ಮಣ್ಣಿನ ಮಡಕೆಗೆ ಬರದ ಬಿಸಿ

KannadaprabhaNewsNetwork |  
Published : Mar 18, 2024, 01:53 AM IST
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಬಳಿಯ ಶ್ರೀ ಸಾಯಿಬಾಬಾ ಮಂದಿರದ ಎದುರು ಬಗೆಬಗೆಯ ಮಣ್ಣಿನ ಮಡಕೆ ಮಾರಾಟಕ್ಕೆ ಇರಿಸಿರುವುದು. | Kannada Prabha

ಸಾರಾಂಶ

ಕಳೆದ 2-3 ವರ್ಷಗಳಿಂದ ಅದರಲ್ಲೂ ಕೊರೋನಾದ ನಂತರ ಇವುಗಳನ್ನು ಕೇಳುವವರೆ ಇಲ್ಲದಂತಾಗಿದೆ. ಮಾಡಿದ ಖರ್ಚು ಸಹ ಬಾರದ ಸ್ಥಿತಿಯಿಂದಾಗಿ ಮಡಕೆ ತಯಾರಕರು ಈ ವೃತ್ತಿಯಿಂದಲೇ ವಿಮುಖರಾಗುವ ಸ್ಥಿತಿ ಎದುರಾಗಿದೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಡವರ ಫ್ರಿಜ್‌ ಎಂದೇ ಹೆಸರು ಪಡೆದ, ಬೇಸಿಗೆ ಬಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಬಹುಬೇಡಿಕೆ ಪಡೆದಿದ್ದ ಮಣ್ಣಿನ ಮಡಕೆಗಳಿಗೆ ಈಗ ಬರದ ಬಿಸಿ ತಾಗಿದೆ. ಕೋವಿಡ್‌ ನಂತರದಿಂದ ಕುಸಿತ ಕಂಡಿದ್ದ ಮಡಕೆ ವ್ಯಾಪಾರ ಇಂದಿಗೂ ಮಾರಾಟವೆಂಬ ಮೆಟ್ಟಿಲು ಏರಲು ನಲಗುತ್ತಿದೆ.

ಬೇಸಿಗೆ ಕಾಲ ಬಂತೆಂದರೆ ಸಾಕು, ಈ ಮಣ್ಣಿನ ಮಡಕೆಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಮೊದಲು ಮಾರಾಟ ಸ್ಥಳವನ್ನಷ್ಟೇ ಅಲ್ಲ ತಯಾರಿಸುವ ಸ್ಥಳಗಳಿಗೆ ತೆರಳಿ ಮಣ್ಣಿನ ಮಡಕೆ ಕೊಂಡುಕೊಳ್ಳುತ್ತಿದ್ದರು. ಆದರೆ, ಕಳೆದ 2-3 ವರ್ಷಗಳಿಂದ ಅದರಲ್ಲೂ ಕೊರೋನಾದ ನಂತರ ಇವುಗಳನ್ನು ಕೇಳುವವರೆ ಇಲ್ಲದಂತಾಗಿದೆ. ಮಾಡಿದ ಖರ್ಚು ಸಹ ಬಾರದ ಸ್ಥಿತಿಯಿಂದಾಗಿ ಮಡಕೆ ತಯಾರಕರು ಈ ವೃತ್ತಿಯಿಂದಲೇ ವಿಮುಖರಾಗುವ ಸ್ಥಿತಿ ಎದುರಾಗಿದೆ.

