ಕೈಗಾರಿಕೆ ತ್ಯಾಜ್ಯದಿಂದ ಹೃದಯ ಸಂಬಂಧಿ ಸಮಸ್ಯೆ

KannadaprabhaNewsNetwork | Published : Mar 19, 2025 12:33 AM

ಸಾರಾಂಶ

2022ರಲ್ಲಿ 17 ಗ್ರಾಮಗಳ 5991 ಜನರ ಸಮೀಕ್ಷೆ ಮಾಡಿದ ವೇಳೆ ದಾಖಲಾದ ಅಂಶಗಳು ಇದಾಗಿದ್ದು, ಈ ವ್ಯಾಪ್ತಿಯಲ್ಲಿ 41,402 ಜನರ ಆರೋಗ್ಯ ತಪಾಸಣೆಯಾಗಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸುಮಾರು 40 ಸಾವಿರ ಜನಸಂಖ್ಯೆಯಲ್ಲಿ ಬರೋಬ್ಬರಿ 400 ಜನರು ಹೃದಯ ಸಮಸ್ಯೆ ಹಾಗೂ 800 ಜನರು ಟಿಬಿಯಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕೊಪ್ಪಳ ಸುತ್ತಮುತ್ತಲೂ ಇರುವ ಕಾರ್ಖಾನೆಗಳ ವ್ಯಾಪ್ತಿಯ 17 ಗ್ರಾಮಗಳ ಶೇ. 1ರಷ್ಟು ಜನರು ಹೃದಯ ಸಂಬಂಧಿತ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ. 3ರಷ್ಟು ಟಿಬಿ, 2ರಷ್ಟು ಅಸ್ತಮಾ, 1ರಷ್ಟು ಜನರು ಚರ್ಮ ರೋಗದಿಂದ ಬಳಲುತ್ತಿದ್ದಾರೆ.

ಇದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಕೇಂದ್ರ ಸಚಿವಾಲಯದ ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವ ಅಘಾತಕಾರಿ ಅಂಶಗಳು. 2022ರಲ್ಲಿ 17 ಗ್ರಾಮಗಳ 5991 ಜನರ ಸಮೀಕ್ಷೆ ಮಾಡಿದ ವೇಳೆ ದಾಖಲಾದ ಅಂಶಗಳು ಇದಾಗಿದ್ದು, ಈ ವ್ಯಾಪ್ತಿಯಲ್ಲಿ 41,402 ಜನರ ಆರೋಗ್ಯ ತಪಾಸಣೆಯಾಗಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸುಮಾರು 40 ಸಾವಿರ ಜನಸಂಖ್ಯೆಯಲ್ಲಿ ಬರೋಬ್ಬರಿ 400 ಜನರು ಹೃದಯ ಸಮಸ್ಯೆ ಹಾಗೂ 800 ಜನರು ಟಿಬಿಯಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದೆ.

ಭಾರತವನ್ನು 2025ರ ಅಂತ್ಯಕ್ಕೆ ಟಿಬಿ ಮುಕ್ತ ಮಾಡಲು ಆರೋಗ್ಯ ಇಲಾಖೆ, ಸಂಘ-ಸಂಸ್ಥೆಗಳು ಶ್ರಮಿಸುತ್ತಿವೆ. ಇತ್ತ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರವೇ ಜಿಲ್ಲೆಯಲ್ಲಿ ಸುಮಾರು 900 ಟಿಬಿ ರೋಗಿಗಳು ಇದ್ದು, ಇದರಲ್ಲಿ ಬಹುತೇಕರು ಕಾರ್ಖಾನೆಗಳು ಇರುವ ವ್ಯಾಪ್ತಿಯಲ್ಲಿಯೇ ವಾಸಿಸುತ್ತಿದ್ದಾರೆ. ಈಗ ಕಾರ್ಖಾನೆ ವ್ಯಾಪ್ತಿಯ 17 ಗ್ರಾಮಗಳ ಜನರ ಆರೋಗ್ಯ ತಪಾಸಣೆ ನಡೆಸಿದರೇ ಸರಾಸರಿ 800 ಜನರು ಟಿಬಿಯಿಂದ ಬಳಲುವವರು ಸಿಗುತ್ತಾರೆಂಬದು ಗಮನಾರ್ಹ ಸಂಗತಿ.

