಗಳನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ. ಅಂತಹ ಆಂಬ್ಯುಲೆನ್ಸ್‌ಗಳನ್ನು ಗುರುತಿಸಿ ಅಂತಹವರ ವಿರುದ್ಧ ಕ್ರಮ ಆಗಬೇಕು. ಯಾವುದೇ ರೋಗಿ ಖಾಸಗಿ ಆಸ್ಪತ್ರೆಗೆ ಹೋದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು ಕೆಲಸ ಮಾಡುತ್ತಾರೆಯೇ ಎನ್ನೋ ಬಗ್ಗೆ ಪರಿಶೀಲನೆ ನಡೆಸಬೇಕು. ಹಾಸನ ಜಿಲ್ಲೆಯಲ್ಲಿ ೪೬ ದಿನದಲ್ಲಿ ೪೧ ಜನರ ಸಾವಾಗಿದೆ. ಸಾವುಗಳು ಆಗದಂತೆ ತಡೆಯುವ ಪ್ರಯತ್ನ ಮಾಡಲು ಮುಂದಾಗಿ ಎಂದು ಸೂಚಿಸಿದರು.

ನರ್ಸಿಂಗ್‌ ಹೋಮ್‌ಗಳಲ್ಲಿ ರೋಗಿಗಳಿಂದ ವಸೂಲಿ:

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಬಾರ್‌ಗಳಿಗೆ ಸಮಯ ನಿಗದಿ ಮಾಡಲಿ. ಬೆಳಿಗ್ಗೆ ೧೦ರಿಂದ ರಾತ್ರಿ ೮ ಗಂಟೆಗೆ ಬಂದ್ ಆಗಲಿ ಎಂದು ಸಲಹೆ ನೀಡಿದರು. ಜಿಲ್ಲೆಯ ಜನ ಗಾಬರಿಯಲ್ಲಿದ್ದು, ಹೃದಯಘಾತದಿಂದ ಖಾಸಗಿ ಆಸ್ಪತ್ರೆಗೆ ನೂಕುನುಗ್ಗಲು ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಬೇಕಾಬಿಟ್ಟಿ ಹಣ ವಸೂಲಿ ಆಗ್ತಿದೆ ಎನ್ನೋ ಆರೋಪ ಇದೆ. ಹಾಸನ ಜಿಲ್ಲೆಯಲ್ಲಿ ಆಗ್ತಿರೊ ಸರಣಿ ಸಾವಿನ ತನಿಖೆಗೆ ಸರ್ಕಾರ ಸಮಿತಿ ನೇಮಕ ಮಾಡಿ ಅಧ್ಯಯನ ಮಾಡಿಸಲಿ. ಜಿಲ್ಲೆಯಲ್ಲಿ ಸರ್ಕಾರಿ ಕ್ಯಾಥ್‌ ಲಾಬ್ ತೆರೆಯಲು ಕ್ರಮ ವಹಿಸಲಿ ಎಂದರು. ಇದೇ ವೇಳೆ ಆರೋಗ್ಯ ಇಲಾಖೆಯಲ್ಲಿ ನೂರಕ್ಕೆ ೪೦ ಹುದ್ದೆಗಳು ಖಾಲಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಯದೇವ ಆಸ್ಪತ್ರೆ ಮಾದರಿಯಲ್ಲಿ ಜಿಲ್ಲೆಯಲ್ಲಿ ಕೂಡ ಒಂದು ಘಟಕ ತರಬೇಕು. ಅಲ್ಲದೆ ಹೃದಯ ತಪಾಸಣೆಗೆ ಸಂಬಂಧಿಸಿದಂತೆ ಕೆಲವು ಉಪಕರಣಗಳು ತಾಲೂಕು ಮಟ್ಟದಲ್ಲಿ ಇಲ್ಲ. ಆ ಹಿನ್ನೆಲೆಯಲ್ಲಿ ಅಂತಹ ಯಂತ್ರಗಳನ್ನ ತರಿಸುವ ನಿಟ್ಟಿನಲ್ಲಿ ನಾವು ಮುಂದಾಗುತ್ತೇವೆ. ಅದರ ಅಂದಾಜು ಪಟ್ಟಿಯನ್ನು ತಯಾರಿಸಿ ವರದಿ ನೀಡಿ ನಾವು ಸರ್ಕಾರದೊಂದಿಗೆ ಚರ್ಚೆ ಮಾಡುತ್ತೇವೆ. ಎಚ್ ಡಿ ರೇವಣ್ಣ ಅವರ ನೇತೃತ್ವದಲ್ಲಿ ಜಿಲ್ಲೆ ಎಲ್ಲಾ ಶಾಸಕರು ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೂಡುವುದಾಗಿ ಭರವಸೆ ನೀಡಿದರು.

ಶಾಸಕ ಎ. ಮಂಜು ಮಾತನಾಡಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅವುಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಆದರೆ ನಮ್ಮೊಂದಿಗೆ ಯಾರೂ ಕೂಡ ಸಂಪರ್ಕಕ್ಕೆ ಇರುವುದಿಲ್ಲ. ನೀವು ಹೋಗಿ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ನಾವು ಸರ್ಕಾರದೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಇದನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಬುದ್ದಿ ಹೇಳಿದರು.

ಶಾಸಕ ಎಚ್‌.ಪಿ. ಸ್ವರೂಪ ಮಾತನಾಡಿ, ಕೆಲ ತಾಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಅಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆಗಳಿದ್ದು ರೋಗಿಗಳೊಂದಿಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುವುದಿಲ್ಲ. ಈ ರೀತಿ ಆರೋಪಗಳು ಮತ್ತೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನಿಲ್ ಕುಮಾರ್, ಇತರರು ಉಪಸ್ಥಿತರಿದ್ದರು. 

ಹೃದಯಾಘಾತ ಪ್ರಕರಣಗಳು ಏರಿಕೆಯಾಗಿಲ್ಲ

2023-2024, 2024-2025ನೇ ಸಾಲಿನಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಏರಿಕೆಯಾಗಿಲ್ಲ. ಮೇ ತಿಂಗಳಿನಲ್ಲಿ 42 ಮಂದಿ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಚಿಕಿತ್ಸೆ ನೀಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಜೂನ್ ತಿಂಗಳಿನಲ್ಲಿ 38 ಮಂದಿ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗಿದೆ. ಯಾವುದೇ ಸಾವು ಆಗಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದವರು ಯಾರು ಆಸ್ಪತ್ರೆಗೆ ಬಂದಿಲ್ಲ. ಆದರೆ ಜನರು ಗಾಬರಿಯಿಂದ ಇಸಿಜಿ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ನಮ್ಮಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ದಾಖಲಾಗಿಲ್ಲ ಎಂದು ಹಿಮ್ಸ್ ನಿರ್ದೇಶಕ ಡಾ. ರಾಜಣ್ಣ ಸಭೆಗೆ ಮಾಹಿತಿ ನೀಡಿದರು.

PREV
Read more Articles on