ಶಿರಸಿ: ಕನ್ನಡ ನಾಡು, ನುಡಿಗಳ ಜವಾಬ್ದಾರಿ ಕೇವಲ ಸರ್ಕಾರದ್ದಲ್ಲ. ಪ್ರತಿಯೊಬ್ಬರ ಕರ್ತವ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ರಾಜ್ಯ, ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಇಷ್ಟೊಂದು ಸವಲತ್ತು ನೀಡಿದಾಗಲೂ ಇನ್ನಷ್ಟು ಸಾಧನೆ ಆಗಬೇಕಿತ್ತು ಎಂಬ ನೋವಿದೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯವಿದೆ ಎಂದ ಅವರು, ೪೭ ಹೈಸ್ಕೂಲಲ್ಲಿ ೭ ಹೈಸ್ಕೂಲು ಮಾತ್ರ ಶೇ. ೧೦೦ ಸಾಧನೆ ಮಾಡಿದೆ. ೪೦ ಶಾಲೆಗಳ ಸ್ಥಿತಿ ಏನಿದೆ ಎಂಬುದೂ ನೋಡಬೇಕಿದೆ. ಇನ್ನೂ ಹೆಚ್ಚಿನ ಕೆಲಸವನ್ನು ಶಿಕ್ಷಣ ಇಲಾಖೆ ಮಾಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಅಂಕ ತೆಗೆಯುವಲ್ಲಿ ಮಾತ್ರ ಭಾಷಾಭಿಮಾನ ಇಟ್ಟುಕೊಳ್ಳದೇ ಬದುಕಿನ ಉದ್ದಕ್ಕೂ ಇಟ್ಟುಕೊಳ್ಳಬೇಕು ಎಂದರು.ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ, ಶಿಕ್ಷಣಕ್ಕೆ ಆದ್ಯತೆ ಕೊಡುವ ಶಾಸಕ ಭೀಮಣ್ಣ ನಾಯ್ಕ ಅವರು ಭವಿಷ್ಯದ ಸಮಾಜಕ್ಕೆ ತುಡಿಯುತ್ತಾರೆ. ಸಾಹಿತ್ಯ ಪರಿಷತ್ ಕನ್ನಡದ ಸಾಕ್ಷಿಪ್ರಜ್ಞೆಯ ಸಂಸ್ಥೆ. ಅಂಥ ಸಂಸ್ಥೆ ಅಭಿನಂದಿಸುತ್ತಿದೆ ಎಂದರು.
ತಾಲೂಕು ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದರು.ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ ಮಾತನಾಡಿ, ಕನ್ನಡದಿಂದ ಇಂಗ್ಲಿಷ್ ಕಡೆ ವಾಲುತ್ತಿರುವ ವೇಳೆ ಕನ್ನಡದ ಶೇ. ೧೦೦ರ ಸಾಧನೆ ಸಣ್ಣದಲ್ಲ. ಇಂಗ್ಲಿಷ್ ಮೋಹ ಹೆಚ್ಚಿದರೆ ಮೊದಲ ಏಟು ಕನ್ನಡಕ್ಕೆ ಆಗುತ್ತದೆ. ಭಾಷಾ, ಇತರ ವಿಷಯಗಳ ಬೋಧಕರು ಕಳೆದ ವರ್ಷದ ಸಾಧನೆ ಮೀರುವಂತೆ ಇನ್ನಷ್ಟು ಶ್ರಮಿಸಬೇಕು ಎಂದರು.
ಡಿಡಿಪಿಐ ಡಿ.ಆರ್. ನಾಯ್ಕ, ಸ್ಕೋಡ್‌ವೆಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಬಿಇಒ ನಾಗರಾಜ ನಾಯ್ಕ, ಸುರೇಶ ಪಟಗಾರ, ವಾಸುದೇವ ಶಾನಭಾಗ ಇದ್ದರು. ವಿ.ಆರ್. ಹೆಗಡೆ ಸ್ವಾಗತಿಸಿದರು. ಶ್ರೀಕೃಷ್ಣ ಪದಕಿ ನಿರ್ವಹಿಸಿದರು. ಇದೇ ವೇಳೆ ದಶರೂಪಕಗಳ ದಶಾವತಾರ ಕೃತಿ ಬರೆದು ಯಕ್ಷ ಮಂಗಲ ಪ್ರಶಸ್ತಿ ಪಡೆದ ಪತ್ರಕರ್ತ ಅಶೋಕ ಹಾಸ್ಯಗಾರ ಅವರನ್ನು ಕಸಾಪದಿಂದ ಗೌರವಿಸಲಾಯಿತು.