ಬಣ್ಣಬಣ್ಣದ ಮಡಕೆ ಕೇಳುವರಿಲ್ಲ

ಬಗೆಬಗೆಯ ಬಣ್ಣಬಣ್ಣಗಳಿಂದ ಅಲಂಕೃತಗೊಂಡ ಮಣ್ಣಿನ ಮಡಕೆಗಳು ಹುಬ್ಬಳ್ಳಿ-ಧಾರವಾಡ ಮಹಾನಗರದ ಹಲವು ಕಡೆಗಳಲ್ಲಿ ಪುಟ್‌ಪಾತ್‌ ಮೇಲೆ ಮಾರಾಟಕ್ಕೆ ಇರಿಸಿದ್ದಾರೆ. ಇಲ್ಲಿನ ರಾಣಿ ಚೆನ್ನಮ್ಮ ವೃತ್ತದ ಬಳಿಯ ಶ್ರೀ ಸಾಯಿಮಂದಿರದ ಎದುರು, ಗೋಕುಲ ರಸ್ತೆ, ಉಣಕಲ್ಲ ಕೆರೆಯ ಪಕ್ಕ, ನವನಗರ, ಗೋಪನಕೊಪ್ಪ ಧಾರವಾಡದ ಜುಬ್ಲಿ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಬಗೆಬಗೆಯ ಬಣ್ಣಗಳಿಂದ ಶೃಂಗರಿಸಿರುವ ಬಗೆಬಗೆಯ ಅಳತೆಯಲ್ಲಿ ಮಣ್ಣಿನ ಮಡಕೆಗಳ ಮಾರಾಟಕ್ಕಿರಿಸಲಾಗಿದೆ.

₹150 ರಿಂದ ₹2000

3 ಲೀಟರ್‌ನಿಂದ ಹಿಡಿದು 50 ಲೀಟರ್‌ ವರೆಗೆ ಬಗೆಬಗೆಯ ಅಳತೆಯಲ್ಲಿ ಮಣ್ಣಿನ ಮಡಕೆಗಳು ಮಾರಾಟಕ್ಕೆ ದೊರೆಯುತ್ತಿವೆ. 3 ಲೀಟರ್‌ ಅಳತೆಯ ಮಣ್ಣಿನ ಮಡಕೆಗೆ ₹150ರಿಂದ ₹250, 8 ಲೀಟರ್‌ ಸಾಮರ್ಥ್ಯದ ಮಡಕೆಗೆ ₹300ರಿಂದ ₹450, 15 ಲೀಟರ್‌ ಸಾಮರ್ಥ್ಯದ ಮಡಕೆಗೆ ₹ 600ರಿಂದ ₹ 700, 25 ಲೀಟರ್‌ ಮಡಕೆಗೆ ₹ 800ರಿಂದ ₹ 950, 50 ಲೀಟರ್‌ ಸಾಮರ್ಥ್ಯದ ಮಡಕೆಗೆ ₹ 1200ರಿಂದ ಹಿಡಿದು ₹ 1500ರ ವರೆಗೆ ಇನ್ನು ಬಗೆಬಗೆಯ ಚಿತ್ತಾರ ಹೊಂದಿದ ಮಡಕೆಗಳು ₹2 ಸಾವಿರದ ವರೆಗೂ ಲಭ್ಯವಿವೆ.

ಮಾರಾಟವೇ ಇಲ್ಲ

ಕಳೆದ ಎರಡ್ಮೂರು ವರ್ಷಗಳಿಂದ ಮಣ್ಣಿನ ಮಡಕೆಗಳ ಮಾರಾಟವಿಲ್ಲದೇ ಸಂಕಷ್ಟ ಅನುಭವಿಸುವಂತಾಗಿದೆ. ಬೇಸಿಗೆ ಕಾಲದಲ್ಲಿ ಮಾತ್ರ ಹೆಚ್ಚಾಗಿ ಮಾರಾಟವಾಗುತ್ತಿದ್ದ ಇವುಗಳನ್ನು ಈಗ ಸುಡು ಬೇಸಿಗೆಯಲ್ಲೂ ಕೊಂಡುಕೊಳ್ಳಲು ಸಾರ್ವಜನಿಕರು ಧೈರ್ಯ ಮಾಡುತ್ತಿಲ್ಲ.