ಇದು, ಕೇವಲ ಸರ್ವೇಯಲ್ಲಿ ಬಂದಿರುವ ಅಂಕಿ ಅಂಶಗಳು ಮಾತ್ರ. ಈ ಗ್ರಾಮ ವ್ಯಾಪ್ತಿಯಲ್ಲಿ ಗರ್ಭಪಾತ, ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಈ ಗ್ರಾಮಗಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ಈಗ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಸಮಿತಿ ಅಘಾತಕಾರಿ ಅಂಕಿ ಸಂಖ್ಯೆ ನೀಡಿರುವುದರಿಂದ ರಾಜ್ಯ ಸರ್ಕಾರ ಸಮಿತಿಯ ಶಿಫಾರಸಿನಂತೆ ಕಾರ್ಖಾನೆ ಸುತ್ತಲ ಗ್ರಾಮಗಳಲ್ಲಿ ತಕ್ಷಣ ಆರೋಗ್ಯ ಇಲಾಖೆ ಮೂಲಕ ತುರ್ತಾಗಿ ಆರೋಗ್ಯ ತಪಾಸಣೆ ನಡೆಸಬೇಕಾಗಿದೆ.

ಈ ಗ್ರಾಮಗಳು ಧೂಳು, ವಾಯುಮಾಲಿನ್ಯ ಸಮಸ್ಯೆ ಎದುರಿಸುತ್ತಿರುವ ನಡುವೆಯೇ ಈ ವರದಿಯು ಜನರನ್ನು ನಿದ್ರೆಗೆಡಿಸಿದೆ. ಅತ್ತ ಕೃಷಿಗೂ ಹೊಡೆತ ಬಿದ್ದಿದ್ದು ಜೀವನ ನಿರ್ವಹಿಸಲು ಪರದಾಡುತ್ತಿದ್ದಾರೆ. ಈ ಎಲ್ಲ ಕಾರ್ಖಾನೆಗಳಿಂದಾಗಿಯೇ ಹೊಸ ಕಾರ್ಖಾನೆ ಸ್ಥಾಪನೆ ಹಾಗೂ ಇರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸುತ್ತಿದ್ದಾರೆಂದು ಸಮಿತಿಯೂ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸಮಗ್ರ ಅಧ್ಯಯನ ಅಗತ್ಯ:

ಕಾರ್ಖಾನೆಗಳಿಂದ ಆಗಿರುವ ಪರಿಸರ ಹಾನಿ ನಿರ್ವಹಣೆ ಹಾಗೂ ಸಮಸ್ಯೆ ಬಗ್ಗೆ ತಿಳಿಯಲು ಇನ್ನಷ್ಟು ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿಗಾ ಅಗತ್ಯ:

ಇನ್ನಾದರೂ ಕೈಗಾರಿಕೆಗಳ ಮೇಲೆ ನಿಗಾ ಇಡುವುದು ಮತ್ತು ಹೊಸ ಕಾರ್ಖಾನೆ ಬಾರದಂತೆ ಕ್ರಮವಹಿಸುವ ಕುರಿತು ಕೇಂದ್ರ ಸರ್ಕಾರದ ಸಚಿವಾಲಯದ ಸಮಿತಿಯೇ ವರದಿ ಮಾಡಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ದಿಸೆಯಲ್ಲಿ ಕ್ರಮವಹಿಸುವ ಅಗತ್ಯವಿದೆ. ಈಗ ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿಯೇ ಇಂಥದ್ದೊಂದು ವರದಿ ಬಂದಿರುವುದು ಜನರನ್ನು ಚಿಂತೆಗೀಡು ಮಾಡಿದೆ. ಹೊಸ ಕಾರ್ಖಾನೆ ಸ್ಥಾಪಿಸುವ ಮುನ್ನವೇ ಸರ್ಕಾರ ಜನರ ಜೀವ ಉಳಿಸಬೇಕಿದೆ.

Share this article