ಬೆಲೆ ಏರಿಕೆಯೂ ಕಾರಣ

ದಿಢೀರ್‌ನೆ ಮಡಕೆ ವ್ಯಾಪಾರ ಕ್ಷೀಣಿಸಲು ಬೆಲೆ ಏರಿಕೆಯೂ ಪ್ರಮುಖ ಕಾರಣ ಎಂಬುದು ಗ್ರಾಹಕರ ಅಭಿಪ್ರಾಯವಾಗಿದೆ. ಮೊದಲು ₹200ರಿಂದ ₹300ಕ್ಕೆ 25 ಲೀಟರ್‌ ಹಾಗೂ ₹400ರಿಂದ ₹500ರೊಳಗೆ 50 ಲೀಟರ್‌ ಸಾಮರ್ಥ್ಯದ ಮಣ್ಣಿನ ಮಡಕೆಗಳು ದೊರೆಯುತ್ತಿದ್ದವು. ಆದರೆ, ಈಗ ಇದರ ಬೆಲೆ ದುಪ್ಪಟ್ಟಾಗಿದೆ. ಇದರಿಂದಾಗಿಯೂ ಮಾರಾಟದಲ್ಲಿ ಇಳಿಕೆಯಾಗಿದೆ.

ಕಣ್ಣೀರು

ನಮ್‌ ಬಾಳೆನಾ ಕಣ್ಣೀರಾಗ ಕೈತೊಳೆಯುವಂಗಾಗೈತ್ರಿ. ಎರಡ್ಮೂರು ವರ್ಷದಿಂದ ವ್ಯಾಪಾರನಾ ಇಲ್ರಿ... ಜನ ಬರ್ತಾರ ಮಡಿಕಿ ಕೇಳ್ತಾರ, ರೇಟ್‌ ಹೇಳಿದ್‌ ಮ್ಯಾಲೆ ಮೂಗು ಮುರುದು ಹೊಕ್ಕಾರ. ಹಿಂಗಾದ್ರ ಹ್ಯಾಂಗ್ರಿ ನಮ್ಮ ಜೀವನ ಅನ್ನುಹಾಂಗ ಆಗೈತ್ರಿ.ಹನುಮವ್ವ ಕಮ್ಮಾರ, ಮಡಕೆ ವ್ಯಾಪಾರ ಮಾಡುತ್ತಿರುವ ವೃದ್ಧೆಕೇಳುವವರು ಇಲ್ಲ

ಕಳೆದ 25 ವರ್ಷಗಳಿಂದ ಮಡಕೆ ಮಾರಾಟವನ್ನೇ ನನ್ನ ವೃತ್ತಿಯಾಗಿಸಿಕೊಂಡಿದ್ದೇನೆ. ಇಷ್ಟು ವರ್ಷಗಳಲ್ಲಿ ಕಳೆದ 2-3 ವರ್ಷಗಳಿಂದ ಮಡಕೆ ಖರೀದಿಸುವವರೇ ಇಲ್ಲ. ಹೀಗೆ ಆದರೆ ಈ ವೃತ್ತಿಯನ್ನೇ ಕೈಬಿಟ್ಟು ಬೇರೆ ಉದ್ಯೋಗ ನೋಡಿಕೊಳ್ಳಬೇಕು.

ದೇವೇಂದ್ರಪ್ಪ ಹುಬ್ಬಳ್ಳಿ ಸ್ಥಳೀಯ ಮಣ್ಣಿನ ಮಡಕೆಗಳ ವ್ಯಾಪಾರಸ್ಥಖರೀದಿಸುತ್ತಿಲ್ಲ

ಮಣ್ಣಿನ ಮಡಕೆಯಲ್ಲಿನ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈಗ ಜನರು ಹೆಚ್ಚಾಗಿ ಫ್ರಿಡ್ಜ್‌ಗಳ ಮೊರೆ ಹೋಗಿರುವುದರಿಂದ ಈ ಮಣ್ಣಿನ ಮಡಕೆ ಖರೀದಿಸುವವರೇ ಇಲ್ಲ. ಬೆಲೆ ಏರಿಕೆಯಿಂದಾಗಿ ಕೆಲವರು ಮಡಕೆ ಖರೀದಿಗೆ ಮುಂದಾಗುತ್ತಿಲ್ಲ.

ಸಂಗೀತಾ, ಶಾಂತಾ, ಗ್ರಾಹಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